ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ನೇಮಿಸಲಾಗಿರುವ ಸಹಾಯಕ ವೆಚ್ಚ ವೀಕ್ಷಕರು ನೇರವಾಗಿ ವೆಚ್ಚ ವೀಕ್ಷಕರ ಅಧೀನದಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ತಪ್ಪದೇ ವಸ್ತುನಿಷ್ಠ ವೆಚ್ಚದ ವರದಿ ಸಲ್ಲಿಸುವಂತೆ ಚುನಾವಣಾ ವೆಚ್ಚ ವೀಕ್ಷಕ ಸುಹಾಸ್ ಕುಲಕರ್ಣಿ ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ವೆಚ್ಚ ವೀಕ್ಷಕರ ಸಭೆ ನಡೆಸಿದ ಅವರು, ಚುನಾವಣೆಗೆ ನೇಮಕಗೊಂಡಿರುವ ಸಹಾಯಕ ವೆಚ್ಚ ವೀಕ್ಷಕರು ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶದೊಂದಿಗೆ ಎಲ್ಲರೂ ಪಾರದರ್ಶಕ ಮನೋಭಾವದೊಂದಿಗೆ ಕೆಲಸ ಮಾಡಬೇಕು.
ಚುನಾವಣೆಗಾಗಿ ಎಲ್ಲ ಮೂಲ ಸೌಲಭ್ಯ ಕಲ್ಪಿಸಿದ್ದು, ನಿಮಗೆ ನೀಡಿರುವ ಎಲ್ಲ ಜವಾಬ್ದಾರಿ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಚುನಾವಣೆ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಇಲ್ಲದೇ ಕೆಲಸ ಮಾಡಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ವೆಚ್ಚ ಸೇರಿ ಇತರೆ ಕಾರ್ಯಗಳಿಗೆ ಸಂಬಂಧಿ ಸಿದಂತೆ ನೇರವಾಗಿ ದೂರವಾಣಿ ಮೂಲಕ ಅಥವಾ ವಾಟ್ಸ್‌ಆ್ಯಪ್‌ಗ್ಳ ಮೂಲಕ ಸಂಪರ್ಕಿಸುವಂತೆ ಸಲಹೆ ನೀಡಿದರು.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಆಯೊಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾ ಇಡಲು ಹಾಗೂ ಅಭ್ಯರ್ಥಿಗಳಿಂದ ಯಾವುದೇ ರೀತಿಯ ನಡೆಯುವ ಆಮಿಷಗಳ ನಿಯಂತ್ರಣಕ್ಕಾಗಿ ಸಿ-ವಿಜಿಲ್ ಆಪ್ ಅಭಿವೃದ್ಧಿಪಡಿಸಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಯಾವುದೇ ರೀತಿಯ ಅಕ್ರಮದಲ್ಲಿ ತೊಡಗಿದ್ದರೂ ಅಂಥ ಚಟುವಟಿಕೆ ನಿಯಂತ್ರಿಸಲು ಸಾರ್ವಜನಿಕರು ಅಕ್ರಮದ ವಿಡಿಯೋ, ಛಾಯಾಚಿತ್ರ ತೆಗೆದು ಅಪ್ ಲೋಡ್ ಮಾಡಿದಲ್ಲಿ ನೇರವಾಗಿ ಚುನಾವಣಾ ಆಯೋಗವೇ ಕ್ರಮ ಕೈಗೊಳ್ಳಲಿದೆ. ದೂರು ನೀಡುವವರು ಸ್ಮಾರ್ಟ್‌ಪೋನ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿ, ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಹಾಗೂ ಮತಕ್ಷೇತ್ರದ ಹೆಸರು ನಮೂದಿಸಬೇಕು ಎಂದರು.
ದಾಖಲಾದ ದೂರುಗಳೊಂದಿಗೆ ರಾಜ್ಯ, ರಾಷ್ಟ್ರಮಟ್ಟದ ಅಧಿ ಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲಿದ್ದು, ವಿಡಿಯೋ ಅಪ್‌ಲೋಡ್ ಮಾಡಿದ ಒಂದು ನೂರು ನಿಮಿಷ್‌ಗಳಲ್ಲಿ ಅಧಿಕಾರಿಗಳಿಂದ ಉತ್ತರ ಸಹ ಸಿಗಲಿದೆ. ಚುನಾವಣಾ ಅಕ್ರಮಗಳ ತಡೆಗೆ ಸಾರ್ವಜನಿಕರ ಬಳಕೆಗೆ ಈ ಆ್ಯಪ್ ಹೆಚ್ಚಿನ ಅನುಕೂಲವಾಗಲಿದೆ. ಯಾವುದೇ ರೀತಿಯ ಹಣ, ಮದ್ಯ, ಉಡುಗೊರೆಗೆ ಸಂಬಂಧಪಟ್ಟಂತೆ ಅಕ್ರಮ ಚಟುವಟಿಕೆಗಳು ನಡೆದಲ್ಲಿ ತಕ್ಷಣ ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸುವವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಎಂದರು.
ಜಿಲ್ಲಾಚುನಾವಣಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಚುನಾವಣೆಗೆ ನೇಮಕಗೊಂಡಿರುವ ಸಹಾಯಕ ವೆಚ್ಚ ವೀಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ವೆಚ್ಚ ವೀಕ್ಷಕರಿಗೆ ನಿಖರ ವರದಿ ಸಲ್ಲಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು. ಇಲ್ಲವೇ ಅಪರ ಜಿಲ್ಲಾಧಿಕಾರಿಗಳಿಗೂ ಸಲ್ಲಿಸಲು ಅವಕಾಶವಿದೆ.
ಈಗಾಗಲೇ ಈ ಕುರಿತು ಅಗತ್ಯ ತರಬೇತಿ ನೀಡಿದ್ದು, ಮೂಲ ಸೌಕರ್ಯದ ದೂರುಗಳಿದ್ದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಒಟ್ಟಾರೆ ಚುನಾವಣೆ ಕಾರ್ಯವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಉಪಸ್ಥಿತರಿದ್ದರು.