Advertisement

ವೀರಭದ್ರ ನಾಯ್ಕ ಸಂಸ್ಮರಣಾ ಪ್ರಶಸ್ತಿಗೆ ಸುಬ್ಬಣ್ಣ ಗಾಣಿಗ 

06:00 AM Apr 13, 2018 | Team Udayavani |

ಶ್ರೀ ನಂದಿಕೇಶ್ವರ ಯಕ್ಷಗಾನ ಮಂಡಳಿ ವತಿಯಿಂದ ಮಟಪಾಡಿ ಶೈಲಿಯ ಜನಕ ಗುರು ವೀರಭದ್ರ ನಾಯಕ್‌ ನೆನಪಿನಲ್ಲಿ ನೀಡುವ ಪ್ರಶಸ್ತಿಯನ್ನು ಈ ಬಾರಿ ಅವರ ಶಿಷ್ಯರಲ್ಲಿ ಒಬ್ಬರಾದ ಬಡಗುತಿಟ್ಟಿನ ಸ್ತ್ರೀ ವೇಷದಾರಿ ಹೆರಂಜಾಲು ಸುಬ್ಬಣ್ಣ ಗಾಣಿಗರಿಗೆ ನೀಡಲಾಗುವುದು.ಎ.14ರಂದು ಸಂಸ್ಥೆಯ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನದೊಂದಿಗೆ ಇನ್ನೋರ್ವ ಅಶಕ್ತ ಕಲಾವಿದ ಕೊಪ್ಪಾಟೆ ಮುತ್ತ ಗೌಡರನ್ನು ಸನ್ಮಾನಿಸಲಾಗುವುದು. 

Advertisement

ಹಾರಾಡಿ ಕಲಾವಿದರ ಮೈಯ ರೇಖೆ,ಬಳುಕು, ಅಭಿನಯ, ಲಾಲಿತ್ಯಪೂರ್ಣ ರಂಗಚಲನೆ,ಲಾಸ್ಯದಿಂದ ಕೂಡಿದ ಹೆಜ್ಜೆಗಾರಿಕೆ, ಸುಮಧುರ ಕಂಠ ಮಾಧುರ್ಯ ಇವೆಲ್ಲವನ್ನು ಮೈಗೂಡಿಸಿಕೊಂಡವರು ಸುಬ್ಬಣ್ಣ ಗಾಣಿಗರು.ಹೆರಂಜಾಲು ಕುಟುಂಬದ  ನಾರಾಯಣ ಗಾಣಿಗ ಮತ್ತು ತುಂಗಮ್ಮ ಗಾಣಿಗರು ಸುಬ್ಬಣ್ಣ ಗಾಣಿಗರ ತಂದೆ ತಾಯಿಯರು.

 ಸುಬ್ಬಣ್ಣ ಗಾಣಿಗರ ಆರಂಭದ ಗುರುಗಳು ಸಹೋದರ ವೆಂಕಟರಮಣ ಗಾಣಿಗರು.ಆರಂಭದಲ್ಲಿ ಹೂವಿನಕೋಲಿನಲ್ಲಿ ಭಾಗವಹಿಸಿ ಅನುಭವ ಗಳಿಸಿಕೊಂಡ ಇವರು ಹದಿಮೂರನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಪೀಠಿಕಾ ಸ್ತ್ರೀ ವೇಷದಿಂದ ಹಂತ ಹಂತವಾಗಿ ಮೇಲೇರಿ ಸಾಲಿಗ್ರಾಮ ಮೇಳದಲ್ಲಿ ಸ್ತ್ರೀ ವೇಷದಾರಿಯಾಗಿ ಗುರುತಿಸಿಕೊಂಡರು.ತೆಂಕುತಿಟ್ಟಿನ ಇರಾ ಸೋಮನಾಥೇಶ್ವರ ,ಕೊಲ್ಲೂರು, ಕುಂಡಾವು, ಇಡಗುಂಜಿ ಮೇಳ ಹೀಗೆ ಮೂರೂ ತಿಟ್ಟುಗಳಲ್ಲಿ ತಿರುಗಾಟ ಮಾಡಿ ಸೈ ಎನಿಸಿಕೊಂಡವರು.

