Advertisement

ಸುಬ್ರಹ್ಮಣ್ಯ ದೇಗುಲಗಳಲ್ಲಿ ನಾಳೆ ಚಂಪಾ ಷಷ್ಠಿ ಸಂಭ್ರಮ

11:13 PM Nov 30, 2019 | Sriram |

ಷಷ್ಠಿಯಂದು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಲ್ಪಡುತ್ತದೆ. ಆ ದಿನ ದೇವರ ಪ್ರೀತ್ಯರ್ಥವಾಗಿ ಉಪವಾಸವನ್ನು ಕೈಗೊಳ್ಳುತ್ತಾರೆ. ಮೊದಲಿಗೆ ಚಂಪಾ (ಹಿರಿ) ಷಷ್ಠಿಯಾದರೆ, ಅನಂತರದ ತಿಂಗಳಲ್ಲಿ ಕಿರು ಷಷ್ಠಿಯನ್ನು ಆಚರಿಸಲಾಗುತ್ತಿದೆ. ಸುಬ್ರಹ್ಮಣ್ಯ ದೇಗುಲಗಳಲ್ಲಿ ಡಿ.2ರಂದು ಚಂಪಾಷಷ್ಠಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆ ದಿನ ವಿಶೇಷ ಪೂಜೆ, ಷಣ್ಮುಖ ದೇವರ ಅಧಿದೇವತೆಯಾದ ನಾಗನ ವಿಗ್ರಹವನ್ನು ಅಶ್ವತ್ಥ ಕಟ್ಟೆಯಲ್ಲಿಟ್ಟು, ದೇವರನ್ನು ಆವಾಹನೆ ಮಾಡಿ, ಹಾಲೆರೆದು, ಅಭಿಷೇಕ ಮಾಡಿ, ಪಾಯಸ, ನೈವೇದ್ಯ ಅರ್ಪಿಸಲಾಗುತ್ತದೆ. ಕೆಲವೆಡೆಗಳಲ್ಲಿ ದೇವರಿಗೆ ಉತ್ಸವ ಕೂಡ ನಡೆಯುತ್ತದೆ. ಇಲ್ಲಿನ ಸುಬ್ರಹ್ಮಣ್ಯ ದೇಗುಲಗಳಲ್ಲಿ ಷಷ್ಠಿಯಂದು ನಡೆಯುವ ಆಚರಣೆ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

Advertisement

ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ದೇವರ ಗುಡಿ
ಉಡುಪಿ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಷಷ್ಠಿà ಮಹೋತ್ಸವ ನಡೆಯುತ್ತಿದೆ. ಇದನ್ನು ಸುಬ್ರಾಯ ದೇವರ ಗುಡಿ ಎಂದೂ ಕರೆಯುತ್ತಾರೆ. ಈ ಸನ್ನಿಧಾನಕ್ಕೆ ತಕ್ಷಕ ಪೊಟರೆ ಎಂಬ ಪ್ರಾಚೀನ ಹೆಸರಿದೆ.

