ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ವೃತ್ತಿಪರ ಮತ್ತು ಹವ್ಯಾಸಿ ಆಟ-ಕೂಟದ ಕಲಾವಿದರಿಗೆ ಅವಕಾಶ ಕಲ್ಪಿಸುವ ವೇದಿಕೆ. ಕೀರ್ತಿಶೇಷ ಕಲಾವಿದ ಮಿಜಾರು ಸುಬ್ರಾಯ ಭಟ್ಟರ ನೆನಪಿನಲ್ಲಿ ವರ್ಷಂಪ್ರತಿ ಕಾರ್ಯಕ್ರಮ ಸಂಯೋಜನೆ, ವಿಪುಲವಾದ ಪ್ರೇಕ್ಷಕ ವರ್ಗ, ಸಂಘಟನೆಯ ಕಾರ್ಯಧ್ಯಕ್ಷ ದೇವಾನಂದ ಭಟ್ಟರ ಸಾರಥ್ಯ. ಈ ಬಾರಿ ಮೂಡಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಜು.19ರಿಂದ ಮೂರು ದಿನ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭದಲ್ಲಿ ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಮತ್ತು ಮದ್ದಳೆಗಾರ ಪೆರುವಾಯಿ ಕೃಷ್ಣ ಭಟ್ಟರಿಗೆ ಯಕ್ಷದೇವ ಪ್ರಶಸ್ತಿ ಸಮರ್ಪಿಸಲಾಗುವುದು.
ಬೋಳಾರ ಸುಬ್ಬಯ್ಯ ಶೆಟ್ಟಿ
ತೆಂಕುತಿಟ್ಟು ಯಕ್ಷಗಾನದ ಹಿರಿಯ ವೇಷಧಾರಿಗಳಲ್ಲೊಬ್ಬರು. ಕಾಸರಗೋಡು ಜಿಲ್ಲೆಯ ಮೂಡಂಬೈಲು ಹುಟ್ಟೂರು.ತಾರುಣ್ಯದಲ್ಲಿ ಕೆಲವರ್ಷ ಸ್ವಂತ ಹೋಟೆಲ್ ನಡೆಸಿದರು. ಕ್ರಮೇಣ ವ್ಯವಹಾರ ಕಡಿಮೆ ಎನಿಸಿತು. ಪಟ್ಟ ಪರಿಶ್ರಮ ಫಲಿಸಲಿಲ್ಲ. ಆ ವೇಳೆಗಾಗಲೇ ಶೆಟ್ಟರಲ್ಲಿ ಬಲವಾಗಿದ್ದ ಯಕ್ಷರಂಗದ ಒಲುಮೆ ಮೇಳದತ್ತ ಸೆಳೆಯಿತು. ಸುಬ್ಬಯ್ಯ ಶೆಟ್ಟರು ಅಬ್ಬರದ ಬಣ್ಣದ ಬಾಳಿನಲ್ಲಿ ನೆಲೆ ಕಂಡುಕೊಂಡರು.
ತಮ್ಮಣ್ಣ ಸುವರ್ಣರಿಂದ ನಾಟ್ಯದ ಪಾಠ, ತನಿಯಪ್ಪ ಪಂಡಿತರು ಮತ್ತು ಕೋಟಿ ಪಾತ್ರದ ಖ್ಯಾತಿವಂತ ಬೋಳಾರ ನಾರಾಯಣ ಶೆಟ್ಟರ ಪ್ರಭಾವ ಆವರಿಸಿತು. ಸುಂಕದಕಟ್ಟೆ, ಕದ್ರಿ, ಕರ್ನಾಟಕ, ಕುಂಟಾರು ಮೊದಲಾದ ಏಳೆಂಟು ಮೇಳಗಳಲ್ಲಿ ಸಂಚಾರ. ರಾ-ಸಾಮಗ, ಕೋಳ್ಯೂರು, ಕರ್ನೂರು, ಮಿಜಾರು, ಅರುವ, ಪುಳಿಂಚ …ಹೀಗೆ ಉನ್ನತ ಕಲೋಪಾಸಕರ ಜೊತೆ 50 ವರ್ಷ ಮುನ್ನಡೆದರು.
