Advertisement

ಭಾರತದ ಬತ್ತಳಿಕೆಯಲ್ಲೀಗ ಜಲಾಂತರ್ಗಾಮಿ ಬೇಟೆಗಾರ

04:57 PM Feb 28, 2020 | mahesh |

ಜಲಾಂತರ್ಗಾಮಿ ಬೇಟೆಗಾರ ಹೆಲಿಕಾಪ್ಟರ್‌ಗಳ ವಿಚಾರದಲ್ಲಿ ಭಾರತೀಯ ನೌಕಾಪಡೆಯ 14 ವರ್ಷಗಳ ಸುದೀರ್ಘ‌ ಕಾಯುವಿಕೆ ಈಗ ಅಂತ್ಯಗೊಂಡಿದೆ. ಟ್ರಂಪ್‌ ಭೇಟಿಯ ವೇಳೆ ಭಾರತವು ಅಮೆರಿಕದ ಎಂಎಚ್‌-60ಆರ್‌ ಸೀಹಾಕ್‌ ಹೆಲಿಕಾಪ್ಟರ್‌ಗಳ ಖರೀದಿಗೆ 21 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಒಟ್ಟು 24 ಹೆಲಿಕಾಪ್ಟರ್‌ಗಳ ಖರೀದಿಗಾಗಿ ನಡೆದಿರುವ ಒಪ್ಪಂದವಿದು. “ರೊಮಿಯೋ’ ಎಂದೂ ಕರೆಸಿಕೊಳ್ಳುವ ಎಂಎಚ್‌-60ಆರ್‌ ಸೀಹಾಕ್‌ ಹೆಲಿಕಾಪ್ಟರ್‌ಗಳು ಗತಕಾಲದ “ಸೀ ಕಿಂಗ್‌’ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್‌ಗಳ ಜಾಗದಲ್ಲಿ ಬರಲಿವೆ. ಈ ಒಪ್ಪಂದಕ್ಕೆ 2018ರಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಒಪ್ಪಿಗೆ ನೀಡಿದ್ದರು. ಏಪ್ರಿಲ್‌ 2019ರಲ್ಲಿ ಅಮೆರಿಕ ಸರ್ಕಾರವೂ ಸಹಮತಿ ನೀಡಿತ್ತು. ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಏಷ್ಯಾದ ಜಲಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ಭಾರತ-ಅಮೆರಿಕದ ಈ ಒಪ್ಪಂದ ಕಳವಳ ಮೂಡಿಸಿರಲಿಕ್ಕೂ ಸಾಕು…

Advertisement

ಯಾರ ನಿರ್ಮಾಣ?
ಅಮೆರಿಕ ಮೂಲದ ಲಾಕ್‌ಹೆಡ್‌ ಮಾರ್ಟಿನ್‌ ಗ್ರೂಪ್‌ “ಜಲಾಂತರ್ಗಾಮಿ ಬೇಟೆಗಾರ’ ಎಂದು ಕರೆಸಿಕೊಳ್ಳುವ ಪ್ರಖ್ಯಾತ ಎಂಎಚ್‌-60ಆರ್‌ ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತದೆ. ಈ ಹೆಲಿಕಾಪ್ಟರ್‌ಗಳು ಅಮೆರಿಕ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸಕ್ತ ಜಲಾಂತರ್ಗಾಮಿ ಪತ್ತೆ, ಸಮರದ ವಿಷಯದಲ್ಲಿ ಇವುಗಳಷ್ಟು ಸಕ್ಷಮ ಹೆಲಿಕಾಪ್ಟರ್‌ಗಳು ಪ್ರಪಂಚದಲ್ಲಿ ಮತ್ತೂಂದಿಲ್ಲ.

