Advertisement

ಸುಬ್ರಹ್ಮಣ್ಯ ದೇಗುಲಗಳಲ್ಲಿ ನಾಳೆ ಚಂಪಾ ಷಷ್ಠಿ ಸಂಭ್ರಮ

11:33 PM Nov 30, 2019 | Sriram |

ಚೌತಿಯಂದು ಗಣಪತಿಯನ್ನು ಆರಾಧಿಸಿದರೆ, ಷಷ್ಠಿಯಂದು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಆ ದಿನ ದೇವರ ಪ್ರೀತ್ಯರ್ಥವಾಗಿ ಉಪವಾಸವನ್ನು ಕೈಗೊಳ್ಳುತ್ತಾರೆ. ಮೊದಲಿಗೆ ಚಂಪಾ (ಹಿರಿ) ಷಷ್ಠಿಯಾದರೆ, ಅನಂತರದ ತಿಂಗಳಲ್ಲಿ ಕಿರು ಷಷ್ಠಿಯನ್ನು ಆಚರಿಸಲಾಗುತ್ತಿದೆ. ಸುಬ್ರಹ್ಮಣ್ಯ ದೇಗುಲಗಳಲ್ಲಿ ಡಿ.2ರಂದು ಚಂಪಾಷಷ್ಠಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆ ದಿನ ವಿಶೇಷ ಪೂಜೆ, ಷಣ್ಮುಖ ದೇವರ ಅಧಿದೇವತೆಯಾದ ನಾಗನ ವಿಗ್ರಹವನ್ನು ಅಶ್ವತ್ಥ ಕಟ್ಟೆಯಲ್ಲಿಟ್ಟು, ದೇವರನ್ನು ಆವಾಹನೆ ಮಾಡಿ, ಹಾಲೆರೆದು, ಅಭಿಷೇಕ ಮಾಡಿ, ಪಾಯಸ, ನೈವೇದ್ಯ ಅರ್ಪಿಸಲಾಗುತ್ತದೆ. ಕೆಲವೆಡೆಗಳಲ್ಲಿ ದೇವರಿಗೆ ಉತ್ಸವ ಕೂಡ ನಡೆಯುತ್ತದೆ. ಕುಂದಾಪುರ ಭಾಗದ ಕೆಲವು ಪ್ರಮುಖ ಸುಬ್ರಹ್ಮಣ್ಯ ದೇಗುಲಗಳಲ್ಲಿ ಷಷ್ಠಿಯಂದು ನಡೆಯುವ ಆಚರಣೆ, ಹಿನ್ನೆಲೆಗಳ ಕುರಿತು ಇಲ್ಲಿ ನೀಡಲಾಗಿದೆ. ಕಾಳಾವರ, ಉಳ್ಳೂರು, ತೆಕ್ಕಟ್ಟೆ ಹಾಗೂ ಅಮಾಸೆಬೈಲಿನಲ್ಲಿ ಚಂಪಾಷಷ್ಠಿಗೆ ವಿಶೇಷ ಪೂಜೆ ನೆರವೇರಿದರೆ, ಗುಡ್ಡಮ್ಮಾಡಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾತ್ರ ಕಿರು ಷಷ್ಠಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

Advertisement

ನಾಗಪ್ರತ್ಯಕ್ಷವಾಗುವ ಕಾಳಾವರದ ಶ್ರೀಕಾಳಿಂಗ ದೇವಸ್ಥಾನ
ಕೋಟೇಶ್ವರ: ಸುಮಾರು 800 ವರ್ಷ ಗಳ ಇತಿಹಾಸ ಹೊಂದಿರುವ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಡಿ.2ರಂದು ಹಿರಿ ಷಷ್ಠಿ ನಡೆಯಲಿದ್ದು, ಡಿ. 3 ರಂದು ನಾಗಮಂಡಲೋತ್ಸವ ನಡೆಯಲಿದೆ.

