ಬೆಂಗಳೂರು: ಪತ್ನಿ ಮತ್ತು ತನ್ನಿಬ್ಬರು ಮಕ್ಕಳಿಗೆ ವಿಷಪ್ರಾಶನ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಆರ್ ಪೇದೆ ಸುಭಾಷ್‌ನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ನಡುವೆ, “ಮಕ್ಕಳನ್ನು ಕೊಲ್ಲುವ ಉದ್ದೇಶ ನಮ್ಮಿಬ್ಬರಿಗೂ(ಸುಭಾಷ್-ಪತ್ನಿ) ಇರಲಿಲ್ಲ.
ಆದರೆ, ಮಕ್ಕಳು ಅನಾಥರಾಗುತ್ತಾರೆಂದು ಅವರಿಗೂ ವಿಷ ನೀಡಲಾಯಿತು ಎಂದು ಸುಭಾಷ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. “ಆರೋಪಿ ಸುಭಾಷ್ ಕ್ರಿಕೆಟ್ ಬೆಟ್ಟಿಂಗ್‌ಗೆ ಲಕ್ಷಾಂತರ ರುಪಾಯಿ ಹಣ ಹೂಡಿಕೆ ಮಾಡಿ ನಷ್ಟ ಹೊಂದಿದ್ದರು. ಸಾಲ ಮರು ಪಾವತಿ ಮಾಡಲು ಸ್ನೇಹಿತರು, ಸಂಬಂಧಿಕರ ಬಳಿ ಹಣಕ್ಕೆ ಮನವಿ ಮಾಡಿದ್ದರು.
ಆದರೆ, ಯಾರು ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತಿದ್ದ ಸುಭಾಷ್ ಪತ್ನಿ ವೀಣಾ ಜತೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಸಾಲಗಾರರ ಒತ್ತಡ ಹೆಚ್ಚಾಗುತ್ತಿದ್ದಂತೆ ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಕೆಲ ದಿನಗಳ ಹಿಂದೆಯೇ ನಿರ್ಧರಿಸಿದ್ದರು. ಆದರೆ, ಮಕ್ಕಳನ್ನು ಕೊಲ್ಲಲು ತೀರ್ಮಾನಿಸಿರಲಿಲ್ಲ’ ಎಂದು ಆರೋಪಿ ಸುಭಾಷ್ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಅನಾಥರಾಗ್ತಾರೆ: ಸುಭಾಷ್ ಮತ್ತು ಪತ್ನಿ ವೀಣಾಗೆ ಮಕ್ಕಳನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ. ಆದರೆ, ನಾವು ಸಾವನ್ನಪ್ಪಿದ ಬಳಿಕ ಮಕ್ಕಳು ಅನಾಥರಾಗುತ್ತಾರೆ, ಪಾಲನೆ ಮಾಡುವವರಿಲ್ಲದೇ ಕಷ್ಟ ಅನುಭವಿಸ್ತುತಾರೆ ಎಂದು ದಂಪತಿ ಭಾವಿಸಿದ್ದರು. ಹೀಗಾಗಿ ಇಬ್ಬರೂ ಮಕ್ಕಳಿಗೆ ವಿಷ ನೀಡಲಾಗಿದೆ ಎಂದು ಪೊಲೀಸರು ತಿಳಸಿದ್ದಾರೆ.
ಪತ್ನಿ ಮತ್ತು ಮಕ್ಕಳನ್ನು ಹತ್ಯೆಗೈದಿದ್ದ ಸಿಎಆರ್ ಪೇದೆ ಸುಭಾಷ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಲಕ್ಷಾಂತರ ರುಪಾಯಿ ಸಾಲ ತೀರಿಸಲಾಗದೆ ಪತ್ನಿ ಮತ್ತು ಮಕ್ಕಳಿಗೆ ವಿಷಪ್ರಾಶನ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಸುಭಾಷ್ ಒಪ್ಪಿಕೊಂಡಿದ್ದಾನೆ. ಆದರೆ, ಇಂಜಕ್ಷನ್ ಮೂಲಕ ಹತ್ಯೆಗೈದಿದ್ದಾನೆ ಎಂಬುದರ ಕುರಿತು ವಿಧಿ ವಿಜ್ಞಾನ ಪರೀûಾ ಕೇಂದ್ರ ವರದಿ ಬಂದ ಬಳಿಕವೇ ತಿಳಿಯಲಿದೆ.
-ಡಾ ಪಿ.ಎಸ್.ಹರ್ಷಾ, ಈಶಾನ್ಯ ವಿಭಾಗದ ಡಿಸಿಪಿ