ನಮ್ಮಲ್ಲಿನ ಹೆಲಿಕಾಪ್ಟರ್‌ಗಳು ಹೇಗಿದ್ದವು?
ಜುಲೈ, 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಮ್ಮ ಐಎನ್‌ಎಸ್‌ ವಿಕ್ರಾಂತ್‌ನ ಮೇಲೆ ಬ್ರಿಟಿಷ್‌ ನಿರ್ಮಿತ “ಸೀ ಕಿಂಗ್‌’ ಹೆಲಿಕಾಪ್ಟರ್‌ಗಳು ಬಂದಿಳಿದವು. ಆದಾಗ್ಯೂ ನಂತರದ ವರ್ಷಗಳಲ್ಲಿ ಭಾರತೀಯ ನೌಕಾಪಡೆಗಾಗಿ 20ಕ್ಕೂ ಹೆಚ್ಚು ಪರಿಷ್ಕೃತ ಸೀ ಕಿಂಗ್‌ ಹೆಲಿಕಾಪ್ಟರ್‌ಗಳನ್ನು ತರಿಸಲಾಯಿತಾದರೂ, ಹತ್ತಕ್ಕಿಂತ ಕಡಿಮೆ ಹೆಲಿಕಾಪ್ಟರ್‌ಗಳು ಈಗ ಕಾರ್ಯಾಚರಿಸುತ್ತಿವೆ. ಮೊದಲ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್‌ಗಳನ್ನು ತರಿಸಿ ದಶಕಗಳೇ ಕಳೆದಿವೆಯಾದರೂ, ಕೆಲವು ವರ್ಷಗಳಿಂದ ಕೇವಲ 10ಕ್ಕಿಂತಲೂ ಕಡಿಮೆ ಸೀ ಕಿಂಗ್‌ ಹೆಲಿಕಾಪ್ಟರ್‌ಗಳು ಕಾರ್ಯಾಚರಿಸುತ್ತಿದ್ದವು.

ಜಲಾಂತರ್ಗಾಮಿ ಪತ್ತೆಯೇ ಕಷ್ಟವಾಗಿತ್ತು
ಅತ್ಯಾಧುನಿಕ ಜಲಾಂತರ್ಗಾಮಿ ಪತ್ತೆ-ವಿರೋಧಿ ಹೆಲಿಕಾಪ್ಟರ್‌ಗಳ ಅಭಾವ ಎಷ್ಟಿದೆ ಎಂದರೆ, ನೌಕಾಪಡೆಯ ಕೆಲವು ಯುದ್ಧನೌಕೆಗಳು ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್‌ಗಳಿಲ್ಲದೆಯೇ ಸಂಚರಿಸುತ್ತಾ ಬಂದಿವೆ! ಒಂದೆಡೆ ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಯ ಇರುವಿಕೆ ಹೆಚ್ಚುತ್ತಾ ಇದೆ. ಅಲ್ಲದೇ ಆ ನೌಕಾಪಡೆಯು ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಇಂಥದ್ದರಲ್ಲಿ ಭಾರತದ ಯುದ್ಧ ನೌಕೆಗಳು ಅಗತ್ಯ ಸೌಲಭ್ಯಗಳಿಲ್ಲದೇ ಜಲಮಾರ್ಗದಲ್ಲಿ ಸಂಚರಿಸುವುದು ಕಳವಳದ ವಿಚಾರವಾಗಿತ್ತು. ಈ ಕಾರಣಕ್ಕಾಗಿಯೇ ನಮ್ಮ ಯುದ್ಧನೌಕೆಗಳು ಇದರ ಬದಲಾಗಿ, ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ ನಿರ್ಮಿತ ಲಘು ಉಪಯೋಗಿ ಚೇತಕ್‌ ಹೆಲಿಕಾಪ್ಟರ್‌ಗಳನ್ನು ನೆಚ್ಚಿಕೊಳ್ಳಬೇಕಾಗಿತ್ತು. ಈ ಹೆಲಿಕಾಪ್ಟರ್‌ಗಳು ಫ್ರಾನ್ಸ್‌ನ ಅಲಾವೆಟ್‌-3 ಹೆಲಿಕಾಪ್ಟರ್‌ನ ಲೈಸೆನ್ಸಡ್‌ ಆವೃತ್ತಿಯಾಗಿದ್ದು, ಅಲಾವೆಟ್‌-3, “ಸೀ ಕಿಂಗ್ಸ್‌’ ಗಿಂತಲೂ ಹಳೆಯ ಹೆಲಿಕಾಪ್ಟರ್‌ಗಳಾಗಿವೆ. ಇವುಗಳ ಡಿಸೈನ್‌ ಆದದ್ದು 1950ರಲ್ಲಿ! ಅತ್ಯಾಧುನಿಕ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್‌ಗಳಿಲ್ಲದ ಭಾರತೀಯ ಯುದ್ಧ ನೌಕೆಗಳು, ವಿರೋಧಿ ದೇಶಗಳ ಜಲಾಂತರ್ಗಾಮಿಗಳನ್ನು ಗುರುತಿಸಲು ಅಕ್ಷರಶಃ ಹೆಣಗಾಡಬೇಕಿತ್ತು. ಒಂದರ್ಥದಲ್ಲಿ, ಅವಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ.

