ಚಾಮರಾಜನಗರ: ಜಿಲ್ಲೆಯಲ್ಲಿ 100 ವರ್ಷಗಳಿಗೂ ಮಿಗಿಲಾದ ಮುಜರಾಯಿ ಹಾಗೂ ಖಾಸಗಿ ದೇವಾಲಯಗಳನ್ನು ಗುರುತಿಸಿ, ಅಭಿವೃದ್ಧಿಗಾಗಿ ವಿಸ್ತೃತ ವರದಿ ಸಲ್ಲಿಸುವಂತೆ ಜಿಲಾಧಿಕಾರಿ ಡಾ.ಎಂ.ಆರ್. ರವಿ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ದೇವಾಲಯಗಳ ಅಭಿವೃದ್ಧಿ ಸಂಬಂಧ ಜಿಲ್ಲೆಯ ತಾಲೂಕುಗಳ ತಹಶಿಲ್ದಾರರು, ಮುಜರಾತಿ ಇಲಾಖೆ ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ಆ್ಯಪ್ ಮೂಲಕ ಸಭೆ ನಡೆಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ, ಪುರಾತನ ದೇಗುಲಗಳಿವೆ. ಮುಜರಾಯಿ ಇಲಾಖೆ ಮತ್ತು ಖಾಸಗಿಯವರಿಗೆ ಸೇರಿದ ಈ ದೇಗುಲಗಳ ಬಗ್ಗೆ ಮಾಹಿತಿ ದಾಖಲಿಸಬೇಕಿದೆ. ದೇವಸ್ಥಾನಗಳ ಅಭಿವೃದ್ಧಿಗಾಗಿ ಒದಗಿಸಬೇಕಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿ, ನೆರವು ನೀಡುವ ನಿಟ್ಟಿನಲ್ಲಿ ಸಂಪೂರ್ಣ ರೂಪುರೇಷೆ ತಯಾರಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಸೌಲಭ್ಯಗಳ ಬಗ್ಗೆ ಪರಿಶೀಲಿಸಿ: ಪ್ರತಿ ದೇವಾಲಯ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಹಲವು ದೇವಾಲಯಗಳು ಪ್ರಸಿದ್ಧಿ ಹೊಂದಿವೆ. ದೇವಾಲಯಗಳ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಿ ಸಂಸ್ಕೃತಿಯನ್ನು ಪರಿಚಯಿಸ ಬೇಕಿದೆ. ಪ್ರತಿ ತಾಲೂಕಿನಲ್ಲಿ 100 ವರ್ಷಗಳಿಗೂ ಹಿಂದಿನ ದೇವಾಲಯಗಳನ್ನು ಗುರುತಿಸಿ ಪಟ್ಟಿ ಮಾಡಬೇಕು. ಈ ದೇವಾಲಯಗಳಿಗೆ ಭೇಟಿ ನೀಡಿ ಅಗತ್ಯವಿರುವ ಮೂಲಸೌಲಭ್ಯಗಳ ಬಗ್ಗೆ ಪರಿಶೀಲಿಸಬೇಕು. ಪ್ರತಿ ದೇವಾಲಯಗಳ ದಾಖಲೆ, ಮಾಹಿತಿ ಸಂಗ್ರಹಣೆ ಮಾಡಿ ಸಾರ್ವಜನಿಕರ ವಿಶ್ವಾಸ, ಸಹಭಾಗಿತ್ವದೊಂದಿಗೆ ಹಂತಹಂತವಾಗಿ ದೇವಾಲಯಗಳಿರುವ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
ಯೋಜನಾ ವರದಿ ಸಿದ್ಧಪಡಿಸಿ: ಅನೇಕ ದೇವಾಲಯಗಳು ಜಿಲ್ಲೆಯ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಬರಲಿವೆ. ಇಂತಹ ದೇವಾಲಯಗಳನ್ನು ವಿಶೇ ಷವಾಗಿ ಪ್ರವಾಸಿಗರು ಭೇಟಿ ನೀಡುವ ಯಾತ್ರಾಕ್ಷೇತ್ರಗಳಾಗಿ ರೂಪಿಸ ಬೇಕಿದೆ. ಈ ಧಾರ್ಮಿಕ ತಾಣಗಳ ಪ್ರಗತಿಗೆ ಬೇಕಿರುವ ಪ್ರಮುಖ ಸೌಕರ್ಯಗಳನ್ನು ಕಲ್ಪಿಸಬೇಕು. ಈ ಉದ್ದೇಶ ದಿಂ ದಲೇ ವಿಸ್ತತ ಯೋಜನಾ ವರದಿ ಸಿದ್ಧಪಡಿಸಬೇಕು ಎಂದರು. ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರರಾದ ಚಿದಾನಂದ್, ಕೆ. ಕುನಾಲ್, ನಂಜುಂ ಡಯ್ಯ, ಮುಜರಾಯಿ ಇಲಾಖೆ ವಿಭಾ ಗದ ಅಧಿಕಾರಿ ಧನಂಜಯ್ ಹಾಜರಿದ್ದರು.