ವಿಜಯ ನಗರದ ಆಳುಪ ಆರಸರ ಕಾಲದಲ್ಲಿ ಈ ದೇಗುಲ ಜೀರ್ಣೋದ್ಧಾರಗೊಂಡಿತ್ತು. ಸಣ್ಣದೊಂದು ಗುಡಿಯ ಹೊರಗಡೆ ನಾಗ ದೇವರ ಪ್ರತಿಷ್ಠೆಗೈದು ಹುತ್ತಕ್ಕೆ ಪೂಜೆ ಮಾಡುವ ಪರಂಪರೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಇದು ಕಾರಣಿಕ ಕ್ಷೇತ್ರವಾಗಿದ್ದು, ಎರಡನೇ ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿಯಿದೆ.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಎಲ್ಲ ಸೇವಾ ಕಾರ್ಯವು ಇಲ್ಲಿ ನಡೆಯುತ್ತದೆ. ಕಾಳಿಂಗ ಎಂಬ ನಾಮಧೇಯದಲ್ಲಿರುವ ಈ ದೇಗುಲದಿಂದಲೇ ಈ ಊರಿಗೆ ಕಾಳಾವರ ಎಂಬ ಹೆಸರು ಬಂದಿದೆ ಎಂದು ತಿಳಿದು ಬರುತ್ತದೆ. ಇಲ್ಲಿ ಕಾಣುವ ದೇವರ ವಿಶಿಷ್ಟ ಕಲ್ಲಿನ ಮೂರ್ತಿಗಳು ಬೇರೆಲ್ಲೂ ಕಾಣಸಿಗದು.

ಪ್ರತಿ ವರ್ಷ ನಾಗ ಪ್ರತ್ಯಕ್ಷ
ಹಿರಿ ಷಷ್ಠಿಯ ಸಂದರ್ಭದಲ್ಲಿ ನಡೆಯವ ಪೂಜಾ ಕಾರ್ಯಗಳ ನಡುವೆ ನಾಗರಹಾವು ಹುತ್ತದ ಮಧ್ಯದಿಂದ ಪ್ರತಿ ವರ್ಷ ಪ್ರತ್ಯಕ್ಷವಾಗುವ ಪರಂಪರೆ ಇಂದಿಗೂ ಕಂಡು ಬಂದಿದೆ. ಇದು ಸ್ಥಳ ಪುರಾಣದ ಮಹಿಮೆಯಾಗಿದೆ ಎಂಬುವುದು ಗ್ರಾಮಸ್ಥರ ನಂಬಿಕೆ.

Advertisement

ಕಾರಣಿಕ ಕ್ಷೇತ್ರ ತೆಕ್ಕಟ್ಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ತೆಕ್ಕಟ್ಟೆ: ಪ್ರಸಿದ್ಧ ಕಾರಣಿಕ ಕ್ಷೇತ್ರದಲ್ಲೊಂದಾದ ತೆಕ್ಕಟ್ಟೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಹಿಂದೆ ಇಲ್ಲಿನ ಶ್ರೀ ನಾಗ ದೇವರ ಪರಮ ಭಕ್ತೆ ಲಕ್ಷ್ಮೀಯಮ್ಮನವರು ದರ್ಶನಕ್ಕಾಗಿ ಮೂಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಹೋದಾಗ ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುವ ಸಂದರ್ಭದಲ್ಲಿ ದೇಗುಲದ ನಿಯಮ ಮೀರಿ ತನಗೆ ಅರಿವಿಲ್ಲದೆ ಗುಡಿ ಪ್ರವೇಶಿಸಿದ್ದರು. ಆಗ ಅಲ್ಲಿನ ಅರ್ಚಕರು ತಪ್ಪು ಕಾಣಿಕೆ ಹಾಕುವಂತೆ ಭಕ್ತೆ ಲಕ್ಷ್ಮೀ ಅಮ್ಮನವರಲ್ಲಿ ಸೂಚಿಸಿದರು.

