Advertisement

ಸೇವೆಗೆ ತೆರೆದುಕೊಳ್ಳದ ಸುಬ್ರಹ್ಮಣ್ಯ ಪಶು ಆಸ್ಪತ್ರೆ

10:34 AM Nov 05, 2018 | |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಚೆನ್ನಾಗಿದೆ. ಆದರೆ, ಕೃಷಿಕರು ತಮ್ಮ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲೆಂದು ಈ ಆಸ್ಪತ್ರೆಗೆ ಬಂದರೆ ಇಲ್ಲಿ ಚಿಕಿತ್ಸೆ ನೀಡಲು ವೈದ್ಯರಿಲ್ಲ, ಸಿಬಂದಿಯೂ ಇಲ್ಲ. ಔಷಧ ದಾಸ್ತಾನು ಕೂಡ ಖಾಲಿ! ಮುಖ್ಯವಾಗಿ ಇರಬೇಕಾದ ಕ್ಯಾಲ್ಸಿಯಂ ಗುಳಿಗೆಗಳೂ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಸಮರ್ಪಕ ಆರೋಗ್ಯ ಸೇವೆ ಇಲ್ಲದೆ ಪಶು ಆಸ್ಪತ್ರೆ ಅವ್ಯವಸ್ಥೆಯ ಕೊಂಪೆಯಂತಾಗಿದೆ.

Advertisement

ದ.ಕ. ಜಿ.ಪಂ. ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಪಶು ಆಸ್ಪತ್ರೆ ಕಾಶಿಕಟ್ಟೆ ಬಳಿ ಕಾರ್ಯಾಚರಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ. ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ಜಾನುವಾರು ಅಭಿವೃದ್ಧಿ ಅಧಿಕಾರಿಯನ್ನು ಇಲ್ಲಿಗೆ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರಿರುವಾಗ ತುರ್ತು ಚಿಕಿತ್ಸಾ ಸೇವೆ ಅಲ್ಪವಾದರೂ ಸಿಗುತ್ತಿತ್ತು. ಅವರೀಗ ರಜೆಯಲ್ಲಿ ತೆರಳಿದ್ದಾರೆ. ಹಾಗಾಗಿ ಅಲ್ಪ ಸೇವೆಯೂ ಲಭಿಸದಂತಾಗಿದೆ.

ಸುಬ್ರಹ್ಮಣ್ಯ ನಗರ, ಕೃಷಿ ಅವಲಂಬಿತ ಯೇನೆಕಲ್ಲು, ಐನಕಿದು, ಕಲ್ಲಾಜೆ, ಕೈಕಂಬ ಮೊದಲಾದ ಗ್ರಾಮೀಣ ಭಾಗದ ಕೃಷಿಕರು ಈ ಕೇಂದ್ರದ ಪ್ರಯೋಜನ ಪಡೆಯುತ್ತಾರೆ. ಇದೀಗ ಸೂಕ್ತ ಸೇವೆ ಸಿಗದೆ ಸಾಕು ಪ್ರಾಣಿಗಳ ಚಿಕಿತ್ಸೆಗೆ ಜನ ಅಲೆದಾಡುವಂತಾಗಿದೆ. ದನ, ನಾಯಿ, ಆಡು, ಕುರಿ, ಕುಕ್ಕುಟ ಹೀಗೆ ಪ್ರಾಣಿ-ಪಕ್ಷಿಗಳಿಗೆ ಅನಾರೋಗ್ಯ ಕಾಣಿಸಿಕೊಂಡರೆ ವೈದ್ಯಕೀಯ ಸೇವೆ ಸಿಗದೆ ವಾಪಸಾಗುತ್ತಿದ್ದಾರೆ.

ಗ್ರಾ.ಪಂ. ಸಭೆಯಲ್ಲಿ ಚರ್ಚೆ
ಕೃಷಿ ಅವಲಂಬಿತ ಈ ಭಾಗದಲ್ಲಿ ಅನೇಕ ಮಂದಿ ಕೃಷಿಕರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ದನ ಸಾಕುವವರು ಅಧಿಕ ಮಂದಿ ಇದ್ದು, ಅಪಾರ ಪ್ರಮಾಣದ ಮಂದಿ ಹಾಲಿನ ಡೇರಿಗೆ ನಿತ್ಯ ಹಾಲು ಪೂರೈಸುತ್ತಿದ್ದಾರೆ. ದನಗಳಿಗೆ ಅನಾರೋಗ್ಯ ಕಾಡಿದರೆ ದೂರದೂರಿನಿಂದ ಔಷಧ ತರಿಸಬೇಕಾಗಿದೆ. ಪಶು ಆಸ್ಪತ್ರೆ ನಿರ್ವಹಣೆ ಇಲ್ಲದೆ ಶಿಥಿಲ ಸ್ಥಿತಿಗೆ ತಲುಪಿದೆ. ಖಾಯಂ ವೈದ್ಯರ ನೇಮಕ ವಿಚಾರ ಗ್ರಾ.ಪಂ. ಸಭೆಗಳಲ್ಲಿ ಪ್ರಸ್ತಾವವಾಗಿದೆ. ನಿರ್ಣಯ ಕೂಡ ಬರೆದು ಕಳುಹಿಸಲಾಗಿದೆ. ಹೀಗಿದ್ದರೂ, ಆಸ್ಪತ್ರೆ ಸುಧಾರಣೆ ಕಂಡಿಲ್ಲ.