 ಮಂದಾರ್ತಿ ಮೇಳಕ್ಕೆ ಪ್ರಧಾನ ಸ್ತ್ರೀ ವೇಷದಾರಿಯಾಗಿ ಸೇರಿದ ಇವರು ನಿವೃತ್ತರಾಗುವವರೆಗೆ ಈ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಮತಾöಡಿ ನರಸಿಂಹ ಶೆಟ್ಟಿ ಮತ್ತು ಹಾರಾಡಿ ಅಣ್ಣಪ್ಪ ಗಾಣಿಗರ ಹಿಮ್ಮೇಳದಲ್ಲಿ ಕೋಡಿ ಶಂಕರ ಗಾಣಿಗ, ಉಡುಪಿ ಬಸವ, ಮೊಳಹಳ್ಳಿ ಹೆರಿಯ, ಮಜ್ಜಿಗೆಬೈಲು ಆನಂದ ಶೆಟ್ಟರೊಂದಿಗೆ ಸುಬ್ಬಣ್ಣ ಗಾಣಿಗರ ಸ್ತ್ರೀ ವೇಷ ಅಪಾರ ಜನಮನ್ನಣೆ ಗಳಿಸಿತ್ತು.

ಮಂದಾರ್ತಿ ಕ್ಷೇತ್ರ ಮಹಾತ್ಮೆಯ ದೇವರತಿ, ದೇವಿ ಮಹಾತ್ಮೆಯ ದೇವಿ,ಸತಿ ಸುಶೀಲೆ, ಯಕ್ಷಲೋಕ ವಿಜಯದ ಪದ್ಮಾಕ್ಷಿ, ಚಿತ್ರಾವತಿಯ ಮದನಾಂಗಿ, ರೂಪಶ್ರೀ , ರತ್ನಶ್ರೀ,ಭಾಗ್ಯಶ್ರೀ ಮುಂತಾದ ಹೊಸ ಪ್ರಸಂಗಗಳ ಇವರ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿದ್ದವು.ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.ಚಿತ್ರಾಂಗದೆ, ಸುಭದ್ರೆ, ದಮಯಂತಿ, ಕಯಾದು, ಚಂದ್ರಮತಿ ಸೀತೆ, ಮುಂತಾದ ಸ್ತ್ರೀ ಪಾತ್ರಗಳಿಗೆ ಹೊಸ ರೂಪವನ್ನು ನೀಡಿದ್ದಾರೆ. ಭಾಗವತರಾಗಿಯೂ ಪ್ರಸಿದ್ಧರಾದ ಇವರು ಕಳುವಾಡಿ ಮೇಳವನ್ನು ಸ್ವತಹ ಮುನ್ನೆಡೆಸಿ ಯಜಮಾನಿಕೆಯ ಸಿಹಿಕಹಿಯನ್ನು ಉಂಡವರು.
 ಸುಮಾರು ಐದು ದಶಕಗಳ ಸುದೀರ್ಘ‌ ತಿರುಗಾಟದ ಅನಂತರ ಈಗ ತನ್ನದೇ ಗುರುಕುಲದಲ್ಲಿ ಆಸಕ್ತರಿಗೆ ಯಕ್ಷಗಾನದ ತರಬೇತಿ ನೀಡುತ್ತಿರುವ ಇವರನ್ನು ಸುಮಾರು ಮೂವತ್ತಕ್ಕೂ ಅಧಿಕ ಸಂಘಟನೆಗಳು ಸನ್ಮಾನಿಸಿವೆ. 

Advertisement

ಪ್ರೊ| ಎಸ್‌.ವಿ. ಉದಯಕುಮಾರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next