Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅಂತಿಮ ವರದಿ ಶೀಘ್ರ ಸಲ್ಲಿಕೆ: ಡಾ|ಕಸ್ತೂರಿ ರಂಗನ್‌

02:12 AM Dec 05, 2019 | mahesh |

ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು 200ಕ್ಕೂ ಅಧಿಕ ಮಂದಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕ್ರೋಢೀಕರಿಸಿ ಅಂತಿಮ ವರದಿ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಾಜಿ ಅಧ್ಯಕ್ಷ, ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ರಚನಾ ಸಮಿತಿ ಅಧ್ಯಕ್ಷ ಡಾ| ಕಸ್ತೂರಿರಂಗನ್‌ ಹೇಳಿದರು.

Advertisement

ಅವರು ಬುಧವಾರ ನಗರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಬಾಹ್ಯಾಕಾಶ ಮತ್ತು ಅದರಾಚೆಗೆ ಲಗ್ಗೆ’ ಎಂಬ ವಿಷಯದ ಕುರಿತು ಮಾತನಾಡಿದರು.

ಆತ್ಮಸ್ಥೈರ್ಯದಿಂದ ಸಾಧನೆ
ಆಧುನಿಕ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಸವಾಲುಗಳಿವೆ. ಹೆಚ್ಚು ನಿರೀಕ್ಷೆಗಳು ಕೂಡ ಸಹಜ. ಇಂತಹ ಪರಿಸ್ಥಿತಿಯಲ್ಲಿ ನಮ್ಮಿಂದ ಈ ಕೆಲಸ ಸಾಧ್ಯವೇ, ಅಸಾಧ್ಯವೇ ಎಂಬ ಸಂದೇಹ, ಹಿಂಜರಿಕೆ ಬೇಡ. ಜ್ಞಾನದ ತಳಹದಿಯ ಮೇಲೆ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮ ಯುವ ಜನಾಂಗದ ಮೇಲಿದೆ. ಆತ್ಮಸ್ಥೈರ್ಯದಿಂದ ಯುವಜನರು ಮುನ್ನುಗ್ಗಬೇಕು ಎಂದರು.

ಭಾರತವು ಅಮೆರಿಕ ಮತ್ತು ಫ್ರಾನ್ಸ್‌ ದೇಶಗಳಿಗೆ ಸಮಾನವಾದ ಉಪಗ್ರಹಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಜಗತ್ತಿನ ವಿವಿಧ ಮೂಲೆಗಳ ಮಾಹಿತಿಗಳನ್ನು ಸಚಿತ್ರವಾಗಿ ಸಂಗ್ರಹಿಸಿ ರವಾನಿಸುವ ಆಧುನಿಕ ಕೆಮರಾಗಳನ್ನು ಉಪಗ್ರಹಗಳು ಹೊಂದಿದ್ದು, ಇದರಿಂದ ಪ್ರಕೃತಿ ವಿಕೋಪಗಳ ಮಾಹಿತಿಯನ್ನು ಮುಂಚಿತವಾಗಿ ಪಡೆಯಲು ಸಾಧ್ಯವಾಗಿದೆ ಎಂದು ಡಾ| ಕಸ್ತೂರಿ ರಂಗನ್‌ ಅವರು ಹೇಳಿದರು.

ಸಂತ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ವಂ| ಗುರು ಡೈನೇಶಿಯಸ್‌ ವಾಸ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಂ| ಡಾ| ಪ್ರವೀಣ್‌ ಮಾರ್ಟಿಸ್‌, ಕಾರ್ಯಕ್ರಮದ ಸಂಚಾಲಕರಾದ ಡಾ| ವಿನೋಲಾ ರೋಡ್ರಿಗಸ್‌ ಉಪಸ್ಥಿತರಿದ್ದರು. ಕ್ಸೇವಿಯರ್‌ ಬ್ಲಾಕ್‌ನ ನಿರ್ದೇಶಕ ಡಾ| ಜಾನ್‌ ಇ. ಡಿ’ಸಿಲ್ವಾ ಸ್ವಾಗತಿಸಿ ಕಾರ್ಯಕ್ರಮದ ಸಂಯೋಜಕ ಡಾ| ರೊನಾಲ್ಡ್‌ ನಝೆತ್‌ ವಂದಿಸಿದರು. ರಾಸಾಯನ ಶಾಸ್ತ್ರ ವಿಭಾಗದ ಪ್ರೀಮಾ ಸಿಯೊಲಾ ಪಾಯ್ಸ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

ಚಂದ್ರಯಾನ-2 ದಾರಿದೀಪ
ಚಂದ್ರಯಾನ-2 ಮಿಷನ್‌ನಲ್ಲಿ ವಿಕ್ರಂ ಲ್ಯಾಂಡರ್‌ ಇಳಿಯುವ ಕೊನೆಯ ಘಳಿಗೆಯಲ್ಲಿ ಸಂಪರ್ಕ ಕಡಿದು ಚಂದ್ರನ ಮೇಲೆ ಬಿದ್ದಿರುವ ಘಟನೆ ನಮಗೆ ಅಸಮಾಧಾನ ತರುವ ಸಂಗತಿ ಆಗಿದ್ದರೂ ಚಂದ್ರನ ಅಂಗಳದವರೆಗೆ ಹೋಗಿರುವುದು ನಮ್ಮ ದೇಶದ ಪಾಲಿಗೆ ದೊಡ್ಡ ಸಾಧನೆಯೇ ಆಗಿದೆ. ಈ ಘಟನೆ ನಮ್ಮ ಮುಂದೆ ಸಂಭಾವ್ಯ ಅಡೆ-ತಡೆಗಳನ್ನು ತಿದ್ದಿಕೊಂಡು ಸಾಧನೆ ಮಾಡಲು ದಾರಿದೀಪವಾಗಿದೆ ಎಂದು ದತ್ತಿ ಉಪನ್ಯಾಸದಲ್ಲಿ ಕಸ್ತೂರಿರಂಗನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next