Advertisement

ಇಂದು ಅಯೋಧ್ಯೆ ಮಧ್ಯಸ್ಥಿಕೆ ವರದಿ ಸಲ್ಲಿಕೆ

01:27 AM Aug 01, 2019 | Team Udayavani |

ನವದೆಹಲಿ: ಅಯೋಧ್ಯೆಯಲ್ಲಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವದ ತ್ರಿಸದಸ್ಯ ಸಮಿತಿ ಗುರುವಾರ ವರದಿ ಸಲ್ಲಿಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠ ಅದನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಆ.3ರಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮೊಹರು ಮಾಡಿದ ಲಕೋಟೆಯಲ್ಲಿ ಸಮಿತಿ ವರದಿ ಸಲ್ಲಿಕೆ ಮಾಡಲಿದೆ. ಮಾರ್ಚ್‌ ನಲ್ಲಿ ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಜಮೀನು ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಹಿರಿಯ ನ್ಯಾಯವಾದಿ ಶ್ರೀರಾಂ ಪಂಚು ಮತ್ತು ಆರ್ಟ್‌ ಲಿವಿಂಗ್‌ ಫೌಂಡೇಷನ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಸಮಿತಿ ಸದಸ್ಯರಾಗಿದ್ದಾರೆ. ಅವರು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿದ್ದಾರೆ.

Advertisement

ಕಾಯ್ದಿರಿಸಿದ ತೀರ್ಪು: ಆರ್ಥಿಕವಾಗಿ ಮೇಲ್ವರ್ಗದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕಲ್ಪಿಸುವ ವಿಧೇಯಕದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ವಿಚಾರದ ಬಗೆಗಿನ ತೀರ್ಪನ್ನು ಕಾಯ್ದಿರಿಸಿದೆ. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಬಡತನ ರೇಖೆಗಿಂತ ಕೆಳಗೆ ಇರುವ 20 ಕೋಟಿ ಮಂದಿಗೆ ಕೇಂದ್ರ ಸರ್ಕಾರದ ನಿರ್ಧಾರದಿಂದ ಅನುಕೂಲವಾಗಲಿದೆ ಎಂದು ಸಮರ್ಥನೆ ನೀಡಿದ್ದಾರೆ. ನ್ಯಾ.ಎಸ್‌.ಎ.ಬೋಬ್ಡೆ, ನ್ಯಾ.ಆರ್‌.ಸುಭಾಷ್‌ ರೆಡ್ಡಿ ಮತ್ತು ನ್ಯಾ.ಬಿ.ಆರ್‌.ಗವಾಯಿ ಅವರನ್ನು ಒಳಗೊಂಡ ಪೀಠ ಮೀಸಲು ಬಗ್ಗೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸುತ್ತಿದೆ.

ಗೌರವ ಯಥಾ ಸ್ಥಿತಿ
ಪ್ರಜೆಗಳ ಹೊರತಾಗಿಯೂ ಮಹಾರಾಜರಿಗೆ ಇರುವ ಗೌರವ ಇರುತ್ತದೆ ಎಂದು ಸುಪ್ರೀಂಕೋರ್ಟ್‌ ಪ್ರಕರಣವೊಂದರ ವಿಚಾರದಲ್ಲಿ ಅಭಿಪ್ರಾಯಪಟ್ಟಿದೆ. ಅವರು ಹೊಂದಿದ್ದ ರಾಜ್ಯ ಭಾರತೀಯ ಒಕ್ಕೂಟದಲ್ಲಿ ವಿಲೀನವಾದರೂ, ಮಹಾರಾಜರು ಹೊಂದಿರುವ ಗೌರವವನ್ನು ಪಡೆಯುತ್ತಾರೆ. ಉತ್ತರ ಪ್ರದೇಶದ ರಾಂಪುರದ ಆಡಳಿತಗಾರರಾಗಿದ್ದ ನವಾಬ್‌ ರಾಜಾ ಅಲಿ ಖಾನ್‌ ಎಂಬುವರ ಖಾಸಗಿ ಆಸ್ತಿ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್‌ಗೊಗೋಯ್‌ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next