Advertisement

ಸುಬ್ರಹ್ಮಣ್ಯ ದೇವರಿಗೆ ರಥ ಕಟ್ಟುವ ಮಲೆ ಮಕ್ಕಳು

10:27 PM Nov 18, 2019 | mahesh |

ಸುಬ್ರಹ್ಮಣ್ಯ: ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗಾರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದು ಒಂದು ಕಲೆ. ತೇರ ಸಿಂಗಾರ ನೋಡಲೆಂದೇ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತಿ-ಭಾವಗಳ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರೆ ವೇಳೆ ರಥ ಕಟ್ಟುವುದು ಗಮನ ಸೆಳೆಯುತ್ತದೆ. ಇಲ್ಲಿಯ ಮೂಲ ನಿವಾಸಿ ಮಲೆಕುಡಿಯರು ರಥ ಕಟ್ಟುವುದು ಇಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ.

Advertisement

ಹೂವಿನಂತೆ ಬೆತ್ತ ಸುರಿದು, ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುತ್ತಾರೆ. ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ ಕಲಾಕೃತಿಯಂತೆ ನಿರ್ಮಾಣವಾಗುತ್ತದೆ. ಲಕ್ಷ ದೀಪೋತ್ಸವದಂದು ಕಾಶಿಕಟ್ಟೆ ದೇಗುಲದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಚಲಿಸಲಾಗದ ಗುರ್ಜಿ ರಥದಿಂದ ಹಿಡಿದು ಪಂಚಮಿ, ಬ್ರಹ್ಮರಥಗಳು ಮನಸೂರೆಗೊಳಿಸುತ್ತವೆ.

ನಿರ್ಮಾಣಕ್ಕೆ ಚಾಲನೆ
ಮಾರ್ಗಶಿರ ಶುದ್ಧ ಪೌರ್ಣಮಿಯ ನ. 12ರಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಶುಭಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳಿ ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತ ಸಂಗ್ರಹಿಸಿ ತಂದು ಬ್ರಹ್ಮರಥವನ್ನು ಕಟ್ಟಲು ಆರಂಭಿಸಿದ್ದಾರೆ. ಇದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ.

ನಾಡಿನ ಇತರ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಬಳಸಿ ಕೌಶಲಭರಿತವಾಗಿ ನಿರ್ಮಿಸುತ್ತಾರೆ.
ಗಂಟು ಕಟ್ಟಲಾಗುವುದಿಲ್ಲ ಭಾರೀ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕುವುದಿಲ್ಲ. ಬೆತ್ತವನ್ನು ಹೂವಿನಂತೆ ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ.

ತೇರನ್ನೇರುವ ವೇಳೆ ರಥದ ಸುತ್ತ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿಮಾಣ ಕಾರ್ಯದಲ್ಲಿ ಯುವಕರು, ವೃದ್ಧರು ಉತ್ಸಾಹದಿಂದ ಭಾಗವಹಿಸುತ್ತಾರೆ. 20 ಯುವಕರು, 30 ಹಿರಿಯರ ಸಹಿತ 50 ಜನ ಬೆತ್ತದ ರಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವರು.

Advertisement

ಶಿಷ್ಟಾಚಾರ ಪಾಲನೆ
ಕುಟ್ಟಿ ಮುಹೂರ್ತದಿಂದ ಆರಂಭಿಸಿ ರಥದ ಕೆಲಸದಲ್ಲಿ ತೊಡಗುವವರು ಮಡಿವಂತಿಕೆಯಿಂದ ಇರುತ್ತಾರೆ. ಮದ್ಯ, ಮಾಂಸಗಳಿಂದ ದೂರವಿರುತ್ತಾರೆ. ಷಷ್ಠಿಯ ಮೊದಲ್ಗೊಂಡು ದೇವರ ಉತ್ಸವಾದಿ ಜಾತ್ರೆಯ ಅನಂತರ ದೇವರ ಜಲವಿಹಾರ ಮುಗಿಯುವವರೆಗೆ ಕುಕ್ಕೆ ಕ್ಷೇತ್ರದ ಹೊರಗೆ ಎಲ್ಲಿಯೂ ವಾಸ್ತವ್ಯ ಹೊಂದುವುದು ಅಥವಾ ಇನ್ನಾವುದೇ ರೀತಿಯಲ್ಲಿ ಶುಭ ಕಾರ್ಯಗಳು ನಡೆಸುವುದಾಗಲಿ ಕ್ಷೇತ್ರ ಸಂಪ್ರದಾಯ ಪ್ರಕಾರ ನಿಷಿದ್ಧ.

ಪುತ್ತೂರಲ್ಲೂ ರಚನೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಲ್ಲದೆ, ಪುತ್ತೂರಿನ ಮಹತೋಭಾರ ಶ್ರಿ ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲೂ ಇಲ್ಲಿನ ಮಲೆಕುಡಿಯ ಕುಶಲಕರ್ಮಿಗಳು ರಥ ಸಿದ್ಧಗೊಳಿಸುತ್ತಿದ್ದಾರೆ. ಬ್ರಹ್ಮರಥದ ಗೋಲ, ಶಿಖರ ಸಿದ್ಧಪಡಿಸಿ ಆಕರ್ಷಕವಾಗಿ ರಚಿಸುತ್ತಾರೆ.

ಹಿರಿಯರಿಂದ ಒಲಿದ ಕಲೆ
ಸಾಂಪ್ರದಾಯಿಕ ಕಲೆ ಹಿರಿಯರಿಂದ ಸಿದ್ಧಿಸಿದೆ. ಹಿರಿಯರ ಮಾರ್ಗದರ್ಶನದಂತೆ ರಥ ಕಟ್ಟುವ ಕಾಯಕ ನಡೆಸುತ್ತೇವೆ. ಸುಮಾರು 50 ಕುಶಲಕರ್ಮಿಗಳ ಪೈಕಿ 20ಕ್ಕೂ ಅ ಧಿಕ ಮಂದಿ ಯುವಕರಿದ್ದೇವೆ. ದೇವರ ಸೇವೆಗೆ ದೊರೆತ ಪುಣ್ಯ ಅವಕಾಶವಿದೆಂದು ಭಾವಿಸಿಕೊಂಡಿದ್ದೇವೆ.
– ರೋಹಿತ್‌ ಮಲೆಕುಡಿಯ, ರಥ ಕಟ್ಟುವ ತಂಡದ ಯುವಕ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next