Advertisement

ಅರ್ಧ ಶತಮಾನದ ಠಾಣೆಗಿಲ್ಲ ಹೊಸ ಕಟ್ಟಡ ಭಾಗ್ಯ!

11:04 PM Mar 31, 2021 | Team Udayavani |

ಸುಬ್ರಹ್ಮಣ್ಯ, : ಜನರಿಗೆ ರಕ್ಷಣೆ ನೀಡುವ ಪೊಲೀಸರು ಕೆಲಸ ನಿರ್ವಹಿಸುವ ಕಟ್ಟಡವೇ ಸೂಕ್ತ ರೀತಿಯಲ್ಲಿಲ್ಲ! ಹಳೆ   ಕಟ್ಟಡದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಅನಿ ವಾರ್ಯತೆ ಸುಬ್ರಹ್ಮಣ್ಯ ಪೊಲೀಸರದು.

Advertisement

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯಚರಿಸುತ್ತಿರುವ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಸುಮಾರು 49 ವರ್ಷಗಳ ಇತಿಹಾಸವನ್ನೊಳಗೊಂಡಿದೆ. ಇದು ಸುಮಾರು 15 ವರ್ಷಗಳವರೆಗೆ ಕಡಬ ಪೊಲೀಸ್‌ ಠಾಣೆಯ ಹೊರ ಠಾಣೆ ಯಾಗಿ ಕಾರ್ಯನಿರ್ವಹಿಸಿ ಹೆಸರುವಾಸಿ ಯಾಗಿತ್ತು. ಇಂದು ಪೊಲೀಸ್‌ ಠಾಣೆ ಯಾಗಿ ಕಾರ್ಯಚರಿಸುತ್ತಿದೆ. ಪ್ರಸ್ತುತ ಠಾಣಾಧಿ ಕಾರಿಯಾಗಿ  ಮೂರು ವರ್ಷಗಳಿಂದ ಓಮನಾ ಕರ್ತವ್ಯದಲ್ಲಿದ್ದಾರೆ.

ಹಳೇ ಕಟ್ಟಡ :

ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯನ್ನು 1972ರಲ್ಲಿ ತೆರೆಯಲಾಯಿತು. 1979ರಲ್ಲಿ ಇದರ ಕಟ್ಟಡವನ್ನು ಅಂದಿನ ಪೊಲೀಸ್‌ ಮಹಾನಿರೀಕ್ಷಕರು ಉದ್ಘಾಟಿಸಿದ್ದರು. ಹಂಚು ಮಾಡಿನ ಈ ಕಟ್ಟಡ 3 ಕೊಠಡಿಗಳನ್ನು ಹೊಂದಿದೆ. ಠಾಣೆಗೆ ಕೊಠಡಿ ಸಮಸ್ಯೆ ಇರುವುದರಿಂದ 2001ರಲ್ಲಿ ಊರ ದಾಣಿಗಳ ಸಹಕಾರದಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲಾಯಿತು. ಸದ್ಯ ಇದೇ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ಪ್ರಸ್ತುತ ಠಾಣೆಯಲ್ಲಿ 28 ಸಿಬಂದಿ ಕರ್ತವ್ಯದಲ್ಲಿದ್ದಾರೆ. ವಸತಿ ಸೇರಿದಂತೆ ಮೂಲ ಸೌಕರ್ಯ ವ್ಯವಸ್ಥಿತವಾಗಿದೆ. ಠಾಣೆ ಸುಮಾರು 3 ಎಕ್ರೆ ಹೊಂದಿದೆ. ಹಳೆ ಕಟ್ಟಡವಾಗಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ.

ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಪ್ರಸ್ತುತ ಸುಳ್ಯ ನ್ಯಾಯಲಯ ವ್ಯಾಪ್ತಿಯಲ್ಲಿದ್ದು, ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಳ್ಪ, ಕೇನ್ಯ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ನಾಲ್ಕೂರು, ಐವತ್ತೋಕ್ಲು, ಮರ್ಕಂಜ, ಕಲ್ಮಡ್ಕ ಮೊದಲಾದ    ಸುಳ್ಯ ಹಾಗೂ ಕಡಬ ತಾಲೂಕಿನ 15 ಗ್ರಾಮ ಗಳನ್ನೊಳಗೊಂಡಿದೆ.

Advertisement

ಬೇಕಿದೆ ಹೊಸ ಕಟ್ಟಡ :

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಹೆಚ್ಚಿನ ಪೊಲೀಸ್‌ ಠಾಣೆಗಳಿಗೆ ಸುಸಜ್ಜಿತ ಕಟ್ಟಡಗಳು ನಿರ್ಮಾಣಗೊಂಡು ಕಾರ್ಯಚರಿಸುತ್ತಿವೆ. ಅದರಂತೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೂ ನೂತನ ಕಟ್ಟಡ ಭಾಗ್ಯ ಕೂಡಿಬರಲಿ ಎಂಬುದು ಈ ಭಾಗದ ಜನತೆಯ ಆಶಯ. ದಾಖಲೆಗಳ ಕೊಠಡಿ, ಉಪನಿರೀಕ್ಷಕರು, ಸಂದರ್ಶಕರು ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಉತ್ತಮ ಸೇವೆ ನೀಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಪೊಲೀಸ್‌ ಠಾಣೆ ಇದ್ದು, ವ್ಯವಸ್ಥಿತ ಕಟ್ಟಡದ ಅಗತ್ಯವಿದೆ. ಹೇಳಿ ಕೇಳಿ ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇವಸ್ಥಾನವಿರುವ ಕ್ಷೇತ್ರ. ದಿನನಿತ್ಯ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿರುತ್ತಾರೆ.

ಭದ್ರತೆ ನಿರ್ವಹಿಸುವ ಪೊಲೀಸರು ಕೆಲಸ ಮಾಡುವ ಕಟ್ಟಡ ಸುಸಜ್ಜಿತವಾಗಿರಬೇಕು ಎನ್ನುತ್ತಾರೆ ನಾಗರಿಕರು.  ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ನೂತನ ಕಟ್ಟಡಕ್ಕೆ ಅನುದಾನ ಒದಗಿಸುವಂತೆ ಸರಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಹೊಸ ಕಟ್ಟಡ ಕೂಡಲೇ ಆಗಬೇಕಿದೆ ಎಂದು ತಿಳಿಸಿ, ವರದಿ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಹೊಸ ಕಟ್ಟಡದ ಬೇಡಿಕೆ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ಬರುವ ನಿರೀಕ್ಷೆಯಿದೆ.  –ಲಕ್ಷ್ಮೀಪ್ರಸಾದ್‌ ಬಿ.ಎಂ.,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ದ.ಕ.

 

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next