ಮೈಸೂರು: ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೋಬಳಿಗೆ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು ಮಾಡಲಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶಾಲೆಗೆ ಜಾಗ ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಮಂಜೂರು ಮಾಡಿಸಿಕೊಳ್ಳಿ ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ವಿವಿಧ ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಮೊರಾರ್ಜಿ ದೇಸಾಯಿ ಶಾಲೆಗೆ ಕೇಂದ್ರ ಸರ್ಕಾರ 10 ಕೋಟಿ ಅನುದಾನ ಕೊಡಲಿದೆ. ಶಾಲೆ ಆರಂಭಕ್ಕೆ 10 ಎಕರೆ ಜಾಗ ಬೇಕಿದೆ. ಹೀಗಾಗಿ ಬಹಳಷ್ಟು ಶಾಲೆಗಳು ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತ್ತಿವೆ. ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಜಾಗ ಮಂಜೂರು ಮಾಡಿಸಿಕೊಳ್ಳಿ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ, ಮೈಸೂರು ಜಿಲ್ಲೆಗೆ ಹೊಸದಾಗಿ 8 ಮೊರಾರ್ಜಿ ದೇಸಾಯಿ ಶಾಲೆಗಳು ಮಂಜೂರಾಗಿದ್ದು, ಈ ಪೈಕಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಹಾಗೂ ತಿ.ನರಸೀಪುರ ತಾಲೂಕಿನ ಮುಗೂರು ಗ್ರಾಮಗಳಲ್ಲಿ ಶಾಲೆಗೆ ಜಾಗ ಗುರುತಿಸಿ, ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನುಳಿದ ಆರು ಶಾಲೆಗಳಿಗೆ ಜಾಗ ಗುರುತಿಸಬೇಕಿದೆ ಎಂದು ಹೇಳಿದರು.
ನಂಜನಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 4 ವರ್ಷಗಳಿಂದ ಫಿಜಿಷಿಯನ್ ಇಲ್ಲ. ಎಂಬ ಸಮಿತಿ ಸದಸ್ಯರಾದ ನಂಜನಗೂಡು ತಾಪಂ ಅಧ್ಯಕ್ಷರ ದೂರಿಗೆ ಪ್ರತಿಕ್ರಿಯಿಸಿ ಡಿಎಚ್‌ಒ ಡಾ.ಬಸವರಾಜು, ಅವರಿಗೆ ತಲೆಗೆ ಪೆಟ್ಟು ಬಿದ್ದಿರುವುದರಿಂದ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 4 ವರ್ಷಗಳಿಂದ ಸತತ ರಜೆ ಮೇಲಿರುವುದರಿಂದ ರಜೆ ಮೇಲೆ ಕಳುಹಿಸಲೂ ಬರುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ, ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಹಾಕಿ ಕೊಳ್ಳಲು ಪ್ರಸ್ತಾವನೆ ಕಳುಹಿಸಿ, ಇದರಿಂದ ಅವರ ಚಿಕಿತ್ಸೆಗೂ ಅನುಕೂಲವಾಗುತ್ತದೆ. ಇಲ್ಲವಾದರೆ ಕೆಲಸದಿಂದ ವಜಾ ಮಾಡಿ ಎಂದು ಸೂಚಿಸಿದರು. ಉಳಿದಂತೆ 36 ಇಲಾಖೆಗಳಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಶಾಸಕ ಕಳಲೆ ಎಂ.ಕೇಶವಮೂರ್ತಿ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಜಿಲ್ಲಾಧಿಕಾರಿ ರಂದೀಪ್ ಡಿ., ಜಿಪಂ ಸಿಇಒ ಪಿ.ಶಿವಶಂಕರ್ ಸಭೆಯಲ್ಲಿ ಇದ್ದರು.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತರೆ ಜನರ ಸಮಸ್ಯೆ ಅರ್ಥ ಆಗುವುದಿಲ್ಲ. ಕ್ಷೇತ್ರ ಭೇಟಿ ಮಾಡಿ, ಸಮಸ್ಯೆ ತಿಳಿದುಕೊಂಡು ಪರಿಹರಿಸುವ ಕೆಲಸ ಮಾಡಿ, ಸಭೆಯಲ್ಲಿ ಪ್ರಶ್ನೆ ಮಾಡುತ್ತಾರೆಂದು, 3ತಿಂಗಳ ಹಿಂದಿನ ಸಭೆಯಲ್ಲಿ ಕೇಳಿದ ಪ್ರಶ್ನೆ ಸಂಬಂಧ ತರಾತುರಿಯಲ್ಲಿ ಸಂಬಂಧಿಸಿದ ಇಲಾಖೆಗಳ ಮೇಲಧಿಕಾರಿಗಳಿಗೆ ಪತ್ರ ಬರೆಯುವುದು ಒಳ್ಳೆಯ ಬೆಳವಣಿಗೆಯಲ್ಲ.
-ಆರ್.ಧ್ರುವನಾರಾಯಣ್, ಸಂಸದ