Advertisement

ಸುಬ್ರಹ್ಮಣ್ಯ ಪೊಲೀಸರ ಸುತ್ತಾಟದ ವ್ಯಥೆ :ಆರೋಪಿಯೊಂದಿಗೆ 231 ಕಿ.ಮೀ. ಸುತ್ತಬೇಕು!

02:41 AM Apr 26, 2019 | sudhir |

ಸುಬ್ರಹ್ಮಣ್ಯ: ನಾಗರಿಕರಿಗೆ ರಕ್ಷಣೆ ಒದಗಿಸಿ ದೂರುದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಪೊಲೀಸರು ಅನುಭವಿಸುವ ಸಂಕಷ್ಟಕ್ಕೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ನಿದರ್ಶನ. ಯಾಕೆಂದರೆ ಇಲ್ಲಿನ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿದರೆ ಮೊದಲಿಗೆ ಸುಳ್ಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ಬಳಿಕ ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿ ವಾಪಸು ಸುಬ್ರಹ್ಮಣ್ಯ ತಲುಪಲು ಒಟ್ಟು 231 ಕಿ.ಮೀ. ದೂರ ಕ್ರಮಿಸಬೇಕು. ಕೆಲವೊಮ್ಮೆ ಬಸ್‌ ಸಿಗದೇ ಲಾರಿಗಳನ್ನು ಅವಲಂಬಿಸುವ ಸ್ಥಿತಿ!

Advertisement

ಯಾಕೆ ಹೀಗೆ?
ಸುಬ್ರಹ್ಮಣ್ಯವು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಇರುವ ಸುಳ್ಯದಿಂದ 40 ಕಿ.ಮೀ. ದೂರದಲ್ಲಿದೆ. ಆರೋಪಿಯೊಂದಿಗೆ ಅಲ್ಲಿಗೆ ಬಸ್‌ನಲ್ಲಿ ಒಂದೂವರೆ ತಾಸು
ಪ್ರಯಾಣಿಸಬೇಕು. ಅಲ್ಲಿಂದ 2 ಕಿ.ಮೀ. ದೂರದ ನ್ಯಾಯಾಲಯಕ್ಕೆ ರಿಕ್ಷಾದಲ್ಲಿ ಕರೆದೊಯ್ಯಬೇಕು.

ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕಲಾಪ ಮುಗಿಯುವ ತನಕ ಕಾಯಬೇಕು. ಕಲಾಪ ಮುಗಿಯುವುದು ಸಂಜೆ ಆರಕ್ಕೆ. ವಿಶೇಷ ಪ್ರಕರಣಗಳ ವಿಚಾರಣೆ ಇದ್ದಲ್ಲಿ ಮತ್ತಷ್ಟು ವಿಳಂಬವಾಗುತ್ತದೆ. ನ್ಯಾಯಾಲಯ ಅಥವಾ ನ್ಯಾಯಾಧೀಶರ ನಿವಾಸಕ್ಕೆ ತೆರಳಿ ಹಾಜರುಪಡಿಸುವ ಹೊತ್ತಿಗೆ ರಾತ್ರಿಯಾಗುತ್ತದೆ.

ನ್ಯಾಯಾಂಗ ಬಂಧನಕ್ಕೊಪ್ಪಿಸಲು ಮಂಗಳೂರಿನ ಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಹೋಗಬೇಕು. ಅಷ್ಟರಲ್ಲಿ ರಾತ್ರಿಯಾಗುವುದರಿಂದ ಸುಬ್ರಹ್ಮಣ್ಯಕ್ಕೆ ಬಸ್‌ ಇರದು. ಮಂಗಳೂರು-ಬೆಂಗಳೂರು ರಾ.ಹೆದ್ದಾರಿಯಲ್ಲಿ ಕಾದು ನಿಂತು ಖಾಸಗಿ ಬಸ್‌, ಲಾರಿ, ಟ್ಯಾಂಕರ್‌ ಇತ್ಯಾದಿಗಳಲ್ಲಿ ಗುಂಡ್ಯ ತನಕ ಬಂದು ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಸಿಕ್ಕಿದ ವಾಹನ ಏರಿ ಅಥವಾ ಬಾಡಿಗೆಗೆ ಗೊತ್ತುಪಡಿಸಿ ಪ್ರಯಾಣಿಸಬೇಕು.

