ಬೆಂಗಳೂರು: ನಗರದ ಬಹುನಿರೀಕ್ಷಿತ ಉಪ ನಗರ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ 40 ತಿಂಗಳ ಗಡುವಿನಲ್ಲಿ ನಾಲ್ಕೂ ಕಾರಿಡಾರ್ ಪೂರ್ಣಗೊಳ್ಳುವುದು ಒತ್ತಟ್ಟಿಗಿರಲಿ, ಬರೀ ಒಂದು ಕಾರಿಡಾರ್ ಲೋಕಾರ್ಪಣೆಗೊಳ್ಳುವುದೇ ಅನುಮಾನ!
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜೂನ್‌ನಲ್ಲಿ ಈ ಯೋಜನೆ ಶಂಕುಸ್ಥಾಪನೆ ವೇಳೆ 40 ತಿಂಗಳ ಗಡುವು ನೀಡಿದ್ದರು. ಈಗ ಸ್ವತಃ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ-ರೈಡ್) ಪ್ರಸ್ತುತ ಪ್ರಗತಿಯನ್ನು ಆಧರಿಸಿ ಗಡುವು ಹಾಕಿಕೊಂಡಿದೆ. ಅದರಂತೆ 2025ರ ಜೂನ್‌ಗೆ ಉಪನಗರ ರೈಲು ಯೋಜನೆಯ ಕೇವಲ ಒಂದು ಕಾರಿಡಾರ್‌ನ ಮೊದಲಾರ್ಧ ಮಾತ್ರ ಪೂರ್ಣಗೊಳ್ಳಲಿದೆ. 4 ಕಾರಿಡಾರ್‌ಗಳಲ್ಲಿ ಒಂದೊಂದು ಕಾರಿಡಾರ್ ಗೂ ಪ್ರತ್ಯೇಕ ಡೆಡ್‌ಲೈನ್ ಹಾಕಿಕೊಳ್ಳಲಾಗಿದೆ.
2027ರ ಡಿಸೆಂಬರ್‌ಗೆ ನಾಲ್ಕೂ ಕಾರಿಡಾರ್ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಬೋಗಿಗಳ ಪೂರೈಕೆಯನ್ನು ಆಧರಿಸಿ ರೈಲುಗಳ ಕಾರ್ಯಾಚರಣೆ ದಿನಾಂಕ ನಿರ್ಧಾರ ಆಗಲಿದೆ. ಈ ಪರಿಷ್ಕೃತ ವೇಳಾಪಟ್ಟಿಯನ್ನು ಈಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೂ ತರಲಾಗಿದ್ದು, ಆ ಮೂಲಕ ಸಮ್ಮತಿಯನ್ನೂ ಪಡೆಯಲಾಗಿದೆ. ಇದರಿಂದ ಬೆಂಗಳೂರಿಗರಿಗೆ ಉಪನಗರ ರೈಲು ಸೇವೆ ಭಾಗ್ಯ ಮತ್ತಷ್ಟು ಮುಂದಕ್ಕೆ ಹೋದಂತಾಗಿದೆ.
ಚುನಾವಣೆ ತುರುಸು; ಕಾಮಗಾರಿ ಚುರುಕು!: ಚಿಕ್ಕಬಾಣಾವರ- ಯಶವಂತಪು-ಬೆನ್ನಿಗಾನಹಳ್ಳಿ ನಡುವಿನ 23 ಕಿ.ಮೀ. ಉದ್ದದ ಮೊದಲ ಕಾರಿಡಾರ್ 2 ಹಂತಗಳಲ್ಲಿ ಪೂರ್ಣಗೊಳ್ಳಲಿದ್ದು, ಚಿಕ್ಕಬಾಣಾವರ- ಯಶವಂತಪುರ ನಡುವಿನ 7.4 ಕಿ.ಮೀ. 2025ರ ಜೂನ್ ಮತ್ತು ಯಶವಂತಪು- ಬೆನ್ನಿಗಾನಹಳ್ಳಿ 2026ರ ಜೂನ್‌ನಲ್ಲಿ ಲೋಕಾರ್ಪಣಗೊಳ್ಳಲಿದೆ. ಈ ಮಧ್ಯೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಂತೆ ಯೋಜನೆ ಕಾಮಗಾರಿ ಚುರುಕುಗೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಚಿವರಿಂದ ಆಗಾಗ್ಗೆ ಪ್ರಗತಿ ಪರಿಶೀಲನಾ ಸಭೆಗಳು, ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ಸಭೆ ನಡೆದಿವೆ. ಇದರಿಂದ ಅಧಿಕಾರಿಗಳು ಕೂಡ ಮೈಕೊಡವಿ ದಂತಿದೆ.