ಅರ್ಚಕರ ಇಚ್ಛೆಯಂತೆ ಕಾಣಿಕೆ ಸಲ್ಲಿಸಿ ಹಿಂದಿರುಗುವ ಸಂದರ್ಭದಲ್ಲಿ ಅವರಿಗೆ ಅರಿವಿಲ್ಲದೆ ಸೀರೆ ಸೆರಗಿನಲ್ಲಿ ಕುಳಿತು ಬಂದಿದ್ದ ಹಾವಿನ ಮರಿಯನ್ನು ಇಲ್ಲಿನ ಹುತ್ತಕ್ಕೆ ಬಿಟ್ಟು ಬಳಿಕ ಪೂಜಿಸಲಾಯಿತು ಎಂಬ ಪ್ರತೀತಿ ಇದೆ.

ಪ್ರಸ್ತುತ ಇಲ್ಲಿ ದೇಗುಲ ಇದ್ದು, ಇಷ್ಟಾರ್ಥ ಸಿದ್ಧಿಯ ದೇವರೆಂಬ ನಂಬಿಕೆ ಇದೆ.ಕರಾವಳಿ ತೀರದಿಂದ ಅನತಿ ದೂರದಲ್ಲಿ ಆಲಯದಲ್ಲಿ ಕಂಗೊಳಿಸುತ್ತಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದ ಸುತ್ತಲೂ ಫಲವತ್ತಾದ ಕೃಷಿ ಭೂಮಿಗಳಲ್ಲಿ ದವಸ, ಧಾನ್ಯಗಳು ಸಮೃದ್ಧವಾಗಿ ಬೆಳೆಯುತ್ತಿದೆ.

ಸಪ್ತ ಕ್ಷೇತ್ರ ಉಳ್ಳೂರು ಕಾರ್ತಿಕೇಯ ದೇಗುಲ
ಬಸ್ರೂರು: ಉಳ್ಳೂರು ಕಂದಾವರದ ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಸಪ್ತ ಕ್ಷೇತ್ರಗಳಲ್ಲಿ ಉಳ್ಳೂರು ಕೂಡ ಒಂದಾಗಿದೆ. ಸುಮಾರು 1,200 ವರ್ಷಗಳ ಸುದೀರ್ಘ‌ ಇತಿಹಾಸವಿದೆ. ಗರ್ಭಗುಡಿಯ ಹೊರಪೌಳಿ ಶಿಥಿಲಾವಸ್ಥೆಯ ಬಳಿಕ 2014 ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು.

ಈ ಸುಬ್ರಹ್ಮಣ್ಯ ದೇವರು ವಿಶ್ವಾಮಿತ್ರ ಗೋತ್ರದ ಉಡುಪ, ಹೆಬ್ಟಾರರಿಗೂ ಕುಲದೇವರಾಗಿದ್ದು, ಈ ಹಿಂದೆ ಸ್ಕಂದ ನೆಲೆಸಿರುವ ಸ್ಕಂದಪುರವಾಗಿದ್ದು, ಕಾಲ ಕ್ರಮೇಣ ಅದು ಕಂದಾವರವಾಗಿ ಪ್ರಸಿದ್ಧಿ ಪಡೆಯಿತು ಎನ್ನುವುದಾಗಿ ಸ್ಥಳೀಯರು ಹೇಳುತ್ತಾರೆ.

ಕೃತ್ತಿಕೆಯರ ಹಾಲುಂಡ ಕಾರಣ ಕಾರ್ತೀಕೇಯ ಹೆಸರು ಬಂದಿದೆ ಎನ್ನುವ ಪ್ರತೀತಿಯಿದೆ.

ಪ್ರತಿ ಹುಣ್ಣೆಮೆಯಂದು ನಾಗ ಸಂದರ್ಶನ ಮತ್ತು ಅನ್ನಸಂತರ್ಪಣೆ ನಡೆಯುವುದು ವಿಶೇಷ. ಕಾರ್ತಿಕ ಮಾಸದ ಹುಣ್ಣೆಮೆಯಂದು ಇಲ್ಲಿ ದಿಪೋತ್ಸವ, ಮಕರ ಮಾಸದ ಎರಡನೇ ದಿನ ಶ್ರೀ ಮನ್ಮಹಾರಥೋತ್ಸವವು ನಡೆಯುತ್ತದೆ.

