Advertisement

ಪ್ರತಿಜ್ಞಾವಿಧಿಯಂತೆ ಸೇವೆ ಸಲ್ಲಿಸಿ: ಗೃಹ ಸಚಿವ

10:44 AM Oct 24, 2017 | Team Udayavani |

ಕಲಬುರಗಿ: ಕಠಿಣ ತರಬೇತಿ ಪಡೆದು ನಾಗರಿಕ ಪೊಲೀಸ್‌ ಅಧಿಕಾರಿಗಳಾಗಿ ಹೊರಹೊಮ್ಮಿದ ನಿರ್ಗಮಿತ ಪ್ರಶಿಕ್ಷಣಾರ್ಥಿಗಳೆಲ್ಲ ಸತ್ಯ, ಪ್ರಮಾಣಿಕತೆಯಿಂದ, ಸ್ವಜಪಕ್ಷಪಾತ ರಹಿತ ಸೇವೆ ಕುರಿತು ಪಡೆಯಲಾದ ಪ್ರತಿಜ್ಞಾವಿಧಿಯಂತೆ ಸೇವೆ ಸಲ್ಲಿಸಬೇಕೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದರು.

Advertisement

ಸೋಮವಾರ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ 7ನೇ ತಂಡದ 48 ಪಿಎಸ್‌ಐ (ನಾಗರೀಕ ಸಿವಿಲ್‌) ಪ್ರಶಿಕ್ಷಣಾರ್ಥಿಗಳ ಮತ್ತು 3ನೇ ತಂಡದ 36 ವೈಯರ್‌ಲೆಸ್‌ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಈಗಿನ ಸೇವಾ ಉತ್ಸಾಹ ನಿವೃತ್ತಿವರೆಗೂ ಇರಲಿ. ಯಾವುದೇ ಸಂದರ್ಭದಲ್ಲೂ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ರ ಪಾತ್ರವೇ ಬಹುಮುಖ್ಯವಾಗಿದೆ. ಉತ್ತಮ ಸೇವೆ ಸಲ್ಲಿಸಿದಲ್ಲಿ ಮಾತ್ರ ಸರ್ಕಾರದಿಂದ ಹಾಗೂ ಸಮಾಜದಿಂದ ಮನ್ನಣೆ, ಪ್ರಶಸ್ತಿ ದೊರಕುತ್ತವೆ. ಆದ್ದರಿಂದ ದಿನಾಲು ಪ್ರತಿಜ್ಞಾವಿಧಿ ನೆನಪಿನಲ್ಲಿಟ್ಟುಕೊಂಡು ಸೇವೆ ಮಾಡಿ ಎಂದು ಸಲಹೆ ನೀಡಿದರು. 

371ನೇ ಕಲಂ ವಿಧಿ ಜಾರಿಯಾಗಿದ್ದರಿಂದ ಇಷ್ಟೊಂದು ಸಂಖ್ಯೆಯಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಅಭ್ಯರ್ಥಿಗಳು ಪೊಲೀಸ್‌ ಅಧಿಕಾರಿಗಳಾಗಲು ಸಾಧ್ಯವಾಗಿದೆ. 371ನೇ (ಜೆ) ವಿಧಿ ಜಾರಿಯಾಗುವಲ್ಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿ| ಧರ್ಮಸಿಂಗ್‌ ಸೇರಿದಂತೆ ಇತರರ ಪ್ರಯತ್ನ ಅಡಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಹೇಳಿದರು.

ನಾಗನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಹೂಗಾರ ಮಾತನಾಡಿ, 2003ರಲ್ಲಿ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯ ಪ್ರಾರಂಭವಾಗಿ ಇಲ್ಲಿಯವರೆಗೆ 1064 ಪಿಎಸ್‌ಐ, 4401 ಪೊಲೀಸ್‌ ಪೇದೆಗಳಿಗೆ ತರಬೇತಿ ನೀಡಲಾಗಿದೆ. ಎಲ್ಲ ಹಂತದ ಸಮರೋಭ್ಯಾಸ ನಡೆಸಲಾಗಿದೆ. ಅಲ್ಲದೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಉಪನ್ಯಾಸ ಕೊಡಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ ದತ್ತಾ, ಹಿರಿಯ ಪೊಲೀಸ್‌ ಅಧಿಕಾರಿಗಳಾದ ರವಿಶಂಕರ ಮೀನಾ, ಈಶಾನ್ಯ ವಲಯ ಐಜಿಪಿ ಅಲೋಕಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಶಿಕುಮಾರ ಹಾಜರಿದ್ದರು. ಸೇಡಂ ಸಿಪಿಐ ಪಿ.ಎಂ. ಸಾಲಿಮಠ, ಲಕ್ಷ್ಮೀ ನಿರೂಪಿಸಿದರು. ಪೊಲೀಸ್‌ ತರಬೇತಿ ಮಹಾವಿದ್ಯಾಲಯದ ಡಿವೈಎಸ್ಪಿ ಎಂ.ಎಂ.ಯಾದವಾಡ ವಂದಿಸಿದರು. 

Advertisement

ಬಂಧು-ಬಳಗದವರು ಭಾಗಿ: ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ 84 ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಬಂಧು-ಬಳಗದವರು ಅದರಲ್ಲಿ ಅವರ ತಂದೆ-ತಾಯಿ, ಸಹೋದರರು ಬಂಧು ಬಾಂಧವರು ಪಾಲ್ಗೊಂಡಿದ್ದರು. ವರ್ಷವಿಡಿ ಮನೆಯಿಂದ ದೂರವಿದ್ದಿದ್ದರಿಂದ ಹಾಗೂ ಸಮಾರಂಭದಲ್ಲಿ ಗೃಹ ಸಚಿವರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿಯೊಂದಿಗೆ ಪೊಲೀಸ್‌ ಅಧಿಕಾರಿಯಾಗಿ ಹೊರಹೊಮ್ಮಿದ್ದನ್ನು ಕಣ್ತುಂಬಿಕೊಂಡರು. ಮಹಾಂತೇಶ ಪಾಟೀಲ ಚಿಣಮಗೇರಿ ಎನ್ನುವ ಪಿಎಸ್‌ಐ ಪ್ರಶಿಕ್ಷಣಾರ್ಥಿ, ಕಷ್ಟದಿಂದ ಓದಿ, ಸಾಮಾಜಿಕ ಸೇವೆಯೊಂದಿಗೆ ಇಲಾಖೆಗೆ ಬಂದಿದ್ದೇನೆ ಎಂದು ತಿಳಿಸಿದರು. 

48 ಅಭ್ಯರ್ಥಿಗಳಲ್ಲಿ 46 ಮಂದಿ ಹೈ.ಕ.ದವರು : ವರ್ಷ ಕಾಲ ತರಬೇತಿ ಪಡೆದು ಪ್ರಶಿಕ್ಷಣಾರ್ಥಿಗಳಾಗಿ ಹೊರಹೊಮ್ಮಿದ 48 ಸಿವಿಲ್‌ ಪಿಎಸ್‌ಐಗಳಲ್ಲಿ 46 ಅಭ್ಯರ್ಥಿಗಳು ಹೈದ್ರಾಬಾದ ಕರ್ನಾಟಕದರು. ಇಬ್ಬರಲ್ಲಿ ಒಬ್ಬರು ಮಂಗಳೂರು, ಇನ್ನೊಬ್ಬರು ಮೈಸೂರು ವಿಭಾಗಕ್ಕೆ ಸೇರಿದವರು. 371ನೇ (ಜೆ) ವಿಧಿ ಅಡಿ ಇವರು ನೇಮಕವಾಗಿದ್ದಾರೆ. 46 ಪಿಎಸ್‌ಐಗಳು ಹೈ.ಕ ಭಾಗದಲ್ಲಿಯೇ ಸೇವೆ ಸಲ್ಲಿಸಲಿದ್ದಾರೆ. ಅದರಂತೆ 36 ವೈರಲೆಸ್‌ ಪಿಎಸ್‌ಐಗಳಲ್ಲಿ 14 ಅಭ್ಯರ್ಥಿಗಳು ಹೈದ್ರಾಬಾದ ಕರ್ನಾಟಕದವರಾಗಿದ್ದಾರೆ. ಉಳಿದವರು ರಾಜ್ಯದ ಇತರ ಭಾಗದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next