Advertisement

ಸ್ಟೀಲ್‌ ಬ್ರಿಡ್ಜ್ ಆದೇಶದ ಪ್ರತಿ ಹೈಕೋರ್ಟ್‌ಗೆ ಸಲ್ಲಿಕೆ

11:31 AM Nov 10, 2017 | |

ಬೆಂಗಳೂರು: ತೀವ್ರ ವಿವಾದಕ್ಕೊಳಗಾಗಿರುವ “ಸ್ಟೀಲ್‌ ಬ್ರಿಡ್ಜ್’ ನಿರ್ಮಾಣ ಸಂಬಂಧ ಅ.31ಕ್ಕೆ ಹೊರಡಿಸಿದ ಆದೇಶದ ಪ್ರತಿಯನ್ನು ಗುರುವಾರ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿತು. 

Advertisement

ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ. ರಮೇಶ್‌ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠಕ್ಕೆ ಸ್ಟೀಲ್‌ ಬ್ರಿಡ್ಜ್ ನಿರ್ಮಾಣ ಸಂಬಂಧ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿದ ಆದೇಶದ ಪ್ರತಿಯನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.

ನಗರದ ಶಿವಾನಂದ ವೃತ್ತದ ಬಳಿ ಉಕ್ಕಿನ ಮೇಲ್ಸೇತುವ ನಿರ್ಮಾಣ ಮಾಡದಂತೆ ಕುಮಾರ ಪಾರ್ಕ್‌ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್‌ ಮತ್ತು 19 ಜನ ಸ್ಥಳೀಯ ನಿವಾಸಿಗಳು ಹೈಕೋರ್ಟ್‌ಗೆ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಅ.25ರಂದು ನಡೆಸಿದ್ದ ಹಂಗಾಮಿ ಮುಖ್ಯನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಅರ್ಜಿದಾರರು ಮನವಿ ಸಲ್ಲಿಸಿದ್ದರು. 

ಆದರೆ, ಅ.31ರಂದು ಮನವಿ ವಿಚಾರಣೆ ನಡೆಸಿದ್ದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರು, ಸ್ಥಳೀಯ ನಿವಾಸಿಗಳ ಮನವಿಯನ್ನು ತಿರಸ್ಕರಿಸಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮುಂದುವರಿಸಲು ನಿರ್ಧರಿಸಿ ಆದೇಶ ಪ್ರಕಟಿಸಿದ್ದರು.

Advertisement

ಈ ಆದೇಶದ ಪ್ರತಿಯೊಂದಿಗೆ ಸ್ಥಳೀಯ ನಿವಾಸಿಗಳು ಗುರುವಾರ ಹೈಕೋರ್ಟ್‌ಗೆ ತಿದ್ದುಪಡಿ ಅರ್ಜಿ ಸಲ್ಲಿಸಲಾಯಿತು. ಈ ಮಧ್ಯೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಆದೇಶದ ಪ್ರತಿಯನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದರ ವಿಚಾರಣೆಯನ್ನು ನ.16ಕ್ಕೆ ನಿಗದಿಪಡಿಸಿ, ಪ್ರಕರಣದ ವಿಚಾರಣೆಯನ್ನು ಮುಂದೂಡಿತು. 

ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳು ಹೆಚ್ಚುತ್ತಿದೆ. ಆದ್ದರಿಂದ ನಗರಕ್ಕೆ ಹೆಚ್ಚಿನ ಮೂಲ ಸೌಕರ್ಯಗಳನ್ನ ಒದಗಿಸಬೇಕಿದೆ. ಸಂಚಾರ ದಟ್ಟಣೆಯು ನಗರವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಇದಕ್ಕೆ ಮೇಲ್ಸೇತುವೆ ನಿರ್ಮಾಣ ಒಂದು ಪರಿಹಾರ ಮಾರ್ಗವಾಗಿದೆ. ಅದರಂತೆ ಶಿವಾನಂದ ವೃತ್ತದ ಬಳಿ ಸಾಕಷ್ಟು ಸಂಚಾರ ದಟ್ಟಣೆ ಏರ್ಪಡುತ್ತದೆ.

ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ದಟ್ಟಣೆ ನಿಯಂತ್ರಿಸಬಹುದು. ಹೀಗಾಗಿ, ಉಕ್ಕಿನ ಮೇಲ್ಸೇತುವೆ ಕಾಮಗಾರಿಯನ್ನು ಮುಂದುವರಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next