ಕಡವಾಸೆ ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನ
ಸಿದ್ದಾಪುರ: ಕಲಿಯುಗದ ಪೂರ್ವದಲ್ಲಿ ಅತಿ ದುರುಳರೂ ಹಾಗೂ ಅಜೇಯರೂ ಎಂದೆನಿಸಿಕೊಂಡ ಖರ ಹಾಗೂ ರಟ್ಟಾಸುರೆಂಬ ಸಹೋದರರ ರಾಜಧಾನಿಯಾದ ಕಡವಾಸೆ (ಈಗಿನ ಅಮಾಸೆಬೈಲು)ಯಲ್ಲಿ ಈ ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನವಿದೆ.

ಕಡವಾಸೆ ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನದ ಸ್ಥಳ ಪುರಾಣದ ಬಗ್ಗೆ ದಾಖಲೆಗಳು ಇಲ್ಲದಿದ್ದರೂ, ಪ್ರತೀತಿಗಳು ಇವೆ. ಗ್ರಾಮದ ಅಧಿದೇವತೆ ಶ್ರೀ ಕುಮಾರ ಸುಬ್ರಹ್ಮಣ್ಯ ದೇವರಾಗಿದ್ದಾನೆ. ಇಲ್ಲಿನ ಆಸುಪಾಸಿನ ಹತ್ತಾರು ಹಳ್ಳಿಗಳ ಭಕ್ತರು ಷಷ್ಠಿಯ ದಿನ ಸುಬ್ರಹ್ಮಣ್ಯ ಸ್ವಾಮೀಯ ಜಾತ್ರೆಗೆ ಸೇರಿ, ಹರಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಈ ಕ್ಷೇತ್ರ ಕ್ರಿ. ಶ. 9-10ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸುಮಾರು 5 ತಲೆಮಾರುಗಳ ಹಿಂದೆ ಶೇಷ ಉಡುಪರು ಕಂದಾವರದಿಂದ ಇಲ್ಲಿಗೆ ಪೂಜಾ ಕೈಂಕಾರ್ಯಕ್ಕಾಗಿ ಬಂದು ನೆಲೆಸಿದರು. ಸುಮಾರು 400 ವರ್ಷಗಳ ಹಿಂದೆ ಕಂದಾವರದ ಶೇಷ ಉಡುಪರು ಮೈಸೂರು ಒಡೆಯರ ಆಸ್ಥಾನದ ಮುಂದೆ ಯಕ್ಷಗಾನದ ದಶಾವತಾರಕ್ಕೆ ಸಂಬಂಧಿಸಿದಂತೆ ವಿವಿಧ ಹಾಡುಗಾರಿಕೆ ಪ್ರದರ್ಶಿಸುತ್ತಿರುವಾಗ ಜೀವಂತ ಹಾವು ಬಂದು ತಲೆದೂಗುವಂತೆ ಮಾಡಿದರೆಂದು ಹೇಳಲಾಗುತ್ತಿದೆ. ಆಗ ಇವರಿಗೆ ಭಾಗವತ ಶ್ರೇಷ್ಠರೆಂಬ ಬಿರುದನ್ನು ನೀಡಿದ್ದು, ಅಂದಿನಿಂದ ಉಡುಪರು ಭಾಗವತರಾಗಿ ಕರೆಸಿಕೊಂಡರು. ಇಂದಿಗೂ ಭಾಗವತ ಕುಟುಂಬ ಈ ದೇವಸ್ಥಾನದ ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

-ಮಾಹಿತಿ: ಡಾ| ಸುಧಾಕರ ನಂಬಿಯಾರ್‌/ ದಯಾನಂದ ಬಳ್ಕೂರು/ಸತೀಶ್‌ ಆಚಾರ್‌ ಉಳ್ಳೂರು/ ಲೋಕೇಶ್‌ ಆಚಾರ್‌ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next