Advertisement

ಕಾಮಗಾರಿ-ಏಜೆನ್ಸಿ ಬದಲಿಸಬೇಕಾದರೆ ವರದಿ ಸಲ್ಲಿಸಿ

12:39 PM Jul 24, 2019 | Team Udayavani |

ಕೊಪ್ಪಳ: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈಗಾಗಲೇ ನಿಗದಿಪಡಿಸಿದ ಕಾಮಗಾರಿ ಅಥವಾ ಏಜೆನ್ಸಿಯನ್ನು ಬದಲಿಸಬೇಕಿದ್ದರೆ ಈ ಕುರಿತು ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಹೈಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಿಡುಗಡೆಯಾದ ಹಣ ಬಳಕೆ ಪ್ರಮಾಣ ಪತ್ರ ಕುರಿತ ಅನುಷ್ಠಾನ ಅಧಿಕಾರಿಗಳೊಂದಿಗಿನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬದಲಾವಣೆ ಕಾಮಗಾರಿಯಲ್ಲಿ ಹಂಚಿಕೆಯಾದ ಜಾಗದ ಬದಲಾವಣೆಯೂ ಒಳಗೊಂಡಿದ್ದು, ಯಾವುದೇ ಬದಲಾವಣೆ ಇದ್ದರೆ ಅದಕ್ಕೆ ತಕ್ಕ ಪ್ರಸ್ತಾವನೆಯನ್ನು ಆ. 15ರೊಳಗೆ ಸಲ್ಲಿಸಿ ಮತ್ತು ಸೆ. 1ರಿಂದ ಕಡ್ಡಾಯವಾಗಿ ಕಾಮಗಾರಿ ಆರಂಭಿಸಬೇಕು. ಅಲ್ಪಾವಧಿ ಅಥವಾ ದೀರ್ಘಾವಧಿ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಾಗ ಸರಿಯಾದ ಮೊತ್ತ ನಮೂದಿಸಿ ನಿಗದಿತ ಕಾಲಮಿತಿಯೊಳಗೆ ಅನುದಾನ ಬಳಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಆರ್ಥಿಕ ಹಾಗೂ ಭೌತಿಕ ಸಾಧನೆ ಸಮನಾಗಿರುವಂತೆ ಸರಿಯಾದ ದತ್ತಾಂಶಗಳನ್ನು ಒಳಗೊಂಡ ವರದಿ ಸಲ್ಲಿಸಬೇಕು ಎಂದರು.

ಹೈಕ ಮಂಡಳಿಯಿಂದ 2013-14ರಿಂದ 2018-19ರವರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಹಂತದಲ್ಲಿ ಏಜೆನ್ಸಿ ನೇಮಿಸಿ ಅನುಷ್ಠಾನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ 2013-14ನೇ ಸಾಲಿನಿಂದ 2018-19ರವರೆಗೆ ಸಾಮಾನ್ಯ, ಎಸ್‌ಸಿಪಿ, ಟಿಎಸ್‌ಪಿ ವಿಭಾಗದಲ್ಲಿ ನಿರ್ದಿಷ್ಟ ಕಾಮಗಾರಿಗಳಿಗೆ ನಿರ್ದಿಷ್ಟ ಮೊತ್ತವನ್ನು ಸಹ ಬಿಡುಗಡೆ ಮಾಡಲಾಗಿದೆ. ಆದರೆ ಬಿಡುಗಡೆ ಆದ ಹಣವನ್ನು ಅನುಷ್ಠಾನ ಏಜೆನ್ಸಿಗಳು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಅಭಿವೃದ್ಧಿ ಕಾಮಗಾರಿಗಳೂ ಅನುಷ್ಠಾನಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಏಜೆನ್ಸಿಗಳ ಅನುಷ್ಠಾನ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿಗೆ ಅನುಮತಿ ಸಿಕ್ಕ ನಂತರ ನಿಗದಿ ಪಡಿಸಿದ ಕಾಲಮಿತಿಯೊಳಗೆ ಟೆಂಡರ್‌ ಪ್ರಕ್ರಿಯೆ ಸೇರಿದಂತೆ ಕಾಮಗಾರಿಯ ಎಲ್ಲ ಹಂತಗಳು ಪೂರ್ಣಗೊಳ್ಳಬೇಕು. 2019-20ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ಧಪಡಿಸಿದ ಕ್ರಿಯಾಯೋಜನೆಗೆ ವೇಳಾಪಟ್ಟಿ ಅನುಸಾರ ಕಾಮಗಾರಿ ಆರಂಭಿಸಬೇಕು. 2018-19ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯು ಉತ್ತಮ ಸಾಧನೆ ಮಾಡಿದೆಯಾದರೂ ಈ ಹಿಂದಿನ ಅವಧಿಯ ಕಾಮಗಾರಿಗಳು ಕೆಲವೆಡೆ ಇನ್ನೂ ಆರಂಭವಾಗಿಲ್ಲ. ಆರಂಭವಾದ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಳು ಬಾಕಿಯಿವೆ. ಅವುಗಳನ್ನು ಮುತುವರ್ಜಿ ವಹಿಸಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಎಂದರು.