ಸೂಕ್ತ ರಕ್ಷಣೆಯಿಲ್ಲದ ಆ ಎರಡು ತಿಂಗಳು
ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್‌ಗಳ ಕೊರತೆ ಹೇಗಿದೆಯೆಂದರೆ, ಒಂದು ಸಮಯದಲ್ಲಂತೂ ಭಾರತ ನಾಲ್ಕು ಯುದ್ಧ ನೌಕೆಗಳನ್ನು(ಐಎನ್‌ಎಸ್‌ ಸಹ್ಯಾದ್ರಿ, ಐಎನ್‌ಎಸ್‌ ಸತು³ರಾ, ಐಎನ್‌ಎಸ್‌ ಶಕ್ತಿ ಮತ್ತು ಐಎನ್‌ಎಸ್‌ ಕಿರ್ಚ್‌) ದಕ್ಷಿಣ ಚೀನಾ ಸಮುದ್ರ ಮತ್ತು ಪೆಸಿಫಿಕ್‌ ಸಾಗರಕ್ಕೆ(2016) ಸುಮಾರು ಎರಡೂವರೆ ತಿಂಗಳು ಕಳುಹಿಸಿತ್ತು. ಈ ನಾಲ್ಕು ಯುದ್ಧ ನೌಕೆಗಳ ಸಹಾಯಕ್ಕೆ ಇದ್ದದ್ದು ಕೇವಲ ಒಂದೇ ಒಂದು ಸೀ ಕಿಂಗ್‌ ಜಲಾಂತರ್ಗಾಮಿ ಹೆಲಿಕಾಪ್ಟರ್‌ ಮತ್ತು 2 ಚೇತಕ್‌ ಲಘು ಉಪಯೋಗಿ ಹೆಲಿಕಾಪ್ಟರ್‌ಗಳು!

Advertisement

ಹಳತಾಗಿದ್ದವು ಸೀ ಕಿಂಗ್‌
ಇಂದು ಜಗತ್ತಿನ ಇತರೆ ರಾಷ್ಟ್ರಗಳ(ಮುಖ್ಯವಾಗಿ ಚೀನಾದ) ಜಲಾಂತರ್ಗಾಮಿಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಅವುಗಳನ್ನು ಪತ್ತೆ ಹಚ್ಚುವುದು ಸುಲಭ ಸಾಧ್ಯವಲ್ಲ. ಇಂಥದ್ದರಲ್ಲಿ ಭಾರತದ ಬಳಿ ಇರುವ ಹಳೆಯ ಸೀ ಕಿಂಗ್‌ಗಳಿಗಂತೂ ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಈ ಕಾರಣಕ್ಕಾಗಿಯೇ, ರಕ್ಷಣಾ ಪರಿಣತರು, “ಕಣ್ಣಿಗೆ ಪೊರೆ ಬಂದ’ ಕಿಂಗ್‌ ಎಂದು ಸೀ ಕಿಂಗ್‌ ಅನ್ನು ಟೀಕಿಸುತ್ತಿದ್ದರು.

