Advertisement
ಕಾಡಾನೆಗಳು ತೋಟಗಳಿಗೆ ಧಾಳಿ ಇಡುತ್ತ ಕೃಷಿ ಫಸಲು ಹಾಳು ಮಾಡುತ್ತಿರುವುದರಿಂದ ತೋಟದ ಬೆಳೆ ಬೆಳೆಗಾರರ ಕೈಗೆ ಸಿಗುತ್ತಿಲ್ಲ. ಹಗಲಿಡಿ ಕಾಡಿನ ಅಂಚಿನ ಸ್ಥಳಗಳಲ್ಲಿ ಅಥವಾ ತೋಡಿನಂತಹ ನೀರಿನಾಶ್ರಯವಿರುವ ತಣ್ಣನೆಯ ಸ್ಥಳದಲ್ಲಿ ಬೀಡು ಬಿಟ್ಟಿರುವ ಆನೆಗಳು, ಕತ್ತಲಾವರಿಸಿದೊಡನೆ ತೋಟಕ್ಕೆ ಲಗ್ಗೆ ಇಡುತ್ತಿವೆ. ರಾತ್ರಿಯಿಡೀ ಫಸಲನ್ನು ತಿಂದು, ತುಳಿದು ಹಾಳು ಮಾಡುವ ಆನೆಗಳು, ಬೆಳಗಾಗುವ ಹೊತ್ತಿಗೆ ತೋಟವನ್ನು ಮೈದಾನವಾಗಿ ಪರಿವರ್ತಿಸುತ್ತವೆ. ಬಾಳೆ, ತರಕಾರಿ, ಅಡಿಕೆ, ತೆಂಗು ಇತ್ಯಾದಿ ಬೆಳೆಗಳು ಆನೆಗಳ ಉಪಟಳಕ್ಕೆ ಅಡ್ಡಡ್ಡ ಮಲಗುತ್ತಿವೆ.
ಕೃಷಿಕರು ಜೋಪಾನ ಮಾಡಿದ ಗಿಡ – ಮರಗಳು ಕಣ್ಣೆದುರೇ ಧರಾಶಾಹಿ ಆಗುತ್ತಿವೆ. ಫಸಲು ನಾಶ ಆಗುತ್ತಿರುವುದನ್ನು ಕಂಡು ಏನೂ ಮಾಡಲಾಗದ ಸ್ಥಿತಿ ಇದೆ. ಬೆಳೆ ನಾಶಕ್ಕೆ ಸೂಕ್ತ ಪರಿಹಾರವೂ ಮರೀಚಿಕೆ ಆಗುತ್ತಿದೆ. ಸಾವು – ನೋವು
ಕಾಡಾನೆಗಳಿಂದ ಜೀವ ಭಯವೂ ಇದೆ. ಕೆಲ ದಿನಗಳ ಹಿಂದೆಯಷ್ಟೆ ಕೊಂಬಾರು ಬಳಿ ರೈಲ್ವೆ ಕಾರ್ಮಿಕನನ್ನು ಆನೆಯೊಂದು ತುಳಿದು ಕೊಂದು ಹಾಕಿತ್ತು. ಇತರ ಇಬ್ಬರಿಗೂ ಘಟನೆಯಲ್ಲಿ ಗಾಯಗಳಾಗಿದ್ದವು. ಎರಡು ವರ್ಷ ಗಳ ಹಿಂದೆ ದೇವಚಳ್ಳ ಗ್ರಾಮದ ಹೊಸೋಲಿ ಎಂಬಲ್ಲಿ ರಾಮ ಭಟ್ ಅವರನ್ನು ಆನೆ ತೋಟದಲ್ಲೇ ತುಳಿದು ಕೊಂದು ಹಾಕಿತ್ತು. ರಾತ್ರಿ ತೋಟದಲ್ಲಿ ಅಳವಡಿಸಿದ ನೀರಾವರಿ ಜೆಟ್ ಬದಲಾಯಿಸಲು ತೆರಳಿದ್ದ ವೇಳೆ ಘಟನೆ ನಡೆದಿತ್ತು. ಇಷ್ಟೆಲ್ಲ ಆದರೂ ಆನೆ ಹಾವಳಿಗೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.
Related Articles
ಇತ್ತೀಚೆಗೆ ಕಾಡಾನೆಗಳು ಹಗಲಲ್ಲೂ ದರ್ಶನ ನೀಡುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಆನೆಗಳನ್ನು ಓಡಿಸಲು ಕೃಷಿಕರು ನಾನಾ ತಂತ್ರ ಅನುಸರಿಸುತ್ತಿದ್ದಾರೆ. ಮನೆ, ಕೃಷಿ ಭೂಮಿ ಹಾಗೂ ತೋಟಗಳಲ್ಲಿ ದೀಪ ಉರಿಸಿಟ್ಟು ಓಡಿಸುವ ತಂತ್ರ ಮಾಡಲಾಗುತ್ತಿದೆ. ಪಟಾಕಿ ಶಬ್ದಕ್ಕೂ ಅವು ಅಂಜದೆ ಕದಲದೆ ನಿಲ್ಲುತ್ತವೆ. ಬೆದರಿಕೆ ತಂತ್ರಗಳಿಗೆ ಕಾಡಾನೆಗಳು ಮಣಿಯುತ್ತಲೇ ಇಲ್ಲ. ಒಂಟಿ ಸಲಗ ಕಾಣಿಸಿಕೊಳ್ಳುವ ಜತೆಗೆ, ಹಿಂಡಾಗಿಯೂ ಬರುತ್ತಿವೆ. ದಾರಿಯಲ್ಲಿ ಶಾಲೆ ಮಕ್ಕಳು, ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಓಡು ನಡಿಗೆಯಲ್ಲಿ ಸಾಗುತ್ತಾರೆ.