ಪರಿಣಾಮ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ತಡೆಗೋಡೆ ನಿರ್ಮಾಣ, ಅರ್ತ್ ರಿಟೇನಿಂಗ್ ಸ್ಟ್ರಕ್ಚರ್ ಗೋಡೆ ನಿರ್ಮಾಣ, ಹೆಚ್ಚುವರಿ ಪೈಲ್‌ಲೋಡ್ ಟೆಸ್ಟ್, ಕಾಂಕ್ರೀಟ್ ಹಾಕುವ ಕೆಲಸ ನಡೆದಿದೆ. ಚುನಾವಣೆ ಘೋಷಣೆ ಯಾಗುವಷ್ಟರಲ್ಲಿ ಎದ್ದುಕಾಣುವ ಪ್ರಗತಿ ತೋರಿಸಲು ಶತಾಯಗತಾಯ ಪ್ರಯತ್ನ ನಡೆದಿದೆ. ಇದಕ್ಕಾಗಿ ರಾಜಕೀಯ ನಾಯಕರುಗಳಿಂದಲೂ ಒತ್ತಡ ಇದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ರೈಲ್ವೆ ಇಲಾಖೆ ವರ್ತುಲ ರೈಲು ಪರಿಚಯಿಸುತ್ತಿದೆ. ಸುಮಾರು 287 ಕಿ.ಮೀ. ಉದ್ದದ ಈ ಮಾರ್ಗವು ದೇಶದ ಅತಿ ಉದ್ದದ ವರ್ತುಲ ರೈಲ್ವೆ ಜಾಲ ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ರೈಲ್ವೆ ಸಚಿವರು ಯೋಜನೆ ಪೂರ್ವ ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಚಿಸಿದ್ದು, ಇದಕ್ಕಾಗಿ 7 ಕೋಟಿ ರೂ. ನೀಡಿದ್ದಾರೆ. ಈ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆಗಿಂತ ವರ್ತುಲ ರೈಲು ವೇಗವಾಗಿ ಸಾಗುವ ಸಾಧ್ಯತೆ ಇದೆ. ಇದಕ್ಕೆ ಸಕಾರಣವೂ ಇದ್ದು, ಸಂಪೂರ್ಣವಾಗಿ ರೈಲ್ವೆ ಇಲಾಖೆಯಿಂದಲೇ ಇದನ್ನು ನಿರ್ಮಿಸಲಾಗುತ್ತಿದೆ.
ಇನ್ನೂ ನೇಮಕವಾಗದ ಕಾಯಂ ಎಂಡಿ: ಕೆ-ರೈಡ್‌ಗೆ ಇನ್ನೂ ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡದಿರುವುದು ಕೂಡ ಯೋಜನೆ ಆಮೆಗತಿಯಲ್ಲಿ ಸಾಗಲು ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಐಎಎಸ್ ಅಧಿಕಾರಿಗಿಂತ ತಂತ್ರಜ್ಞರನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸುವುದು ಹೆಚ್ಚು ಸೂಕ್ತ ಎಂಬ ಒತ್ತಾಯವೂ ಇದೆ. ಈ ಬಗ್ಗೆ ಕೆಲ ಸಂಘಟನೆಗಳು, ಖುದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನವನ್ನೂ ಸೆಳೆದಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಪ್ರಯತ್ನ ಮಾತ್ರ ಆಗಿಲ್ಲ. ಈ ವಿಚಾರದಲ್ಲಿ ಕೇಂದ್ರದ ಜತೆಗೆ ರಾಜ್ಯ ಸರ್ಕಾರದ ಪ್ರಯತ್ನವೂ ಅತ್ಯಗತ್ಯ. ಯೋಜನೆ ಪ್ರಗತಿ ದೃಷ್ಟಿಯಿಂದ ಸರ್ಕಾರಗಳು ಮುಂದಾಗಬೇಕು ಎಂದು ತಜ್ಞರು ಒತ್ತಾಯಿಸುತ್ತಾರೆ.
-ವಿಜಯಕುಮಾರ ಚಂದರಗಿ