Advertisement

ಪೂರ್ಣ ಕಾಮಗಾರಿಗಳ ದೃಢೀಕರಣ ಪತ್ರ ಸಲ್ಲಿಸಿ

04:51 PM May 24, 2022 | Team Udayavani |

ಚಿಕ್ಕಮಗಳೂರು: ಪೂರ್ಣಗೊಂಡ ಕಾಮಗಾರಿಗಳ ದೃಢೀಕರಣ ಪತ್ರ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಪಂ ಸಿಇಒ ಜಿ.ಪ್ರಭು ಸೂಚಿಸಿದರು.

Advertisement

ಇತ್ತೀಚೆಗೆ ನಗರದ ಜಿಪಂ ಸಭಾಂಗಣದಲ್ಲಿ 2022-23ನೇ ಸಾಲಿನ ವಿವಿಧ ಇಲಾಖೆಗಳ ಕಾಮಗಾರಿ ಕ್ರಿಯಾ ಯೋಜನೆ ಸಿದ್ಧತೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವ ಹಿಸಿ ಅವರು ಮಾತನಾಡಿದರು. ಕಾಮಗಾರಿಗಳ ವೆಚ್ಚದ ಸುಳ್ಳು ಲೆಕ್ಕ ತೋರಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಕಳೆದ ವರ್ಷ ಪೂರ್ಣಗೊಂಡ ಕಾಮಗಾರಿಗಳ ದೃಢೀಕರಣ ಪತ್ರ ಸಲ್ಲಿಸುವಂತೆ ತಿಳಿಸಿದರು. 2022-23ನೇ ಸಾಲಿನಲ್ಲಿ ಜಿಪಂಗೆ 5.41ಕೋಟಿ ರೂ. ಹಾಗೂ ಪ್ರತೀ ತಾಪಂಗೆ 2.21 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮೇ 28ರೊಳಗೆ ಸರ್ಕಾರಕ್ಕೆ ಕ್ರಿಯಾ ಯೋಜನೆ ವರದಿ ಸಲ್ಲಿಸಬೇಕಿದೆ. ಪ್ರತೀ ಇಲಾಖೆ ಕೈಗೊಳ್ಳುತ್ತಿರುವ ಕಾಮಗಾರಿಗಳ ಸಮಗ್ರ ವರದಿಯನ್ನು ಸಲ್ಲಿಸುವಂತೆ ಹೇಳಿದರು. ಶೇ.25ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ. ಪ್ರತೀ ಗ್ರಾಪಂ ಮಾದರಿ ಶಾಲೆ ನಿರ್ಮಿಸಲು ನರೇಗಾ ಯೋಜನೆಯಡಿ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಾಣ ಮತ್ತು ಮೇಜು ಹಾಗೂ ಪರಿಕರಗಳನ್ನು ಒದಗಿಸುವಂತೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜಿಪಂ ಮತ್ತು ತಾಪಂ 350ಲಕ್ಷ ರೂ.ಮೀಸಲಿಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಬಾಕಿ ಇರುವ 62 ಅಂಗನವಾಡಿಗಳ ದುರಸ್ತಿ ಪೂರ್ಣಗೊಂಡಲ್ಲಿ 1825 ಸುಸಜ್ಜಿತ ಅಂಗನವಾಡಿಗಳನ್ನು ಹೊಂದಿರುವ ಪ್ರಥಮ ಜಿಲ್ಲೆಯಾಗಲಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಜಿಪಂನಿಂದ 54ಲಕ್ಷ ರೂ., ಪ್ರತಿ ತಾಪಂಗೆ 22ಲಕ್ಷ ರೂ. ಮೀಸಲಿಡಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರಗಳ ದುರಸ್ತಿ, ಕಾಂಪೌಂಡ್‌ ನಿರ್ಮಾಣ, ಪೀಠೊಪಕರಣಗಳ ಖರೀದಿಸಲು ವರದಿ ನೀಡಬೇಕು ಎಂದರು.

Advertisement

ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೇ.10 ರಷ್ಟು ಮೀರದಂತೆ ಬಳಕೆ ಮಾಡಬೇಕು. ಅಂಗವಿಕಲರ ಕಲ್ಯಾಣಕ್ಕಾಗಿ 120ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಅಂಗವಿಕಲ ಸಮುದಾಯದ ಪೂರಕವಾಗಿ ಶಾಶ್ವತ ಸಹಾಯಕ್ಕಾಗಿ ಸಮಗ್ರ ವರದಿ ನೀಡಲು ಅವರು ತಿಳಿಸಿದರು.

ಆಶಾಕಿರಣ ಅಂಧ ಮಕ್ಕಳ ಶಾಲೆಯು ಮಾದರಿಯಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಪ್ಯಾರಾ ಒಲಂಪಿಕ್ಸ್‌ನ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ 4ಕ್ಕೂ ಹೆಚ್ಚು ಪದಕಗಳನ್ನು ಪಡೆದಿದ್ದಾರೆ. ಪ್ರತಿವರ್ಷ ಹೆಚ್ಚಾಗಿ ವಿದ್ಯಾರ್ಥಿಗಳು ದಾಖಲಾತಿ ಹೊಂದದೇ ಇರುವುದರಿಂದ ಪ್ರತಿ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು ತಮ್ಮ ತಾಲೂಕಿನಲ್ಲಿ ತಲಾ 20 ಅಂಧ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರಿಗೆ ಪ್ರೇರೇಪಿಸಬೇಕು ಎಂದರು.

ವೃಕ್ಷಾಭಿಯಾನ ಮಹತ್ವದ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ 2.5ಲಕ್ಷ ಗಿಡಗಳನ್ನು ನೆಡಬೇಕಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 1000 ಗಿಡಗಳನ್ನು ನೆಡುವ ಜೊತೆಗೆ ಅವುಗಳ ಪಾಲನೆಯನ್ನು ಮಾಡಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ರಮೇಶ್‌ ಕರಿಗೌಡ, ಜಿಪಂ ಉಪಕಾರ್ಯದರ್ಶಿ ಎಂ. ಕಿಶೋರ್‌, ಜಿಲ್ಲೆಯ ಎಲ್ಲಾ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next