ಸುಬ್ರಹ್ಮಣ್ಯ: ಅಂತೂ ಇಂತೂ ಅರ್ಧ ಶತಮಾನದ ಹಳೆಯ ಸುಬ್ರಹ್ಮಣ್ಯದ ಪೊಲೀಸ್ ಠಾಣಾ ಕಟ್ಟಡಕ್ಕೆ ಮುಕ್ತಿ ಸಿಗಲಿದ್ದು, ಮುಂದಿನ ವರ್ಷದಿಂದ ಸುಬ್ರಹ್ಮಣ್ಯ ಪೊಲೀಸರು ಸೋರುವ ಪೊಲೀಸ್ ಠಾಣಾ ಕಟ್ಟಡದಿಂದ ಹೊರಬಂದು ಹೊಸ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಸುಳ್ಯ ವೃತ್ತ ವ್ಯಾಪ್ತಿಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಕಟ್ಟಡ ಸುಮಾರು ಅರ್ಧ ಶತಮಾನದಷ್ಟು ಹಳೆಯದಾಗಿದೆ. ಹೊಸ ಕಟ್ಟಡದ ಬೇಡಿಕೆಯಂತೆ ಸರಕಾರದಿಂದ ಅನುದಾನ ಮಂಜೂರುಗೊಂಡಿದ್ದು, ಕಳೆದ ಜನವರಿಯಲ್ಲಿ ಎಸ್.ಅಂಗಾರ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಪ್ರಸ್ತುತ ಇರುವ ಪೊಲೀಸ್ ಠಾಣಾ ಕಟ್ಟಡದ ಸಮೀಪದಲ್ಲೇ ಹೊಸ ಠಾಣಾ ಕಟ್ಟಡ ನಿರ್ಮಾಣಗೊಳ್ಳಲಿದೆ.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು ಈ ಹಿಂದೆ ನೀಡಿದ ಭರವಸೆಯಂತೆ ನಡೆಯುತ್ತಿದ್ದರೆ ಈಗಾಗಲೇ ಹೊಸ ಪೊಲೀಸ್ ಠಾಣೆಯಲ್ಲಿ ಕಾರ್ಯಾರಂಭವಾಗಬೇಕಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಸುಬ್ರಹ್ಮಣ್ಯ ಪೊಲೀಸರು ಸೋರುವ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಮೇಲ್ಛಾವಣಿಗೆ ಪ್ಲಾಸ್ಟಿಕ್ ಟಾರ್ಪಾಲು ಹೊದಿಸಲಾಗಿತ್ತು. ಈ ವರ್ಷವೂ ಮತ್ತೂಂದು ಟಾರ್ಪಾಲು ಮೇಲ್ಛಾವಣಿಗೆ ಹಾಸಲಾಗಿದೆ.
ಇದೀಗ ನೂತನ ಠಾಣೆಯ ಕಾಮಗಾರಿ ಆರಂಭಗೊಂಡಿದ್ದು, ಕುಂದಾಪುರ ಮೂಲದ ವ್ಯಕ್ತಿ ಗುತ್ತಿಗೆ ವಹಿಸಿಕೊಂಡಿದ್ದಾರೆ. ಮುಂದಿನ ಮಳೆಗಾಲಕ್ಕೂ ಮೊದಲು ಹೊಸ ಪೊಲೀಸ್ ಠಾಣಾ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪೊಲೀಸ್ ಠಾಣಾ ಕಟ್ಟಡದ ಸಮಸ್ಯೆ ಬಗ್ಗೆ ಉದಯವಾಣಿ ಸುದಿನವು ನಿರಂತರ ವರದಿ ಮಾಡಿತ್ತು.
ಕೊಠಡಿ ಸಹಿತ ಮೂಲಸೌಕರ್ಯ
ರಾಜ್ಯ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಮಂಜೂರುಗೊಂಡಿರುವ 1.23 ಕೋ.ರೂ. ವೆಚ್ಚದಲ್ಲಿ ಠಾಣೆಯ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಹೊಸ ಕಟ್ಟಡದಲ್ಲಿ ಪೊಲೀಸ್ ಉಪನಿರೀಕ್ಷಕರ ಕೊಠಡಿ, ಸಹಾಯಕ ಉಪನಿರೀಕ್ಷಕರ ಕೊಠಡಿ, ಲಾಕ್‌ಅಪ್, ಕರ್ತವ್ಯ ಕಚೇರಿ, ಸಂದರ್ಶಕರ ಕಚೇರಿ, ದಾಖಲೆ ಸಂಗ್ರಹ ಕಚೇರಿ, ಪುರುಷ ಹಾಗೂ ಮಹಿಳಾ ಸಿಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನ ಗೃಹ, ಒಂದು ಗೋಡೌನ್ ಮತ್ತಿತರ ಕೊಠಡಿಗಳು ಇರಲಿವೆ.