ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್ನ ಶೆಲ್ಟರ್ ಕಾಮಗಾರಿ ಪ್ರಗತಿಯಲ್ಲಿದ್ದು, ಭರದಿಂದ ಸಾಗುತ್ತಿದೆ.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಮೂಲಕ ದಿನನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಪ್ರಯಾಣಿಸುತ್ತಾರೆ. ಇಲ್ಲಿನ ಪ್ರಯಾಣಿಕರ, ರೈಲು ಸಂಚಾರದ ಸಾಂದ್ರತೆ ಗಮನಿಸಿ ಇಲ್ಲಿ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಾಣಗೊಂಡಿತ್ತು. ಎರಡನೇ ಪ್ಲಾಟ್‌ಫಾರ್ಮ್ ನಿರ್ಮಾಣಗೊಂಡಿದ್ದರೂ ಅದನ್ನು ಸಂಪರ್ಕಿಸಲು ಮೇಲ್ಸೇತುವೆ ನಿರ್ಮಾಣಗೊಂಡಿರದೇ ಪ್ರಯಾಣಿಕರು ರೈಲು ಹಳಿ ದಾಟಿ ಅಪಾಯಕಾರಿಯಾಗಿ ಎರಡನೇ ಪ್ಲಾಟ್‌ಫಾರ್ಮ್ಗೆ ತೆರಳಬೇಕಾಗಿತ್ತು. ಬಳಿಕ ಪ್ರಯಾಣಿಕರ ಒತ್ತಾಯ, ಮಾಧ್ಯಮ ವರದಿ ಪರಿಣಾಮದಂತೆ ಮೇಲ್ಸೇತುವೆ ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತವಾಗಿತ್ತು.
ಎರಡನೇ ಪ್ಲಾಟ್‌ಫಾರ್ಮ, ಮೇಲ್ಸೇತುವೆ ನಿರ್ಮಾಣ ಗೊಂಡಿದ್ದರೂ ಪ್ಲಾಟ್‌ಫಾರ್ಮ್ನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅನುಕೂಲತೆಗೆ ತಕ್ಕಂತೆ ಯಾವುದೇ ಕೆಲಸಗಳು ನಡೆದಿರಲಿಲ್ಲ. ಮುಖ್ಯವಾಗಿ ಪ್ಲಾಟ್‌ಫಾರ್ಮ್ಗೆ ಶೆಲ್ಟರ್ ನಿರ್ಮಾಣ ಮಾಡದೇ ಪ್ರಯಾಣಿಕರು ಮಳೆ, ಬಿಸಿಲಿಗೆ ಸಮಸ್ಯೆ ಪಡುವಂತಾಗಿತ್ತು. ಎರಡನೇ ಪ್ಲಾಟ್‌ಫಾರ್ಮ್ನಲ್ಲಿ ಕುಳಿತುಕೊಳ್ಳಲು ಬೆಂಜಿನ ವ್ಯವಸ್ಥೆ, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮತ್ತಿತರ ಮೂಲಸೌಕರ್ಯ ವ್ಯವಸ್ಥೆಗಳೂ ಇನ್ನಷ್ಟೇ ಆಗಬೇಕಾಗಿದೆ.
ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ 26.16 ಕೋಟಿ ರೂ. ಅನುದಾನದ ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಈಗಾಗಲೇ 6.01 ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದೆ. ಇದರಲ್ಲಿ ಪ್ಲಾಟ್‌ಫಾರ್ಮ್ ಶೆಲ್ಟರ್, ನಿಲ್ದಾದ ಕ್ಯಾಂಟೀನ್ ಸ್ಲಾಬ್ ಕೆಲಸ ಸೇರಿದಂತೆ ನಿಲ್ದಾಣದ ಮೂಲಭೂತ ಅಭಿವೃದ್ಧಿ ಕೆಲಸಗಳು ಒಳಗೊಂಡಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಗತಿಯಲ್ಲಿ ಶೆಲ್ಟರ್ ಕಾಮಗಾರಿ
ಇದೀಗ ಎರಡನೇ ಪ್ಲಾಟ್‌ಫಾರ್ಮ್ನಲ್ಲಿ ಶೆಲ್ಟರ್ ಕೆಲಸಗಳು ಆರಂಭಗೊಂಡು ಪ್ರಗತಿಯಲ್ಲಿದ್ದು, ಭರದಿಂದ ಸಾಗುತ್ತಿದೆ. ಪ್ಲಾಟ್‌ಫಾರ್ಮ್ 2 ಮತ್ತು 3ರ ಶೆಲ್ಟರ್ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಮೈಸೂರು ವಿಭಾಗದಲ್ಲಿ ಅಮೃತ ಭಾರತ್ ನಿಲ್ದಾಣ ಯೋಜನೆಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಆಯ್ಕೆಗೊಂಡಿದ್ದು, ಅದರಡಿಯಲ್ಲಿ ಪ್ಲಾಟ್‌ಫಾರ್ಮ್ ಶೆಲ್ಟರ್ ಕೆಲಸಗಳು ನಡೆಯುತ್ತಿದೆ.