Advertisement

ಸಾಹಿತ್ಯ ಸಮ್ಮೇಳನ ಅಂದಾಜು ಖರ್ಚು ಸಲ್ಲಿಸಿ

10:42 AM Dec 24, 2019 | Suhan S |

ಕಲಬುರಗಿ: ಫೆಬ್ರುವರಿಯಲ್ಲಿ ನಡೆಯುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸಮ್ಮೇಳನದ ವಿವಿಧ ಸಮಿತಿಗಳು ತಮ್ಮ ಸಮಿತಿ ಕಾರ್ಯಗಳಿಗೆ ತಗಲುವ ಖರ್ಚು-ವೆಚ್ಚದ ಅಂದಾಜು ಪಟ್ಟಿಯನ್ನು ಎರಡು ದಿನದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶರತ್‌ ಬಿ. ಸಮಿತಿ ಮುಖ್ಯಸ್ಥರಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಸಮ್ಮೇಳನದಲ್ಲಿ ಸುಮಾರು 65 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಗಣ್ಯರು ಮತ್ತು ಪ್ರತಿನಿಧಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಬೇಕಿರುವ ಹಿನ್ನೆಲೆಯಲ್ಲಿ ನಗರದ ಲಾಡ್ಜ್, ಹೋಟೆಲ್‌, ಬೋರ್ಡಿಂಗ್ಸ್‌, ಶಾದಿ ಮಹಲ್‌, ಕಲ್ಯಾಣ ಮಂಟಪಗಳನ್ನು ಕೂಡಲೇ ಗುರುತಿಸಿ ಮುಂಗಡವಾಗಿ ಕಾಯ್ದರಿಸಬೇಕು ಎಂದರು.

ಕಲಬುರಗಿ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಮ್ಮೇಳನದ ಬಗ್ಗೆ ಪ್ರಚಾರ ಫಲಕ ಅಳವಡಿಸಬೇಕು. ನಗರದಿಂದ ಸಮ್ಮೇಳನ ನಡೆಯುವ ಸ್ಥಳ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರವೇಶ ದ್ವಾರ ವರೆಗಿನ ಗೋಡೆಗಳ ಮೇಲೆ ಚಿತ್ರಕಲೆ ಸೇರಿದಂತೆ ಗೋಡೆ ಬರಹ, ಅಂಗಡಿ-ಮುಂಗಟ್ಟುಗಳ ಮೇಲೆ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಮತ್ತು ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಬೃಹತ್‌ ಸ್ವಾಗತ ಕಮಾನು ನಿರ್ಮಿಸಬೇಕು ಎಂದು ತಿಳಿಸಿದರು.

ವಾಣಿಜ್ಯ ಸಂಘಗಳ ಸಭೆ ಕರೆಯಿರಿ: ಸಿಮೆಂಟ್‌ ನಗರಿ ಕಲಬುರಗಿಯಲ್ಲಿ ನುಡಿ ಜಾತ್ರೆ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಜಿಲ್ಲೆ ಜನತೆ ಸಹಕರಿಸಬೇಕಿದೆ. ಈ ಸಂಬಂಧ ಅಕ್ಕಿ ಗಿರಣಿ, ಪೆಟ್ರೋಲ್‌ ಬಂಕ್‌, ದಾಲ್‌ ಮಿಲ್‌, ಸೂಪರ್‌ ಮಾರ್ಕೆಟ್‌ ಅಸೋಷಿಯೇಷನ್‌, ಗ್ರೇನ್‌ ಮರ್ಚಂಟ್ಸ್‌ ಅಸೋಸಿಯೇಷನ್‌, ಕಾರ್ಖಾನೆಗಳ ಮಾಲೀಕರ ಸಂಘ ಹೀಗೆ ಜಿಲ್ಲೆಯ ಎಲ್ಲ ವಾಣಿಜ್ಯ ಸಂಘಗಳ ಸಭೆ ಕರೆದು ಸಮ್ಮೇಳನ ಯಶಸ್ಸಿಗೆ ಅವರ ಸಲಹೆ ಪಡೆಯಲು ಸಮಿತಿ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಗಣ್ಯರು-ಪ್ರತಿನಿಧಿಗಳಿಗೆ ಸಾರಿಗೆ ವ್ಯವಸ್ಥೆ: ಸಮ್ಮೇಳನಕ್ಕೆ ಅನ್ಯ ಜಿಲ್ಲೆಗಳಿಂದ ಆಗಮಿಸುವ ಅತಿಥಿ ಗಣ್ಯರು, ಪ್ರತಿನಿಧಿಗಳು ವಾಸಿಸುವ ಹೋಟೆಲ್‌ಗ‌ಳಿಂದ ಸಮ್ಮೇಳನದ ಸ್ಥಳಕ್ಕೆ ಹೋಗಿ ಬರಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟನಲ್ಲಿ ಎನ್‌ಇಕೆಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲು ಸೂಚಿಸಲಾಯಿತು.

Advertisement

ಜಿಲ್ಲಾ ಪಂಚಾಯತ್‌ ಸಿಇಒ ಡಾ| ಪಿ. ರಾಜಾ, ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಅಪರ ಜಿಲ್ಲಾ ಧಿಕಾರಿ ಡಾ| ಶಂಕರಪ್ಪ ವಣಿಕ್ಯಾಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ, ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌, ಎಂಸಿಎ ಪ್ರತಿನಿಧಿ  ಜಗದೀಶ ಮೇಟಿ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next