Advertisement
ಕೃಷಿ ಅಸಾಧ್ಯರಾತ್ರಿ ಕೃಷಿ ತೋಟಕ್ಕೆ ತೆರಳುವಂತಿಲ್ಲ. ನೀರುಣಿಸುವ ಜೆಟ್ ಬದಲಾಯಿಸುವುದೂ ಅಪಾಯಕಾರಿ ಆಗುತ್ತಿದೆ. ಪ್ರಕಾಶಮಾನ ವಾದ ಟಾರ್ಚ್ ಹಿಡಿದು ಕೃಷಿ ಚಟುವ ಟಿಕೆ ಮಾಡಿದರೂ ಆನೆ ಸದ್ದಿಲ್ಲದೆ ದಾಳಿ ಮಾಡು ತ್ತಿದೆ ಎಂದು ಕೃಷಿಕರು ಹೇಳುತ್ತಿದ್ದಾರೆ. ಮುಖ್ಯ ರಸ್ತೆಯಲ್ಲೆ ಸಂಚಾರ
ಮುಖ್ಯ ರಸ್ತೆಯಲ್ಲೆ ಕಾಡಾನೆಗಳು ಸಂಚಾರ ಆರಂಭಿಸಿವೆ. ಮೂರು ದಿನಗಳ ಹಿಂದೆ ಹರಿಹರ-ಕೊಲ್ಲಮೊಗ್ರು ರಸ್ತೆಯಲ್ಲಿ ಕಜ್ಜೋಡಿ ಕ್ರಾಸ್‌ನಿಂದ ಕುಲುಮೆ ಚಡವು ತನಕ ಬೆಳಗಿನ ಜಾವ ಸಂಚಾರ ನಡೆಸಿದೆ. ಅದು ಹರಿಹರ ಮುಖ್ಯ ಪೇಟೆಯಲ್ಲೆ ಹೋಗಿದ್ದು ವಿಶೇಷ. ಇದಕ್ಕಿಂತ ಎರಡು ದಿನ ಮೊದಲು ಕಟ್ಟ ಕ್ರಾಸ್ ಬಳಿ ಬೈಕಿನಲ್ಲಿ ತೆರಳುತ್ತಿದ್ದ ಸವಾರನಿಗೆ ನಡು ರಸ್ತೆಯಲ್ಲೇ ಆನೆ ಅಡ್ಡ ಬಂದಿದೆ. ಗಾಬರಿಯಿಂದ ಬಿದ್ದು ಆತ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶುಕ್ರವಾರ ಕೆದಿಲ ಬಳಿ ಹಲವು ತೋಟಗಳಿಗೆ ಕಾಡಾನೆ ಲಗ್ಗೆಯಿಟ್ಟು ಬೆಳೆ ನಾಶ ಮಾಡಿದೆ. ಶಾಶ್ವತ ಪರಿಹಾರ ಬೇಕು
ನಮ್ಮ ಮನೆಯ ಸುತ್ತಮುತ್ತಲ ಪರಿಸರದಲ್ಲಿ ಬಹುತೇಕ ದಿನಗಳು ಕಾಡಾನೆಗಳು ಸಂಚರಿಸುತ್ತಿರುತ್ತವೆ. ಗುರುವಾರ ಬೆಳಗ್ಗಿನ ಜಾವ ತೋಟಕ್ಕೆ ನುಗ್ಗಿದ ಕಾಡಾನೆ ಕೃಷಿ ನಾಶ ಮಾಡಿದೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಹುಡುಕದಿದ್ದರೆ ಗುಳೆ ಹೋಗಬೇಕಾಗುವ ಸ್ಥಿತಿ ಬರಬಹುದು.
– ಶಶಿಧರ ಕೆದಿಲ, ಕೃಷಿಕ ಗಮನದಲ್ಲಿದೆ
ಕಾಡಾನೆ ತೀವ್ರ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ತನ್ನ ಗಮನಕ್ಕೆ ಬಂದ ತತ್‌ಕ್ಷಣ ಸಿಬಂದಿ ಕಳುಹಿಸಿಕೊಡುತ್ತಿದ್ದೇನೆ. ರಾತ್ರಿ ಗಸ್ತಿಗೆ ಸಿಬಂದಿ ನಿಯೋಜಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆ. ಈ ಕುರಿತು ನಿಗಾವಹಿಸುತ್ತೇವೆ.
– ತ್ಯಾಗರಾಜ್, ಆರ್‌ಎಫ್ಒ
-ಸುಬ್ರಹ್ಮಣ್ಯ ಅರಣ್ಯ ವಿಭಾಗ ಬಾಲಕೃಷ್ಣ ಭೀಮಗುಳಿ