ಸುಬ್ರಹ್ಮಣ್ಯ: ಕಾಡಾನೆಗಳ ಹಿಂಡು ಮಂಗಳವಾರ ತಡರಾತ್ರಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಹಾನಿಗೊಳಿಸಿ ಅಪಾರ ನಷ್ಟ ಉಂಟು ಮಾಡಿರುವ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯಡ್ಕ ಭಾಗದಲ್ಲಿ ಸಂಭವಿಸಿದೆ.
ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕ ಸುಧಾಕರ ಎಸ್., ಪ್ರಸಾದ್, ಲಕ್ಷ್ಮಣ ಅವರ ತೋಟಕ್ಕೆ ಆನೆಗಳು ದಾಳಿ ಮಾಡಿವೆ. ಒಟ್ಟು 300 ಅಧಿಕ ಅಡಿಕೆ, 10ಕ್ಕೂ ಅಧಿಕ ತೆಂಗು, ಹಲವಾರು ಬಾಳೆ ಗಿಡಕ್ಕೆ ಹಾನಿಮಾಡಿದೆ. ಪಸಲು ಭರಿತ ಅಡಿಕೆ, ತೆಂಗು, ಬಾಳೆ ಕಾಡಾನೆ ದಾಳಿಗೆ ನೆಲಕಚ್ಚಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ, ಪಂಜ ವಲಯ ಅರಾಣ್ಯಾಧಿಕಾರಿ ಮಂಜುನಾಥ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಉಪವಲಯ ಅರಣ್ಯಾಧಿಕಾರಿ ಅಜಿತ್, ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಜತೆಗಿದ್ದರು.
ಆನೆ ಕಂದಕಕ್ಕೆ ಆಗ್ರಹ
ಈ ಭಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ಜನರು ಆತಂಕ ಗೊಂಡಿದ್ದಾರೆ. ಕೃಷಿ ನಾಶಕ್ಕೊಳಗಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಆನೆ ಕಂದಕ ನಿರ್ಮಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದರು.
ಗ್ರಾ.ಪಂ. ಪ್ರಭಾರ ಪಿಡಿಒ ಗುರುವ ಎಸ್., ಗ್ರಾ.ಪಂ. ಸದಸ್ಯ ಚಂದ್ರಶೇಖರ ಹಳೆನೂಜಿ, ಸ್ಥಳೀಯರಾದ ಲಕ್ಷ್ಮಣ ಗೌಡ, ಸುಧಾರಕ ಎಸ್., ಪ್ರಸಾದ್, ಸುಂದರ ಗೌಡ ಬಳ್ಳೇರಿ, ಶೀನಪ್ಪ ಗೌಡ ಕಾನ ಉಪಸ್ಥಿತರಿದ್ದರು.