ಎಚ್.ಡಿ.ಕೋಟೆ: ತಾಲೂಕು ಕೇಂದ್ರ ಸ್ಥಾನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 68ನೇ ಗಣ ರಾಜ್ಯೊತ್ಸವ ಸಮಾರಂಭ ಪಟ್ಟಣದ ಸ್ಟೇಡಿಯಂ ಆವರಣದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಣೆ ಕಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕಿನ ಶಾಸಕ ಎಸ್.ಚಿಕ್ಕಮಾದು ಮಾತನಾಡಿ, 1952ರ ದೇಶದ ಸ್ವತಂತ್ರ ನಂತರ ಭಾರತ ದೇಶಕ್ಕೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನ ಜಾರಿಗೆ ತಂದ ದಿನವಿದು. ರಾಷ್ಟ್ರ ಧ್ವಜಕ್ಕೆ ಭಕ್ತಿಯಿಂದ ವಂದನೆ ಸಲ್ಲಿಸುವ ಮೂಲಕ ರಾಷ್ಟ್ರಕ್ಕೆ ಗೌರವ ಸಲ್ಲಿಸಬೇಕು ಎಂದರು.
ರಾಷ್ಟ್ರೀಯ ಹಬ್ಬ ಹರಿದಿನಗಳ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಎಂ. ನಂಜುಂಡಯ್ಯ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನ ಆಶಯಗಳನ್ನು ಭಾರತೀಯರಾದ ನಾವು ಅನುಸರಿಸಿ ಪಾಲಿಸಬೇಕು. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಸಂವಿಧಾನದ ಆಶಯಗಳನ್ನು ರೂಢಿಸಿಕೊಂಡು ಪಾಲಿಸಿದಾಗ ಸುಖೀರಾಜ್ಯವಾಗುವುದು ಖಚಿತ. ಇತ್ತೀಚಿನ ದಿನಗಳಲ್ಲಿ ಸಂವಿ ಧಾನದ ಕಾಯ್ದೆಗಳು ಜೀವನದ ಆಶೋತ್ತರಗಳಾಗಿವೆ.
ನಾಗರಿಕತೆ ಎಷ್ಟೇ ಬೆಳೆದರೂ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸಂವಿಧಾನ ಇಲ್ಲದೆ ಜೀವನ ನಡೆಸುವುದು ಅಸಾಧ್ಯ. ಹಾಗಾಗಿ ಸಂವಿಧಾನ ಸರ್ವರಲ್ಲೂ ಸಮಾನತೆ ಸರ್ವರಲ್ಲೂ ಭಾತೃತ್ವಕ್ಕೆ ಪೂರಕ ವಾಗಿದ್ದು ಸಂವಿಧಾನಕ್ಕೆ ಪೂರಕವಾಗಿ ಭಾರತದ ಪ್ರಜೆಗಳು ಪಾಲಿಸಿದರೆ ಬೇರೆ ದೇಶಗಳಿಗೂ ಮಿಗಿಲಾಗಿ ತಲೆ ಎತ್ತಿ ನಿಲ್ಲಬಹುದು ಎಂದ ಅವರು, ದೇಶದ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ಸ್ಮರಿಸಿಕೊಂಡರು.
ಆದಿಚುಂದನಗಿರಿ ಶಾಲೆಯ ಉಪಾಧ್ಯಾಯ ಸ್ವಾಮಿ ನಾಯಕ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪುರಸಭಾಧ್ಯಕ್ಷ ಮಂಜುಳಾ, ಉಪಾಧ್ಯಕ್ಷೆ ಸುಮಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟಸ್ವಾಮಿ, ಕೃಷ್ಣ, ಎಂ.ಪಿ. ನಾಗರಾಜು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಪುರಸಭಾ ಸದಸ್ಯರಾದ ಅನಿಲ್, ಎಚ್.ಸಿ. ನರಸಿಂಹಮೂರ್ತಿ, ತಜ್ಮುಲ್‌ಹುಸೇನ್, ಎನ್. ನಾಗರಾಜು, ನಾಗರಾಜು,
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀಕಂಠರಾಜೇ ಅರಸ್, ಕನ್ನಡ ಪ್ರಮೋದ, ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮೊದಲಾದವರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾತಂಡಗಳಿಗೆ ಶಾಸಕ ಚಿಕ್ಕಮಾದು ನಗದು ಬಹುಮಾನ ನೀಡಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿಶೇಷ ಪಥ ಸಂಚಲ ನಡೆಸಲಾಯಿತು.