ಧರ್ಮರಾಯ , ದೇವೇಂದ್ರ ಮೊದಲಾದ ಪೀಠಿಕೆ ವೇಷ. ಶುಂಭ, ಶೂರ್ಪನಖೀ, ಲಂಕಿಣಿ, ತಾಟಕಿ ಮುಂತಾದ ಬಣ್ಣದ ವೇಷ ಹಾಗೂ ತುಳು ಪ್ರಸಂಗದ ಪೆರುಮಳ ಬಲ್ಲಾಳ, ತಿಮ್ಮಣ್ಣ ಅಜಿಲ, ಮಲ್ಲಯ್ಯ ಬುದ್ಧಿವಂತ ಪಾತ್ರ ನಿರ್ವಹಣೆಯಲ್ಲಿ ಪ್ರಚಲಿತರು. ಹಿತಮಿತವಾದ ಮಾತು, ಆವರಣ ಭಂಗವೆನಿಸದ ಭಾವಾಭಿನಯ ಎಲ್ಲವೂ ಅಚ್ಚುಕಟ್ಟು. ಚೌಕಿಯ ಮಟ್ಟಿಗೆ ಒಳ್ಳೆಯ ಸುಧಾರಿಕೆ. ಉಡುಪಿ ಕಲಾರಂಗ ಮತ್ತು ಇನ್ನಿತರ ಹತ್ತಾರು ಪ್ರಶಸ್ತಿ ಪುರಸ್ಕೃತರು.
ಪೆರುವಾಯಿ ಕೃಷ್ಣ ಭಟ್ಟರು
ಬಂಟ್ವಾಳದ ಪೆರುವಾಯಿ ಹುಟ್ಟೂರು. ಧರ್ಮಸ್ಥಳ ಲಲಿತ ಕಲಾಕೇಂದ್ರದ ಪ್ರಥಮ ತಂಡದ ವಿದ್ಯಾರ್ಥಿ. ಗುರು ಮಾಂಬಾಡಿ ನಾರಾಯಣ ಭಾಗವತ. ಅಜ್ಜ ಶಾಂತಿಮೂಲೆ ನಾರಾಯಣ ಭಟ್ಟರು ಮತ್ತು ಬಲಿಪ ನಾರಾಯಣ ಭಾಗವತರಿಂದ ಹಿಮ್ಮೇಳ ವಾದನ ಕಲೆಯ ಪ್ರೇರಣೆ. ಕಟೀಲು, ಕುಂಬಳೆ, ಕದ್ರಿ, ಅಳದಂಗಡಿ ಮೇಳಗಳಲ್ಲಿ ಸುಮಾರು 45 ವರ್ಷಗಳ ತಿರುಗಾಟದ ಅನುಭವಿ.
ಹಳೆಯ ಕಾಲದ ವಾದನ ಶೈಲಿಗೆ ಒಗ್ಗಿಕೊಂಡವರು. ತನ್ನ ತಿರುಗಾಟದ ಮೇಳದ ಪ್ರದರ್ಶನಗಳಿಗೆ ಮಾತ್ರ ಒಪ್ಪಿಕೊಳ್ಳುವವರು. ಇಂದಿನ ಇತರ ಆಟ-ಕೂಟಗಳತ್ತ ಹಂಬಲಿಸಿದವರಲ್ಲ.ಇದ್ದ ಸೇವೆಯ ಅವಕಾಶ ಸಾಕೆಂದು ಸಂತಸಪಟ್ಟವರು. ಸಾತ್ವಿಕ ಮನೋಭಾವ, ಮಿತಭಾಷಿ, ಮೇಳನಿಷ್ಠ, ಸಮಯಪಾಲನೆ ಭಟ್ಟರ ಈ ಗುಣಗಳೆಲ್ಲ ಗುರುತರವಾದುದು.
– ಸುಬ್ರಹ್ಮಣ್ಯ ಬೈಪಾಡಿತ್ತಾಯ, ನಂದಳಿಕೆ