ಏನಿದರ ವಿಶೇಷತೆ?
ಎಂಎಚ್‌-60 ಹೆಲಿಕಾಪ್ಟರ್‌ಗಳು ಸಮುದ್ರದಲ್ಲಿ ಅತಿ ಆಳದಲ್ಲಿ ಸಂಚರಿಸುವ ಜಲಾಂತರ್ಗಾಮಿಗಳನ್ನೂ ಪತ್ತೆಹಚ್ಚಿ ಪುಡಿಮಾಡಬಲ್ಲವು. ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಇದು ಗಮನಾರ್ಹವಾಗಿ ಬಲಿಷ್ಠಗೊಳಿಸಲಿದೆ . ವಿರೋಧಿ ಪಾಳಯದ ರಾಡಾರ್‌ಗೆ ಸಿಗದೇ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ.

ಎದುರಾಳಿಗಳ ಜಲಾಂತರ್ಗಾಮಿಗಳು ಹಡಗುಗಳನ್ನು ನೋಡಲು ನೀರಿನೊಳಗಿಂದ ಪೆರಿಸ್ಕೋಪುಗಳನ್ನು ಮೇಲಕ್ಕೆತ್ತುತ್ತವೆ. ಪೆರಿಸ್ಕೋಪನ್ನು ಗುರುತಿಸುವುದು ಅತಿ ಕಷ್ಟದ ಕೆಲಸ. ಆದರೆ ಎಂಎಚ್‌-60ಯಲ್ಲಿನ ಆಟೋಮೆಟಿಕ್‌ ರಾಡಾರ್‌ ಪೆರಿಸ್ಕೋಪ್‌ ಪತ್ತೆ ತಂತ್ರಜ್ಞಾನಕ್ಕೆ ಇದು ಸಮಸ್ಯೆಯೇ ಅಲ್ಲ.

ಈ ಹೆಲಿಕಾಪ್ಟರ್‌ಗಳಲ್ಲಿ ಜಲಾಂತರ್ಗಾಮಿಗಳನ್ನು ಹೊಡೆದುರುಳಿಸುವ ನಿಖರ Advanced Precision Kill Weapon System (APKWS) ತಂತ್ರಜ್ಞಾನವಿದ್ದು, ಎದುರಾಳಿ ಪಾಳಯಕ್ಕೆ ಬಹಳಷ್ಟು ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ ಹಾಗೂ ಲೇಸರ್‌ ನಿರ್ದೇಶಿತ ರಾಕೆಟ್‌ ವ್ಯವಸ್ಥೆಯಿದ್ದು, ಶತ್ರುಪಾಳಯದ ಯುದ್ಧನೌಕೆಗಳು, ಹೆಲಿಕಾಪ್ಟರ್‌ಗಳು ಮತ್ತು ಜಲಾಂತರ್ಗಾಮಿಗಳನ್ನು ನಿಖರವಾಗಿ ಟಾರ್ಗೆಟ್‌ ಮಾಡಬಲ್ಲದು. ಈ ಹೆಲಿಕಾಪ್ಟರ್‌ಗಳು ಐಎನ್‌ಎಸ್‌ ವಿಕ್ರಮಾದಿತ್ಯ, ಐಎನ್‌ಎಸ್‌ ವಿಕ್ರಾಂತ್‌, ಶಿವಾಲಿಕ್‌ ವರ್ಗದ ಯುದ್ಧನೌಕೆಗಳ ಜತೆ ಕಾರ್ಯನಿರ್ವಹಿಸಲಿದ್ದು, ಈ ಮಾದರಿಯ ಹೆಲಿಕಾಪ್ಟರ್‌ ಅನ್ನು ಪಡೆಯುವುದು ಭಾರತದ ಬಹುಕಾಲದ ಕನಸಾಗಿತ್ತು.

ಮಾಹಿತಿ: ಸ್ವರಾಜ್ಯ

Advertisement

Udayavani is now on Telegram. Click here to join our channel and stay updated with the latest news.

Next