ಈ ತಕ್ಷಕಪೊಟರೆಯೊಳಗೆ ಚಿನ್ನವನ್ನು ಹಾಕಿ ಅದರ ಮೇಲೆ ಹಾಸುಗಲ್ಲು ಹಾಸಿ ನಾಗನನ್ನು ಪ್ರತಿಷ್ಠಾಪನೆ ಮಾಡಿದವರು ಶ್ರೀವಾದಿರಾಜಸ್ವಾಮಿಗಳು (1534ರಿಂದ 47ರ ನಡುವೆ). ವಾದಿರಾಜಸ್ವಾಮಿಗಳು ತಮ್ಮ ಮೊದಲ ಮತ್ತು 2ನೇ ಪರ್ಯಾಯದ ಈ ಅವಧಿಯಲ್ಲಿ ಉತ್ತರ ಭಾರತಕ್ಕೆ ಸಂಚಾರ ಹೋದಾಗ ಉತ್ತರ ಭಾರತದ ಮುಸ್ಲಿಂ ದೊರೆ ಗೌರವದಿಂದ ಕಳುಹಿಸಿಕೊಟ್ಟ ಚಿನ್ನವನ್ನು ಇಲ್ಲಿ ಹಾಕಿ ನಾಗನನ್ನು ಪ್ರತಿಷ್ಠೆ ಮಾಡಿದರೆಂಬ ಪ್ರತೀತಿ ಇದೆ. ಇಲ್ಲಿ ಪ್ರತಿನಿತ್ಯ ಪರ್ಯಾಯ ಸ್ವಾಮೀಜಿಯವರು ಪೂಜೆ ಸಲ್ಲಿಸುವ ವಾಡಿಕೆ ಇದೆ. ಷಷ್ಠಿಯಂದು ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯ ಉತ್ಸವ ಮಧ್ಯಾಹ್ನ ಪರ್ಯಾಯ ಶ್ರೀಪಾದರ ನೇತೃತ್ವದಲ್ಲಿ ರಥಬೀದಿಯಲ್ಲಿ ನಡೆಯುತ್ತದೆ. ಹಿಂದೆ ಇಲ್ಲಿ ಮಡೆ ಸ್ನಾನವಿದ್ದರೂ ಪೇಜಾವರ ಶ್ರೀಗಳ ಪರ್ಯಾಯದಲ್ಲಿ ದೇವರ ನೈವೇದ್ಯವನ್ನು ಬಡಿಸಿ ಎಡೆ ಸ್ನಾನ ಮಾಡಿದರು. ಪಲಿಮಾರು ಸ್ವಾಮಿಗಳ ಪರ್ಯಾಯದಲ್ಲಿ ಹೋದ ವರ್ಷ ಎರಡನ್ನೂ ನಿಲ್ಲಿಸಿ ಪೂಜೆ, ಉತ್ಸವವನ್ನು ಮಾತ್ರ ಆಚರಿಸಿದರು.

ಅರಿತೋಡು ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನ
ಉಡುಪಿ ನಾಲ್ಕು ನಾಗಾಲಯಗಳಲ್ಲಿ ಒಂದಾದ ಅರಿತೋಡಿನಲ್ಲಿ ಜನಾರ್ದನ ಸುಬ್ರಹ್ಮಣ್ಯ ದೇವರು ಪೂಜೆಗೊಳ್ಳುತ್ತಿದ್ದಾರೆ. ಇದು ಶ್ರೀಸೋದೆ ವಾದಿರಾಜ ಮಠಾಧೀಶರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಇಲ್ಲಿ ಷಷ್ಠಿà ನಿಮಿತ್ತ ರಂಗಪೂಜೆ ಸಹಿತ ದೀಪೋತ್ಸವ ಮತ್ತು ಮಹಾರಥೋತ್ಸವ ಜರಗಲಿದೆ. ಅರಿತೋಡಿನಲ್ಲಿ ಒಂದೇ ಗರ್ಭಗುಡಿಯಲ್ಲಿ ಜನಾರ್ದನ ಮತ್ತು ಸುಬ್ರಹ್ಮಣ್ಯ ದೇವರು ಪೂಜೆಗೊಳ್ಳುತ್ತಿದ್ದಾರೆ. ಹೊರಗೆ ನಾಗ ಮತ್ತು ಭೂತರಾಜರ ಸನ್ನಿಧಾನವಿದೆ. ಬಹಳ ವರ್ಷಗಳ ಹಿಂದೆ ಈ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದಾಗ ಶ್ರೀಸೋದೆ ವಾದಿರಾಜ ಮಠದ ಶ್ರೀವಿಶೊÌàತ್ತಮತೀರ್ಥ ಶ್ರೀಪಾದರ ಅನುಗ್ರಹ ಮತ್ತು ಭಕ್ತರ ಸಹಕಾರದಿಂದ ಜೀರ್ಣೋದ್ಧಾರಗೊಂಡಿತು. ಷಷ್ಠಿಯಂದು ಸುಮಾರು 3,500 ಜನರು ಮತ್ತು ಪಂಚಮಿಯಂದು ಸುಮಾರು 400 ಜನರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ.

ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಪಡುಬಿದ್ರಿ: ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪರಿಸರದಲ್ಲಿ ಹೆಸರುವಾಸಿ. ತುಳುವಿನಲ್ಲಿ ಕೆರಮ ಎಂದು ಕರೆಯಲ್ಪಡುವ ಈ ಗ್ರಾಮದ ಭಕ್ತ ಜನತೆ ತಮ್ಮನ್ನು ಕಾಯುವ ದೇವನೀತೆಂಬ ಆಪ್ಯಾಯತೆಯಿಂದ “ಕೆರಮದ ಸುಬ್ರಾಯ ದೇವೆರ್‌’ ಎಂದು ಪ್ರೀತಿಯಿಂದ ಸಂಬೋಧಿಸುತ್ತಾರೆ. ಈ ದೇವಸ್ಥಾನವು ಮಧ್ಯಮ ಗಾತ್ರದ ರಚನೆಯಾಗಿದೆ. ಗರ್ಭಗೃಹ ವೃತ್ತಕಾರವಾಗಿದ್ದರೂ ಸುತ್ತಪೌಳಿ ಮುಂತಾದ ಹೊರ ಆವರಣಗಳ ರಚನೆಗಳು ಚೌಕಾಕಾರವಾಗಿದೆ. ಪ್ರಧಾನ ಬಲಿ ಪೀಠವು ಚಿಕ್ಕದಾಗಿದ್ದು ತಾಮ್ರ ಹೊದಿಸಿದ ಧ್ವಜಸ್ತಂಭವಿದೆ. ಇತ್ತೀಚೆಗೆ 2010ರಲ್ಲಿ ಶ್ರೀಕ್ಷೇತ್ರವು ಸಮಗ್ರವಾಗಿ ಜೀರ್ಣೋದ್ಧಾರಗೊಂಡಿದೆ. ಮೂಲಸ್ಥಾನ ಸುಬ್ರಹ್ಮಣ್ಯ ಪ್ರತಿಮೆಯು ಕರಿಶಿಲೆಯಿಂದ ನಿರ್ಮಿಸಲ್ಪಟ್ಟ ದ್ವಿಬಾಹು ಪ್ರತಿಮೆಯಾಗಿದ್ದು, 3ಅಡಿ ಎತ್ತರವಿದೆ. ಸುಬ್ರಹ್ಮಣ್ಯ ಷಷ್ಠಿ ಮತ್ತು ಕಿರು ಷಷ್ಠಿಗಳು ಇಲ್ಲಿ ಆಚರಿಸಲಾಗುವ ಪರ್ವದಿನವಾಗಿದೆ.

Advertisement

ತಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ
ಉಡುಪಿ ಶ್ರೀಕೃಷ್ಣಮಠ ಸುತ್ತಲಿನ ನಾಲ್ಕು ನಾಗಾಲಯಗಳಲ್ಲಿ ಒಂದಾದ ತಾಂಗೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನ ಇರುವುದು ಶಿವಳ್ಳಿ ಗ್ರಾಮದ ಪೆರಂಪಳ್ಳಿಯಲ್ಲಿ. ಇಲ್ಲಿ ಷಷ್ಠಿà ಮಹೋತ್ಸವ ಡಿ. 2ರಂದು ನಡೆಯುತ್ತಿದೆ.

