ಬೆಂಗಳೂರು: ರಾಜ್ಯ ನಾಲ್ಕನೇ ಹಣಕಾಸು ಆಯೋಗ ಬುಧವಾರ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆಯೋಗದ ಸದಸ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಚ್.ಶಶಿಧರ್ ಅವರು ವರದಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದರು.
ರಾಜ್ಯಪಾಲರು 2015ರ ಡಿಸೆಂಬರ್ 21ರಂದು ನಾಲ್ಕನೇ ಹಣಕಾಸು ಆಯೋಗ ರಚಿಸಿದ್ದು,ಅದರಂತೆ ಆಯೋಗವು ವರದಿ ಸಿದ್ಧಪಡಿಸಿ ರಾಜ್ಯಪಾಲರಿಗೆ ಸಲ್ಲಿಸಿತ್ತು. ಅದರ ಒಂದು ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸಲಾಗಿದೆ. ಆಯೋಗ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಬಳಿಕ ರಾಜ್ಯಪಾಲರು ತಮ್ಮ ಶಿಫಾರಸುಗಳೊಂದಿಗೆ ಅದನ್ನು ಸರ್ಕಾರಕ್ಕೆ
ಕಳುಹಿಸಿಕೊಡಲಿದ್ದಾರೆ. ನಂತರ ಸರ್ಕಾರ ಅದನ್ನು ಪರಿಶೀಲಿಸಿ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ.
ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ತೆರಿಗೆಗಳು, ಕರ್ತವ್ಯಗಳು, ಸುಂಕಗಳು ಮತ್ತು ಶುಲ್ಕದ ನಿವ್ವಳ ಆದಾಯ ವಿತರಣೆ, ಸ್ಥಳೀಯ ಸಂಸ್ಥೆಗಳಿಗೆ ನಿಯೋಜಿಸಬಹುದಾದ ತೆರಿಗೆ, ಕರ್ತವ್ಯ, ಸುಂಕ ಮತ್ತು ಶುಲ್ಕಗಳನ್ನು ನಿರ್ಣಯಿಸುವುದು, ರಾಜ್ಯದ ಏಕೀಕೃತ ಹಣಕಾಸು ವ್ಯವಸ್ಥೆಯಿಂದ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡುವುದು, ಲಭ್ಯವಿರುವ ಸಂಪನ್ಮೂಲಗಳ ನಿರ್ವಹಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಸುಧಾರಿಸಲು ಅಗತ್ಯವಾದ ಕ್ರಮಗಳನ್ನು ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.