ಪಣಜಿ: ಲಂಕೆಯ ರಾಜನಾಗಿದ್ದ ರಾವಣ ಹುಟ್ಟಿದ್ದು ಈಗಿನ ನೋಯ್ಡಾ ಸಮೀಪ ಇರುವ ಬಿರ್ಸಾಕ್‌ನಲ್ಲಿ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ರವಿವಾರ ದಕ್ಷಿಣ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ| ಕರುಣಾನಿಧಿ ರಾವಣ ಲಂಕೆಯಲ್ಲಿ ಹುಟ್ಟಿದ್ದ ಮತ್ತು ಆತ ದ್ರಾವಿಡ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಅದು ಸುಳ್ಳು. ಆತ ಮಾನಸ ಸರೋವರದಲ್ಲಿ ಶಿವನನ್ನು ಮೆಚ್ಚಿಸಲು ತಪಸ್ಸು ಮಾಡಿದ. ಬಳಿಕ ಲಂಕೆಗೆ ತೆರಳಿ ಸೋದರ ಕುಬೇರನನ್ನು ಸೋಲಿಸಿ ‘ಲಂಕೆಯ ರಾಜ’ ಎಂಬ ಹೆಗ್ಗಳಿಕೆಗೆ ಪಾತ್ರನಾದ ಎಂದು ಹೇಳಿದ್ದಾರೆ ಸ್ವಾಮಿ.
ಆತ ಬ್ರಾಹ್ಮಣನಾಗಿದ್ದ. ಸಾಮವೇದವನ್ನೂ ಕಲಿತಿದ್ದ. ಆದರೆ ಕರುಣಾನಿಧಿ, ರಾವಣ ಮಾತ್ರ ತಮ್ಮಂತೇ ನಾಸ್ತಿಕ ಎಂದು ತಿಳಿದುಕೊಂಡಿದ್ದರು ಎಂದು ಹೇಳಿದ್ದಾರೆ. ಹೀಗಾಗಿಯೇ ಕರುಣಾನಿಧಿ ತಾವು ಏನು ಮಾಡುತ್ತಿದ್ದರೂ ವಿರೋಧ ವ್ಯಕ್ತಪಡಿಸುತ್ತಿದ್ದರು. ಏಕೆಂದರೆ ಅದು ಅವರು ನಂಬಿಕೊಂಡು ಬಂದಿದ್ದ ದ್ರಾವಿಡ ತತ್ವಗಳಿಗೆ ಸರಿಯಾಗುತ್ತಿರಲಿಲ್ಲ ಎಂದಿದ್ದಾರೆ. ಕೆಲವರಿಗೆ ರಾಮ ಎಂದರೆ ದ್ವೇಷಕ್ಕೆ ಸಿಗುವ ವ್ಯಕ್ತಿ. ಆತ ಉತ್ತರದಿಂದ ಬಂದ ವ್ಯಕ್ತಿ. ದ್ರಾವಿಡನಾಗಿದ್ದರಿಂದ ರಾವಣನನ್ನು ರಾಮ ಕೊಂದ ಎಂಬ ಅಭಿಪ್ರಾಯ ಮೂಡಿಸಲಾಗಿದೆ ಎಂದು ಕರುಣಾನಿಧಿ ಯವರನ್ನು ಸ್ವಾಮಿ ಟೀಕಿಸಿದ್ದಾರೆ.
ಕಪು ಹಣವನ್ನು ಭಾರತದಿಂದ ಹೊರಗೆ ಸಾಗಿಸುತ್ತಿರುವುದೇ ರೂಪಾಯಿ ಮೌಲ್ಯ ಕುಸಿಯಲು ಕಾರಣ. ಅಮೆರಿಕಕ್ಕೂ ರೂಪಾಯಿ ಕುಸಿತಕ್ಕೂ ಸಂಬಂಧವಿಲ್ಲ. ವ್ಯಾಪಕ ಪ್ರಮಾಣದಲ್ಲಿ ಕಪ್ಪು ಹಣ ವಿದೇಶಕ್ಕೆ ಸಾಗಣೆಯಾಗುತ್ತಿದೆ. ಡಾಲರ್‌ಗೆ ರೂಪಾಯಿ ಭಾರೀ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದಾಗ ಮೌಲ್ಯ ಕುಸಿಯುತ್ತದೆ.
— ಸುಬ್ರಹ್ಮಣ್ಯನ್ ಸ್ವಾಮಿ, ಬಿಜೆಪಿ ಮುಖಂಡ