ಬೆಳಗ್ಗೆ ಪಂಚಾಮೃತ ಸಹಿತ ಕಲಶಾಭಿಷೇಕ, ಮಹಾಪೂಜೆ, ರಂಗಪೂಜೆ, ದೀಪಾರಾಧನೆ ನಡೆಯಲಿದೆ. ಹಿಂದೆ ಇದು ಜೀರ್ಣಗೊಂಡ ಸ್ಥಿತಿಯಲ್ಲಿದ್ದು ಸುಬ್ರಹ್ಮಣ್ಯ ದೇವರ ಮೂರ್ತಿ ಇದ್ದಿರಲಿಲ್ಲ. ಎಂಟು ವರ್ಷಗಳ ಹಿಂದೆ ಸುಬ್ರಹ್ಮಣ್ಯ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ತಾಂಗೋಡು ದೇವಸ್ಥಾನ ಬಹು ವರ್ಷಗಳ ಹಿಂದಿದ್ದರೂ ಸುಬ್ರಹ್ಮಣ್ಯ ವಿಗ್ರಹ ಇದ್ದಿರಲಿಲ್ಲ. ದೇವಸ್ಥಾನದ ಪಾಣಿಪೀಠದಲ್ಲಿ ಪದ್ಮಾವತಿ ವಿಗ್ರಹವಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ಸುಬ್ರಹ್ಮಣ್ಯನ ವಿಗ್ರಹವನ್ನು ಜಲಾಧಿವಾಸ ಮಾಡಿ ಪದ್ಮಾವತಿ ಪ್ರತಿಷ್ಠಾಪನೆಯಾಗಿದೆ ಎಂದು ತಿಳಿದುಬಂದಾಗ, ಹೊಸದಾಗಿ ಸುಬ್ರಹ್ಮಣ್ಯ ವಿಗ್ರಹವನ್ನು ಎಂಟು ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವದೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು. ಹಿಂದೆ ಇದ್ದ ಪದ್ಮಾವತಿ, ಗಣಪತಿ, ಗೋಪಾಲಕೃಷ್ಣ ವಿಗ್ರಹಕ್ಕೆ ಪ್ರತ್ಯೇಕ ಚಿಕ್ಕ ಗುಡಿ ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಸನಾತನ ಶ್ರೀ ಸುಬ್ರಹ್ಮಣ್ಯ, ಸಾಂತೂರು ಸುಬ್ರಹ್ಮಣ್ಯ
ಪಡುಬಿದ್ರಿ: ಜಿಲ್ಲೆಯ ಸನಾತನ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಒಂದಾದ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ.
ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಾಲಯವು ಪ್ರಾಚೀನ ಸ್ಕಂದ ಆರಾಧನೆಯ ಕ್ಷೇತ್ರವಾಗಿದೆ.

ಇಲ್ಲಿನ ಮೂಲವಿಗ್ರಹವನ್ನು ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಾಚೀನ ಸ್ಕಂದ ವಿಗ್ರಹಗಳಲ್ಲಿ ಒಂದಾಗಿದೆ.

ಶ್ರೀ ದೇವರ ಸ್ಕಂದ ಬಾಲ ವಿಗ್ರಹವು ಸುಮಾರು ಎರಡೂವರೆ ಅಡಿ ಎತ್ತರವಿದೆ.
ಕೃಷ್ಣಶಿಲೆಯ ಶಾಂತಮೂರ್ತಿಯಾಗಿ ಬಲಗೈಯಲ್ಲಿ ವೇಲಾಯುಧ ಹಾಗೂ ಎಡಗೈಯಲ್ಲಿ ಕಮಂಡಲು ಧರಿಸಿ ಸಮಭಂಗಿಯಲ್ಲಿದೆ. ವಿಗ್ರಹವು ಸದಾ ಹಸನ್ಮುಖ ಭಾವವನ್ನು ಹೊರಸೂಸುವಂತಿದೆ.

ಮಾಂಗೋಡು ವಾಸುಕೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಮಲ್ಪೆ: ಮಾಂಗೋಡು ವಾಸುಕೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 2ರಂದು ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆಯಲಿದೆ.

ಉಡುಪಿಯ ಜೈನ ಅರಸು ಮನೆತನದ ಆಳ್ವಿಕೆಯ ಕಾಲದಲ್ಲಿ ನೇಗಿಲಿನ ಅಡಿಗೆ ಸರ್ಪ ಬಿದ್ದು ತೀರಿಹೋದಕ್ಕಾಗಿ ಪ್ರಾಯಶ್ಚಿತ್ತ ರೂಪವಾಗಿ ನಿರ್ಮಿಸಲಾದ 4 ಸ್ಕಂದಾಲಯದಲ್ಲಿ ಒಂದು ಮಾಂಗೋಡು ಕ್ಷೇತ್ರ.