ಮತ್ತದೇ ಪುನರಾವರ್ತನೆ
ಇದೇ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಕಸ್ಟಡಿ ಕೊನೆಗೊಂಡ ದಿನ ಮತ್ತೆ ಇದು ಪುನರಾವರ್ತನೆ ಯಾಗುತ್ತದೆ. ಆಗ ಸುಬ್ರಹ್ಮಣ್ಯದ ಪೊಲೀಸ್‌ ಮೊದಲು ಮಂಗಳೂರಿನ ಜೈಲಿಗೆ ತೆರಳಬೇಕು. ಅಲ್ಲಿಂದ ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಕರೆತಂದು ಹಾಜರುಪಡಿಸಿ, ಬಳಿಕ ಮತ್ತೆ ಮಂಗಳೂರು ಜೈಲಿಗೆ ಬಿಟ್ಟು ಬರಬೇಕು. ಈ ಸಂದರ್ಭದಲ್ಲಿ ಒಟ್ಟು ಸಂಚಾರ 380 ಕಿ.ಮೀ.ಗೇರುತ್ತದೆ. ಇದು ಸರಿಸುಮಾರು ರಾಜಧಾನಿ ಬೆಂಗಳೂರಿಗೆ ಸಂಚರಿಸಿದಷ್ಟು!

Advertisement

ಎರಡು ದಶಕಗಳ ವ್ಯಥೆ!
ಸುಬ್ರಹ್ಮಣ್ಯ ಠಾಣೆ ರಚನೆಯಾದದ್ದು 1997ರಲ್ಲಿ. ಆಗಿನಿಂದಲೇ ಇಂಥದ್ದೊಂದು ತ್ರಾಸದಾಯಕ ಅಲೆದಾಟ ಚಾಲ್ತಿಯಲ್ಲಿದೆ. 19 ಗ್ರಾಮಗಳು ಠಾಣೆಯ ವ್ಯಾಪ್ತಿಯಲ್ಲಿವೆ. ಆಧುನಿಕ ಶಸ್ತ್ರಾಸ್ತ್ರಗಳು, ಸಿಸಿ ಕೆಮರಾ ಇಲ್ಲಿಲ್ಲ. ಓಬೀರಾಯನ ಕಾಲದ ಹಳೆಯ ಕಟ್ಟಡ.ಒಟ್ಟು ಸರಹದ್ದು 212 ಕಿ.ಮೀ. ಒಳಗೊಂಡಿದೆ.

ಕಡಬ ನ್ಯಾಯಪೀಠ ಸ್ಥಾಪನೆಯಾದರೆ ಉತ್ತಮ
ಕಡಬ ತಾಲೂಕು ಆಗಿದ್ದರೂ ಸುಬ್ರಹ್ಮಣ್ಯ ಕಡಬ ತಾಲೂಕಿಗೆ ಸೇರಿದ್ದರೂ ಅಲ್ಲಿ ನ್ಯಾಯಪೀಠ ಸ್ಥಾಪನೆ ಆಗಿಲ್ಲ. ಅದಾಗುವ ತನಕ ಸುಳ್ಯದ ಅವಲಂಬನೆ ಅನಿವಾರ್ಯವಾಗಿದೆ. ಪುತ್ತೂರು ಜಿಲ್ಲಾ ಕೇಂದ್ರವಾಗಿ ಅಲ್ಲಿ ಕಾರಾಗೃಹ ಸ್ಥಾಪನೆ ಆದರೂ ಸುಬ್ರಹ್ಮಣ್ಯ ಪೊಲೀಸರ ಸುತ್ತಾಟ ಕೊನೆಯಾಗಲಿದೆ.

ಇಂತಹದ್ದೊಂದು ಸಮಸ್ಯೆ ದೀರ್ಘಾವಧಿಯಿಂದ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಪೊಲೀಸರಿಗೆ ಇರುವುದು ಗಮನಕ್ಕೆ ಬಂದಿದೆ. ಇದರಿಂದ ಪೊಲೀಸರಿಗೆ ಮಾತ್ರವಲ್ಲ; ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಒತ್ತಡ ತಂದರೆ ಬಗೆಹರಿಯಬಹುದು. ಇದು ಬಗೆಹರಿದರೆ ನಾಗರಿಕರಿಗೂ ಒಳ್ಳೆಯದು.
– ಮುರಳಿ, ಡಿವೈಎಸ್ಪಿ, ಪುತ್ತೂರು

  • ಬಾಲಕೃಷ್ಣ ಭೀಮಗುಳಿ
Advertisement

Udayavani is now on Telegram. Click here to join our channel and stay updated with the latest news.

Next