ಕಲಬುರಗಿ: ಕೊಲೆ ಪ್ರಕರಣದಲ್ಲಿ 14 ವರ್ಷ ಜೀವಾವಧಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದು ಎಂಬಿಬಿಎಸ್ ಪದವಿ ಪೂರೈಸಿದ ಸುಭಾಷ ಟಿ.ಪಾಟೀಲ ಅವರು ಶನಿವಾರ ವೈದ್ಯ ಪದವಿ ಸ್ವೀಕರಿಸಿದರು.
ನಗರದ ಮಹದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ 52ನೇ ಪದವಿ ಪ್ರದಾನ ಸಮಾರಂಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ|ಎಸ್.ಸಚ್ಚಿದಾನಂದ ಅವರು ಡಾ| ಸುಭಾಷ ಪಾಟೀಲರಿಗೆ ಎಂಬಿ ಬಿಎಸ್ ಪದವಿ ಪ್ರದಾನ ಮಾಡಿದರು.
1997ರಲ್ಲಿ ಸುಭಾಷ ಪಾಟೀಲ ಅವರು ಎಂಬಿ ಬಿಎಸ್‌ಗೆ ಸೇರಿದ್ದರು. ಇದೇ ಸಮಯದಲ್ಲಿ ಅಶೋಕ ಗುತ್ತೇದಾರ ಎನ್ನುವರ ಪತ್ನಿ ಪದ್ಮಾವತಿ ಅವರೊಂದಿಗೆ ಪ್ರೇಮಾಂ ಕುರವಾಗಿತ್ತು. ಬೆಂಗಳೂರಿನಲ್ಲಿ 2002ರಲ್ಲಿ ಅಶೋಕ ಗುತ್ತೇದಾರರನ್ನು ಸುಭಾಷ ಪಾಟೀಲ ಕೊಲೆ ಮಾಡಿ, ಜೈಲು ಸೇರಿದ್ದರು.
2016ರಲ್ಲಿ ಶಿಕ್ಷೆ ಅನುಭವಿಸಿ ಹೊರ ಬಂದಿದ್ದ ಸುಭಾಷ ಪಾಟೀಲ, ಮತ್ತೆ ಸಮಾಜಮುಖೀ ಯಾಗಿ ತಮ್ಮ ವೈದ್ಯ ಪದವಿ ಮುಂದು ವರಿಸಿದ್ದರು. ಎಂಬಿಬಿಎಸ್ ಪದವಿ ಸ್ವೀಕರಿಸಿ ಮಾತನಾಡಿದ ಡಾ| ಸುಭಾಷ ಪಾಟೀಲ, ವೈದ್ಯನಾಗಿ ಮರು ಜೀವ ಪಡೆಯಲು ದೇವರ ಕೃಪೆ ಮತ್ತು ತಂದೆ-ತಾಯಿ ಆರ್ಶೀ ವಾದವೇ ಕಾರಣ. ಕಳೆದು ಹೋದ ನನ್ನ ಜೀವನಕ್ಕೆ ಮರಳಿ ಬಂದಿದ್ದೇನೆ.
ವೈದ್ಯನಾಗಿ ಮುಂದುವರಿದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಜೈಲು ಸೇರಿದ ಕೈದಿ ಗಳ ಕುಟುಂಬಸ್ಥರು, ಸೈನಿಕರು ಹಾಗೂ ಪೊಲೀಸರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಇಚ್ಛಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ತಂದೆ ತುಕಾರಾಮ ಪಾಟೀಲ, ತಾಯಿ ಈರಮ್ಮ ಹಾಗೂ ಪತ್ನಿ ಪದ್ಮಾವತಿ ಇದ್ದರು.