ಕನ್ನರ್ಪಾಡಿಯ ಶೀನ ನಾಯಕರಿಗೆ ಸ್ವಪ್ನದಲ್ಲಿ ಬಂದು, 40 ವರ್ಷಗಳ ಕಾಲ ಬನದಲ್ಲಿ ಪೂಜಿಸಲ್ಪಟ್ಟು, ಅನಂತರ ದೇಗುಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.ಸನ್ನಿಧಾನದಲ್ಲಿ ಪ್ರತೀ ವರ್ಷ 3 ಬಾರಿ ಸಾಮೂಹಿಕ ಆಶ್ಲೇಷ ಬಲಿ, ಅ. 15 ಸತ್ಯನಾರಾಯಣ ಪೂಜೆ, ಮೇ 1ರಂದು ಸಾಮೂಹಿಕ ನವಗ್ರಹ ಪೂಜೆ. ಷಷ್ಠಿ ಮಹೋತ್ಸವದಂದು ಲಕ್ಷಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆಯುತ್ತಾರೆ.

ಮುಚ್ಚಲಕೋಡು ಸುಬ್ರಹ್ಮಣ್ಯ ದೇವಸ್ಥಾನ
ಉಡುಪಿಯ ನಾಲ್ಕು ನಾಗಾಲಯಗಳಲ್ಲಿ ಒಂದಾದ ಮುಚ್ಚಲಕೋಡು ದೇವಸ್ಥಾನದಲ್ಲಿ ಮೂರು ದಿನಗಳ ರಥೋತ್ಸವ ಜರಗಲಿದೆ.

ಪೇಜಾವರ ಮಠಾಧೀಶರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ದೇವಸ್ಥಾನದಲ್ಲಿ ಮೂರು ವರ್ಷಗಳ ಹಿಂದೆಯೇ ಮಡೆ ಸ್ನಾನವನ್ನು ರದ್ದುಗೊಳಿಸಿ ದೇವರ ಪ್ರಸಾದವನ್ನು ಬಡಿಸಿ ಎಡೆ ಸ್ನಾನವನ್ನು ಆರಂಭಿಸಿದ್ದರು.

ಮುಚ್ಚಲಕೋಡು ದೇವಸ್ಥಾನದ ಸಮೀಪವೇ ಒಂದು ಕೆರೆ ಮತ್ತು ಮೂಲಸ್ಥಾನವಿದೆ. ಅಲ್ಲಿ ದೊರಕಿದ ಅವಶೇಷಗಳ ಪ್ರಕಾರ ಬಹು ಹಿಂದೆ ಇಲ್ಲಿಯೇ ದೇವಸ್ಥಾನವಿತ್ತು ಎಂಬ ನಂಬಿಕೆ ಇದೆ. ಇದು ಯಾವ ಕಾಲದಲ್ಲಿ ಸ್ಥಳಾಂತರಗೊಂಡಿತು ಎನ್ನುವುದು ತಿಳಿದಿಲ್ಲ. ಆದರೆ ಇಂದಿಗೂ ಷಷ್ಠಿà ಮಹೋತ್ಸವಕ್ಕೆ ಮೂಲ ಸ್ಥಾನದ ಮಣ್ಣನ್ನು ತಂದು ಅಂಕುರಾರ್ಪಣ ನಡೆಸುವ ಸಂಪ್ರದಾಯ ನಡೆದುಬಂದಿದೆ. ಅಂಕುರಾರ್ಪಣವೆಂದರೆ ಆ ಮಣ್ಣನ್ನು ತಂದು ಅದರಲ್ಲಿ ಹುರುಳಿ, ಬಿದಿರಿನ ಓಟೆಗಳನ್ನು ಮುಚ್ಚಿಡಬೇಕು. ಉತ್ಸವದ ಮರುದಿನ ಇದರಲ್ಲಿ ಮೊಳಕೆಯೊಡೆದ ಹೂವನ್ನು, ಬಿದಿರಿನ ಕುಡಿಗಳನ್ನು ದೇವರಿಗೆ ಸಮರ್ಪಿಸಬೇಕು.

