ಉಡುಪಿ: ಉಡುಪಿಯ ವಿವಿಧೆಡೆ ರವಿವಾರ ಸ್ಕಂದ ಪಂಚಮಿ ನಡೆದರೆ, ಸೋಮವಾರ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಜರುಗಿತು. ವಿವಿಧ ಸುಬ್ರಹ್ಮಣ್ಯ, ನಾಗ ಸನ್ನಿಧಿಯಲ್ಲಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿವಿಧೆಡೆ ವಾಹನಗಳ ದಟ್ಟಣೆಯಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗಿತ್ತು.
ಶ್ರೀಕೃಷ್ಣಮಠದಲ್ಲಿ ವಾದಿರಾಜ ಸ್ವಾಮಿಗಳಿಂದ ಪ್ರತಿಷ್ಠಾಪನೆಗೊಂಡ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಪರ್ಯಾಯ ಶ್ರೀಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ರಥಬೀದಿಯಲ್ಲಿ ಬೆಳಗ್ಗೆ ನಡೆದ ರಥೋತ್ಸವದಲ್ಲಿ ಪಲಿಮಾರು ಉಭಯ ಸ್ವಾಮೀಜಿಯವರು, ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಮುಚ್ಚಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಪೂಜೆಗಳು ನಡೆದ ಬಳಿಕ ರಥಾರೋಹಣ ನಡೆಯಿತು. ದೇವರ ಬಲಿಮೂರ್ತಿಯನ್ನು ಹೊತ್ತ ದರ್ಶನ ಸೇವೆಯೂ ಜರಗಿತು. ಸಂಜೆ ರಥೋತ್ಸವ ನಡೆದು ರಥಾವರೋಹಣ ನಡೆಯಿತು. ಆಡಳಿತೆದಾರರಾದ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ರಥಾರೂಢ ದೇವರಿಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಎಡೆ ಸ್ನಾನ ನಡೆಯಿತು. ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.
ಪುತ್ತೂರು ಸಮೀಪದ ಅರಿತೋಡು ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪಾರಾಯಣ, ಮಹಾಪೂಜೆ ನಡೆಯಿತು. ಇದೇ ವೇಳೆ ರಥೋತ್ಸವ ಜರುಗಿತು. ಶ್ರೀಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಪಾಲ್ಗೊಂಡು ಪೂಜೆ ಸಲ್ಲಿಸಿದರು. ಮಧ್ಯಾಹ್ನ ದೊಡ್ಡ ಸಂಖ್ಯೆಯ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಪೆರಂಪಳ್ಳಿ ಸಮೀಪದ ತಾಂಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿà ಅಂಗವಾಗಿ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಗ್ರಿ ವಾಸುಕೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.