ಬೆಳಗಾವಿ: ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದ್ದು, ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯನ್ನು ಕಾವೇರಿ ನದಿಗೆ ಅಡ್ಡಲಾಗಿ ಆರ್ಕಾವತಿ ಹಾಗೂ ಕಾವೇರಿ ನದಿಯ ಸಂಗಮದ ಸಮೀಪದಲ್ಲಿ ನಿರ್ಮಿಸಿ, 67.16 ಟಿ.ಎಂ.ಸಿ ನೀರನ್ನು ಶೇಖರಿಸಲು ರೂ.9000.00 ಕೋಟಿ ಮೊತ್ತದ ಡಿ.ಪಿ.ಆರ್ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಕೇಂದ್ರ ಸರ್ಕಾರದ ವಿವಿಧ ನಿರ್ದೇಶನಾಲಯಗಳಲ್ಲಿ ಪರಿಶೀಲನೆಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ಸದಸ್ಯರಾದ ಡಾ| ತೇಜಸ್ವಿನಿಗೌಡ, ಇವರ ಪ್ರಶ್ನೆಗೆ ಉತ್ತರವಾಗಿ ಸಚಿವರು ಸದನದಲ್ಲಿ ಮೇಕೆದಾಟು ಯೋಜನೆ ಪ್ರಮುಖ ಉದ್ದೇಶಗಳನ್ನು ವಿವರಿಸಿದ್ದಾರೆ.
ಕಾವೇರಿ ನ್ಯಾಯಾಧೀಕರಣದ ದಿನಾಂಕ 05-02-2007 ರ ಅಂತಿಮ ತೀರ್ಪನ್ನು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ದಿನಾಂಕ 16-02-2018ರ ಆದೇಶದಲ್ಲಿ ಮಾರ್ಪಡಿಸಿರುವಂತೆ ತಮಿಳುನಾಡು ರಾಜ್ಯಕ್ಕೆ ಸಾಮಾನ್ಯ ಮಳೆ ವರ್ಷದಲ್ಲಿ 177.25 ಟಿ.ಎಂ.ಸಿ ನೀರನ್ನು ಮಾಸಿಕವಾರು ನಿಯಂತ್ರಿಸಲು. ಸರ್ವೋಚ್ಛ ನ್ಯಾಯಾಲಯದಿಂದ ಹಂಚಿಕೆಯಾಗಿರುವ 4.75 ಟಿ.ಎಂ.ಸಿ ನೀರನ್ನು ಬೆಂಗಳೂರು ನಗರವೂ ಸೇರಿದಂತೆ ಕುಡಿಯುವ ಹಾಗೂ ಗೃಹೋಪಯೋಗಿ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲು. 400 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲು. ಈ ಯೋಜನೆ ಕೈಗಳ್ಳಲಾಗುತ್ತಿದೆ ಎಂದು ಸಚಿವರು ಸದನಕ್ಕೆ ವಿವರಿಸಿದರು.
ಕೇಂದ್ರ ಸರ್ಕಾರದಿಂದ ತೀರುವಳಿಗಳನ್ನು ಪಡೆಯುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದ್ದು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.