ಒತ್ತಡದ ಮಧ್ಯೆ ಕಾರ್ಯ
ಗುತ್ತಿಗಾರು ಪಶು ವೈದ್ಯಕೀಯ ಕೇಂದ್ರದ ಡಾ| ವೆಂಕಟಾಚಲಪತಿ ಅವರಿಗೆ ಸುಬ್ರಹ್ಮಣ್ಯದ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅವರಿಗೆ ಕೊಲ್ಲಮೊಗ್ರು ಪಶುವೈದ್ಯಕೀಯ ಕೇಂದ್ರದ ಜವಾಬ್ದಾರಿ ವಹಿಸಲಾಗಿದೆ. ಮೂರು ಕಡೆ ಜವಾಬ್ದಾರಿ ಹೊಂದಿ ಒತ್ತಡದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

Advertisement

ಜಾಲತಾಣದಲ್ಲಿ ಆಕ್ರೋಶ
ಪಶುಆಸ್ಪತ್ರೆಯಲ್ಲಿ ಸುದೀರ್ಘ‌ ಅವಧಿ ಯಿಂದ ವೈದ್ಯರಿಲ್ಲದೆ, ಔಷಧವೂ ಸಿಗದಿರುವ ಕುರಿತು ಸ್ಥಳೀಯರು ಆಕ್ರೋಶಿತರಾಗಿದ್ದಾರೆ. ಇಲಾಖೆ ನ್ಯೂನತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸ್ಥಳೀಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಾಕು ಪ್ರಾಣಿಗಳಿಗೆ ತುರ್ತು ಸೇವೆ ಅಲಭ್ಯ
ಆಸ್ಪತ್ರೆಯಲ್ಲಿ ಮೂರು ನುರಿತ ಶಿಲ್ಪಿಗಳು ವರ್ಷಗಳಿಂದ ಪಶು ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಉಳಿದಂತೆ ಸಹಾಯಕ ನಿರ್ದೇಶಕರು, ಜಾನುವಾರು ಅಧಿಕಾರಿ, ಪಶುವೈದ್ಯಕೀಯ ಪರೀಕ್ಷಕ ಹುದ್ದೆ ಖಾಲಿಯಿವೆ. ಓರ್ವ ಡಿ ಗ್ರೂಪ್‌ ಸಿಬಂದಿ ಮಾತ್ರ ಇಲ್ಲಿ ಕರ್ತವ್ಯ ದಲ್ಲಿದ್ದಾರೆ. ಆವಶ್ಯಕತೆಗೆ ಅನುಗುಣವಾಗಿ ಈ ಆಸ್ಪತ್ರೆಯಲ್ಲಿ ಯಾವುದೇ ತುರ್ತು ಸೇವೆಗಳು ಸಿಗುತ್ತಿಲ್ಲ.

ಔಷಧ ದಾಸ್ತಾನಿಲ್ಲ 
ಸೂಕ್ತವಾದ ಔಷಧಗಳು ಈ ಆಸ್ಪತ್ರೆಯಲ್ಲಿ ದಾಸ್ತಾನಿಲ್ಲ. ಜಾನುವಾರುಗಳ ಹೊಟ್ಟೆ ಹುಳಕ್ಕೆ ಮಾತ್ರೆ ಬದಲಿಗೆ ದ್ರವರೂಪದ ಔಷಧವನ್ನೇ ನೀಡಲಾಗುತ್ತಿದೆ. ದಾಸ್ತಾನು ಇದ್ದರೆ, ರೈತರೇ ಬಾಟಲಿ ಒಯ್ದರೆ ಸುರಿದು ಕೊಡುತ್ತಾರೆ. ಕ್ಯಾಲ್ಸಿಯಂ ಹುಡಿಯೂ ಇಲ್ಲಿ ಸಿಗುತ್ತಿಲ್ಲ. 

ಸರಕಾರದ ಗಮನಕ್ಕೆ ತರುವೆ
ಪಶುಸಂಗೋಪನ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ವೈದ್ಯರ ಸಹಿತ ಹಲವು ಹುದ್ದೆ ಖಾಲಿ ಇದ್ದು, ಸಿಬಂದಿ ಕೊರತೆ ಇದೆ. ಸರಕಾರಕ್ಕೆ ಪಟ್ಟಿ ಸಲ್ಲಿಸುತ್ತಲೇ ಇದ್ದೇವೆ. ಸುಬ್ರಹ್ಮಣ್ಯ ಕೇಂದ್ರದ ಸಮಸ್ಯೆ ಕುರಿತು ಸರಕಾರಕ್ಕೆ ಮತ್ತೊಮ್ಮೆ ಪತ್ರ ಬರೆಯುವೆ.
– ಮೋಹನ,
ಜಿಲ್ಲಾ ಉಪನಿರ್ದೇಶಕರು, ಪ.ಸಂ. ಮತ್ತು
ಪ.ಸೇ. ಇಲಾಖೆ ಮಂಗಳೂರು

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next