ಸುಬ್ರಹ್ಮಣ್ಯ : ಚಂಪಾಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಪೊಲೀಸ್ ಠಾಣೆಯ ಸಿಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಯುವಕನನ್ನು ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆಂಬ ಘಟನೆಗೆ ಸಂಬಂಧಿಸಿ ಇದೀಗ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಲೀಸ್ ಸಿಬಂದಿ ವಿರುದ್ಧ ದೂರು ದಾಖಲಾಗಿದೆ.
ಕಡಬ ತಾಲೂಕಿನ ಕುಟ್ರಾಪಾಡಿ ಗ್ರಾಮದ ಭೀಮಗುಂಡಿ ಶಶಿಕಿರಣ್ (19) ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಸಿಬಂದಿ ಭೀಮಣ್ಣ ಗೌಡ ಅವರ ವಿರುದ್ಧ ದೂರು ದಾಖಲಾಗಿದೆ.
ನ. 28ರಂದು ಪಂಚಮಿಯಂದು ವ್ಯಾಪಾರ ನಡೆಸುತ್ತಿದ್ದ ವೇಳೆ ರಾತ್ರಿ 11.30ರ ವೇಳೆ ಪೊಲೀಸ್ ಸಿಬಂದಿ ಭೀಮಣ್ಣ ಗೌಡ ಸ್ಟಾಲ್‌ಗೆ ಬಂದು 5,000 ರೂ. ಹಣ ನೀಡುವಂತೆ ಹೇಳಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಅಂಗಡಿಯಲ್ಲಿದ್ದ ವಸ್ತುಗಳನ್ನು ಠಾಣೆಗೆ ಕೊಂಡೊಯ್ಯುವಂತೆ ತಿಳಿಸಿದ್ದರು. ಆಬಳಿಕ ಪೊಲೀಸ್ ಕ್ವಾರ್ಟರ್ಗೆ ಕೊಂಡೊಯ್ದು ಮೊಬೈಲ್, ಹಣ ಕಿತ್ತುಕೊಂಡು ಸೊಂಟಕ್ಕೆ ತುಳಿದು ಚಿತ್ರಹಿಂಸೆ ನೀಡಿದಲ್ಲದೇ ಬೆದರಿಕೆಯೊಡಿದ್ದರು. ಇದರಿಂದ ಆಘಾತಗೊಂಡು ಅಸ್ವಸ್ಥನಾಗಿದ್ದರಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆ. ಪೊಲೀಸರ ಭಯದಿಂದ ದೂರು ನೀಡಲು ಹಿಂದೇಟು ಹಾಕಿದ್ದು ಇದೀಗ ಗೆಳೆಯರ ಸಲಹೆಯಂತೆ ದೂರು ನೀಡಿದ್ದೇನೆ ಎಂದು ಶಶಿಕಿರಣ್ ಹೇಳಿದ್ದಾರೆ.
ದೂರಿನ ಆಧಾರದಲ್ಲಿ ಪೊಲೀಸ್ ಸಿಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ನಡುವೆ ಆರೋಪಿ ಪೊಲೀಸ್ ಸಿಬಂದಿಯನ್ನು ಕಡಬ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