ಬೆಂಗಳೂರು: ಜಮ್ಮು-ಕಾಶ್ಮೀರ ಪೊಲೀಸರ ಭಯದಿಂದ ನಗರದಲ್ಲಿ ವಾಸವಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ತಾಲಿಬ್ ಹುಸೇನ್ ಕುರಿತು ನಗರ ಗುಪ್ತಚರ ಇಲಾಖೆ, ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಶಂಕಿತ ಉಗ್ರನ ಮೇಲಿರುವ ಪ್ರಕರಣಗಳು, ಆತನ ಉಗ್ರ ಚಟುವಟಿಕೆ, ಬೆಂಗಳೂರಿಗೆ ಬಂದಿದ್ದು ಯಾವಾಗ ಎಂಬುದು ಸೇರಿದಂತೆ ಮಾಹಿತಿ ಕಲೆ ಹಾಕಿ, ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ಗುಪ್ತಚರ ಅಧಿಕಾರಿಗಳು ವರದಿ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ತಾಲಿಬ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ ದಾಖಲಾಗಿವೆ. 2007-08ರಿಂದ ನಡೆದ ಕೆಲವು ಅಪರಾಧ ಕೃತ್ಯಗಳ ಬಗ್ಗೆ ತಾಲಿಬ್ ಹುಸೇನ್ ಭಾಗಿಯಾಗಿರುವ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿರುವುದು, ನಗರದಲ್ಲಿ ತಾಲಿಬ್ ಹುಸೇನ್ ನೆಲೆಸಿದ್ದ ಬಾಡಿಗೆ ಮನೆ, ಕೆಲಸ ಮಾಡುತ್ತಿದ್ದ ಜಾಗ, ಮಸೀದಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ಹೈಕೋರ್ಟ್ ಜಡ್ಜ್ ರೀತಿ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ
ಇದೇ ವೇಳೆ ಬೆಂಗಳೂರಿನಲ್ಲಿದ್ದ ಅವಧಿಯಲ್ಲಿ ತಾಲಿಬ್‌ನಗರದ ಹಲವೆಡೆ ಕೆಲ ಮುಸ್ಲಿಂ ಯುವಕರ ಜತೆ ಸಭೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಆದರೆ, ಯಾವ ಉದ್ದೇಶದಿಂದ ಸಭೆ ನಡೆಸಿದ್ದಾನೆ. ಯಾರೆಲ್ಲ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಗರದಲ್ಲಿ ಅಡಗಿದ್ದ ಉಗ್ರ ತಾಲಿಬ್ ಹುಸೇನ್‌ನನ್ನು ಇದೇ ತಿಂಗಳ 3ರಂದು ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆ ಅಧಿಕಾರಿಗಳು ಬಂಧಿಸಿ, ಕರೆದೊಯ್ದಿದ್ದಾರೆ.