ಸೂಡ ಸುಬ್ರಹ್ಮಣ್ಯನ ಸನ್ನಿಧಿ
ಶಿರ್ವ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವದೊಂದಿಗೆ ಡಿ. 2ರಂದು ಷಷ್ಠಿ ಮಹೋತ್ಸವ ನಡೆಯಲಿದೆ. ಡಿ. 5 ರಂದು ಶ್ರೀಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ.
ಕುಕ್ಕೆ ಸುಬ್ರಹ್ಮಣ್ಯನಿಗೆ ಹೇಳಿದ ಹರಕೆಯನ್ನು ಇಲ್ಲಿ ಸಲ್ಲಿಸಬಹುದಾಗಿದೆ. ಆದರೆ ಸೂಡ ಸುಬ್ರಹ್ಮಣ್ಯನಿಗೆ ಹೇಳಿದ ಹರಕೆಯನ್ನು ಕುಕ್ಕೆಯಲ್ಲಿ ಸಲ್ಲಿಸಲಾಗದು ಎಂಬುದು ವಾಡಿಕೆ.
ಇಲ್ಲಿ ವಾಸುಕೀ ಸುಬ್ರಹ್ಮಣ್ಯನಿಗೆ ತುಲಾಭಾರ, ರಂಗಪೂಜೆ, ನಾಗಸಮಾರಾಧನೆ, ಮಡೆಸ್ನಾನ, ಪೊಡಿ ಮಡೆಸ್ನಾನ ಮುಂತಾದ ಹರಕೆಗಳನ್ನು ತೀರಿಸಿ ಭಕ್ತರು ಸಂತಾನ ಭಾಗ್ಯ,ಆರೋಗ್ಯ ಭಾಗ್ಯ, ವಿದ್ಯಾಬುದ್ಧಿ ಸರ್ವ ಸುಖಗಳನ್ನೂ ಅರ್ಜಿಸಿಕೊಂಡಿದ್ದಾರೆ.

ಧರ್ಮನಾಡು ಶ್ರೀ ಯಕ್ಷಿಣೀ ವಾಸುಕೀ ಸುಬ್ರಹ್ಮಣ್ಯ ಕ್ಷೇತ್ರ
ಕಾಪು: ಉದ್ಯಾವರ ಧರ್ಮನಾಡು ಕ್ಷೇತ್ರ ಶ್ರೀ ಯಕ್ಷಿಣೀ ವಾಸುಕೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಉತ್ಸವವು ಡಿ. 2ರಂದು ನಡೆಯಲಿದೆ.

ಯಕ್ಷಿಣಿಯು ಕನಸಿನಲ್ಲಿ ಬಂದು ನೆಲೆ ಪಡೆದ ಶ್ರೀಕ್ಷೇತ್ರ ಧರ್ಮನಾಡು ಧರ್ಮದ ವಾಕ್ಯ ನೀಡುವ ಸನ್ನಿಧಿಯಾಗಿದ್ದು, ಅತ್ಯಂತ ಕಾರಣಿಕ ಕ್ಷೇತ್ರವೆಂದು ಭಕ್ತರಿಂದ ಗುರುತಿಸಲ್ಪಟ್ಟಿದೆ. ಇಲ್ಲಿನ ನಾಗ ಯಕ್ಷಿಣಿ ಸನ್ನಿಧಿ ಅತ್ಯಂತ ಪುರಾತನವಾಗಿದೆ.
ನಾಗ ದೇವರ ಸನ್ನಿಧಿ ಮತ್ತು ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಿರಂತರ ಪೂಜೆ ನಡೆಯುತ್ತದೆ. ಅಲ್ಲದೆ ಸಂಕ್ರಾಂತಿಯಂದು ವಿಶೇಷ ಪೂಜೆ, ಈ ಕ್ಷೇತ್ರದಲ್ಲಿ ಶಿಲಾಮಯ ಧ್ವಜಸ್ಥಂಭವಿರುವುದು ವಿಶೇಷವಾಗಿದೆ.

ಮಾಹಿತಿ: ಮಟಪಾಡಿ ಕುಮಾರಸ್ವಾಮಿ, ಆರಾಮ, ಸತೀಶ್ಚಂದ್ರ ಶಿರ್ವ, ರಾಕೇಶ್‌ ಕುಂಜೂರು, ನಟರಾಜ್‌ ಮಲ್ಪೆ, ಎಸ್‌.ಜಿ. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next