Advertisement

ಕಾಳಿ ನದಿ ಜೋಡಣೆ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಕೆ

11:22 AM May 07, 2019 | Team Udayavani |

ಬಾಗಲಕೋಟೆ: ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ಕಾಳಿ ನದಿ ಜೋಡಣೆ ಕುರಿತ ಸಮಗ್ರ ವರದಿಯನ್ನು ಯೋಜನೆಯ ರೂವಾರಿ, ಯುವ ಉದ್ಯಮಿ ಸಂಗಮೇಶ ನಿರಾಣಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

Advertisement

ರೈತ ಮುಖಂಡರು ಹಾಗೂ ನೀರಾವರಿ ಹೋರಾಟಗಾರರ ಸಮ್ಮುಖದಲ್ಲಿ ನಿರಾಣಿ ಸಮಗ್ರ ನೀರಾವರಿ ವರದಿಯ ಅಮೃತಧಾರೆ ಕಾಳಿ-ಘಟಪ್ರಭಾ-ಮಲಪ್ರಭಾ ನದಿ ಜೋಡಣೆಯ ಯೋಜನಾ ವರದಿಯನ್ನು ಬೆಳಗಾವಿಯ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರಗೆ ಸಲ್ಲಿಸಿದರು.

ಘಟಪ್ರಭಾ, ಮಲಪ್ರಭಾ ನದಿಗಳು ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳ ಜನರ ಜೀವನಾಡಿಯಾಗಿವೆ. ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹೀಗಾಗಿ ಈ ನದಿಗಳು ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಅಂತರ್ಜಲ ಪ್ರಮಾಣವು ದಾಖಲೆಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಸಾಂಪ್ರದಾಯಿಕ ನೀರಿನ ಮೂಲಗಳಾದ ಕೆರೆ ಹಳ್ಳಗಳು ಅವಸಾನದ ಅಂಚಿಗೆ ತಲುಪಿವೆ. ಹೀಗಾಗಿ ಈ ನಾಲ್ಕು ಜಿಲ್ಲೆಗಳ ಅನುಕೂಲಕ್ಕಾಗಿ ಸಮಗ್ರ ಕುಡಿಯುವ ನೀರು ಮತ್ತು 4 ಜಿಲ್ಲೆಗಳ 500 ರಿಂದ 600 ಕೆರೆಗಳ ಪುನಶ್ಚೇತನಕ್ಕಾಗಿ, ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ 25 ಟಿಎಂಸಿ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಗೆ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದೇವೆ ಎಂದು ಸಂಗಮೇಶ ನಿರಾಣಿ ಹೇಳಿದರು.

ಸಂದರ್ಭದಲ್ಲಿ ಯೋಜನೆಯ ಅನುಷ್ಠಾನದ ಅನಿವಾರ್ಯತೆ ಹಾಗೂ ಅವಶ್ಯಕತೆಯನ್ನು ರೈತ ಮುಖಂಡರು ಹಾಗೂ ತಜ್ಞರು ಸಚಿವರಿಗೆ ವಿವರಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ವರದಿಯಲ್ಲಿ ನಮೂದಿಸಿರುವ ಎಲ್ಲ ಆಂಶಗಳನ್ನು ಇಲಾಖೆ ತಜ್ಞರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಯೋಜನೆ ಬೆಂಬಲಿಸಲು ಸತೀಶ ಜಾರಕಿಹೊಳಿಗೆ ಮನವಿ: ಅರಣ್ಯ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯ ನಿವಾಸಕ್ಕೆ ತೆರಳಿದ ಸಂಗಮೇಶ ನಿರಾಣಿ ನೇತೃತ್ವದ ಹೋರಾಟಗಾರರ ನಿಯೋಗ ಯೋಜನೆಯ ಎಲ್ಲ ಆಂಶಗಳನ್ನು ಅವರಿಗೆ ಮನದಟ್ಟು ಮಾಡಿಕೊಡುವ ಮೂಲಕ ಘಟಪ್ರಭಾ-ಮಲಪ್ರಭಾ ನದಿಯನ್ನು ಸದೃಢಗೊಳಿಸುವ ಈ ಯೋಜನೆಗೆ ಬೆಂಬಲ ನೀಡಬೇಕೆಂದು ವಿನಂತಿಸಿಕೊಂಡರು. ವಿಜಯ ಕುಲಕರ್ಣಿ, ಕಲ್ಯಾಣರಾವ್‌ ಮುಚಳಂಬಿ, ಸುಗುರಪ್ಪ ಅಕ್ಕಿಮರಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next