Advertisement

ಕೆಲ ತಾಲೂಕಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ನೀಡಿದ ವರದಿಯಲ್ಲಿ ಒಟ್ಟು ಗ್ರಾಮಗಳ ವಿವಿಧ ಕಾಮಗಾರಿಗಳ ಕ್ರೋಢೀಕೃತ ವರದಿಯನ್ನು ನೀಡಿದ್ದೀರಿ. ಯಾವ ಕಾಮಗಾರಿ ಯಾವ ಗ್ರಾಮಕ್ಕೆ ಸಂಬಂಧಿಸಿದ್ದು ಎಂಬ ವಿವರಣೆಯಿಲ್ಲ. ಅದನ್ನು ಬದಲಾಯಿಸಿ ಗ್ರಾಮವಾರು ರಸ್ತೆ ಅಭಿವೃದ್ಧಿ, ಒಳ ಚರಂಡಿ ಕಾಮಗಾರಿ, ಸಿಸಿ ರಸ್ತೆ ನಿರ್ಮಾಣ ಯಾವ ಗ್ರಾಮಕ್ಕೆ ಯಾವ ಕಾಮಗಾರಿ ಮತ್ತು ಕಾಮಗಾರಿಯ ಪ್ರಗತಿ, ಮೊತ್ತ ಎಲ್ಲ ವಿವರಗಳನ್ನು ಒಳಗೊಂಡ ಮಾಹಿತಿ ಸಲ್ಲಿಸಬೇಕೆಂದರು.

ವಸತಿ ನಿಲಯಗಳ ನಿರ್ಮಾಣ ಸೇರಿದಂತೆ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಕಳೆದ ವರ್ಷವೇ ಅನುಮತಿ ನೀಡಲಾಗಿದೆ. ಆದರೆ ಹಂಚಿಕೆಯಾದ ಜಾಗದಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ ಎಂಬ ಮಾಹಿತಿ ನೀಡಲಾಗಿದೆ. ಹಂಚಿಕೆಯಾದ ಜಾಗದ ಕುರಿತು ಏನಾದರೂ ವ್ಯಾಜ್ಯಗಳು ಅಥವಾ ಗೊಂದಲಗಳಿದ್ದರೆ, ಅಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದ ಕಾರಣಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಇದರಿಂದ ಮುಂದೆ ಉಂಟಾಗುವ ಗೊಂದಲಗಳನ್ನು ತಪ್ಪಿಸಬಹುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ನೇಹಾ ಜೈನ್‌, ಎಡಿಸಿ ಸೈಯಿದಾ ಅಯಿಷಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next