ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳ ಸಬ್ ಟೆಂಡರ್‌ಗೆ ಅವಕಾಶ ಇಲ್ಲ. ಆದರೆ ಸಬ್ ಟೆಂಡರ್ ಪಡೆದು ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇನ್ನು ಮುಂದೆ ಎಲ್ಲಿಯೂ ಟೆಂಡರ್ ಹಾಕದಂತೆ ನೋಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸೂಚಿಸಿದರು.
ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಸ್ಮಾರ್ಟ್ ಸಿಟಿಯಲ್ಲಿ ನಾಲ್ಕೈದು ಪ್ಯಾಕೇಜ್‌ಗಳಲ್ಲಿ ಸಬ್ ಗುತ್ತಿಗೆದಾರರೇ ಕಾಮಗಾರಿ ನಡೆಸಿದ್ದಾರೆ. ಇದರಿಂದ ಕಳಪೆ ಕಾಮಗಾರಿ ನಡೆಯುತ್ತಿದ್ದು, ಇದರ ಬಗ್ಗೆ ಯಾವ ಅಧಿಕಾರಿಗಳೂ ಕ್ರಮ ಕೈಗೊಂಡಿಲ್ಲ. ನಗರದ ಕಾಂಗ್ರೆಸ್ ರಸ್ತೆಯಲ್ಲಿ ನಿರ್ಮಾಣವಾದ ಹೊಸ ರಸ್ತೆಯೇ ಬಿರುಕು ಬಿದ್ದಿದೆ ಎಂದು ಸಚಿವರ ಗಮನಕ್ಕೆ ತಂದರು.
ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಉದಯಶಿವಕುಮಾರ ಬೆಳಗಾವಿಗೆ ಬಂದೇ ಇಲ್ಲ. ನಾಲ್ಕು ಪ್ಯಾಕೇಜ್ ಕಾಮಗಾರಿ ಇವರ ಬಳಿ ಇದೆ. ಕಾಮಗಾರಿ ಹೇಗೆ ನಡೆದಿದೆ ಎಂಬುದನ್ನು ವಿಚಾರಿಸಿದರೆ ಹೈದರಾಬಾದ್‌ನಲ್ಲಿ ಇರುವುದಾಗಿ ಹೇಳುತ್ತಾರೆ. ಹೀಗಾಗಿ ಕಾಮಗಾರಿ ಮುಗಿಯುವುದಾದರೂ ಯಾವಾಗ ಎಂದು ಪ್ರಶ್ನಿಸಿದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಈಗಾಗಲೇ ಎಲ್ಲ ಮನೆಗಳಲ್ಲಿಯೂ ಮಳೆ ನೀರು ಸಂಗ್ರಹ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಕೇವಲ ಒಂದೇ ಉದ್ಯಾನವನದಲ್ಲಿ ಮಳೆ ನೀರು ಸಂಗ್ರಹ ಮಾಡಿದರೆ ಹೇಗೆ. ನಗರದ ಎಲ್ಲ ಉದ್ಯಾನವನಗಳಲ್ಲೂ ಮಾಡಬೇಕು. ನೂತನ ಬಸ್ ಶೆಲ್ಟರ್‌ಗಳಲ್ಲಿ ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯುವಂತಾಗಬೇಕು. ಎಲ್ಲೆಲ್ಲಿ ನಿರ್ಮಾಣ ಆಗಬೇಕು ಎಂಬುದನ್ನು ಪೊಲೀಸ್ ಇಲಾಖೆ ಅವರೊಂದಿಗೆ ಮಾತನಾಡಿ, ಬಸ್ ಶೆಲ್ಟರ್ ಮಾಡಬೇಕು ಎಂದು ಸೂಚನೆ ನೀಡಿದರು.
Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ಸಚಿವರು, ಟೆಂಡರ್ ಪಡೆದು ಬೇರೆಯವರ ಕಡೆಯಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಗುತ್ತಿಗೆದಾರರ ಮಾಹಿತಿ ಪಡೆದುಕೊಳ್ಳಬೇಕು. ಗುಣಮಟ್ಟದ ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳಬೇಕು. ಸಬ್ ಗುತ್ತಿಗೆದಾರರು ನೇಮಿಸಿರುವುದು ಖಾತ್ರಿಯಾದರೆ ಅವರ ಮೇಲೆ ಕೇಸು ದಾಖಲಿಸಿ ಎಂದು ಸೂಚನೆ ನೀಡಿದರು. ಸ್ಥಳೀಯರಿಗೆ ಗುತ್ತಿಗೆ ನೀಡಬೇಕು ಎಂದು ಸೂಚನೆ ನೀಡಿದರು.
Related Articles
Advertisement
ಸ್ಮಾರ್ಟ್‌ಸಿಟಿಯಲ್ಲಿ ಭೂಪಾಲ್ನಲ್ಲಿ ಮಾಡಿರುವ ಸೈಕಲ್ ಟ್ರ್ಯಾಕ್ ಆದಷ್ಟು ಬೇಗ ನಿರ್ಮಿಸಬೇಕು. ನಗರದಲ್ಲಿ ಡಿಜಿಟಲ್ ನಾಮಫಲಕಗಳಲ್ಲಿ ಜಾಹೀರಾತು ಬರುವಂತೆ ಮಾಡಿ. ಇದರಿಂದ ಆದಾಯ ಸಂಗ್ರಹವೂ ಆಗುತ್ತದೆ ಎಂದು ಸಲಹೆ ನೀಡಿದ ಸಚಿವ ಖಾದರ್, ರಸ್ತೆ ಪಕ್ಕದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿದೆಯಾ ಎಂದು ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ರುಕ್ಕಯ್ಯ ಹಡಗಲಿ ಅವರು ಸ್ಮಾರ್ಟ್ ಸಿಟಿಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳು, ಮುಕ್ತಾಯಗೊಂಡ ಕಾರ್ಯದ ಬಗ್ಗೆ ವಿವರ ನೀಡಿದರು. ಜತೆಗೆ ಯಾವ ಕಾಮಗಾರಿಗೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಬುಡಾ ಆಯುಕ್ತ ಪ್ರಿತಮ್ ನಸಲಾಪುರೆ, ಸ್ಮಾರ್ಟ್‌ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ, ಅರ್ಚನಾ ಕುಲಕರ್ಣಿ, ಕೃಷ್ಣಮೂರ್ತಿ ಇತರರು ಇದ್ದರು.
ಮಾದರಿ ಆಸ್ಪತ್ರೆ ನಿರ್ಮಿಸಲು ಸೂಚನೆ:
ಸ್ಮಾರ್ಟ್ ಸಿಟಿ ಯೋಜನೆಯಡಿ ಹೆರಿಗೆ ಆಸ್ಪತ್ರೆಯನ್ನು ಕೇವಲ ಹೆಸರಿಗೆ ಮಾತ್ರ ನಿರ್ಮಾಣ ಮಾಡುವುದು ಬೇಡ. ಕೇವಲ 2ಕೋಟಿ ಅನುದಾನದಲ್ಲಿ ಮಾದರಿ ಆಗಲು ಸಾಧ್ಯ ಇದೆಯೇ. ಎಷ್ಟು ಅನುದಾನ ಬೇಕೋ ಅಷ್ಟನ್ನು ವೆಚ್ಚ ಮಾಡಬೇಕು. ಇದಕ್ಕೆ ಬೇಕಾದಷ್ಟು ಅನುದಾನ ಬರುತ್ತದೆ. ಕೇವಲ 2 ಕೋಟಿ ರೂ. ವೆಚ್ಚ ಏಕೆ. ಒಳ್ಳೆಯ ಯೋಜನೆ ರೂಪಿಸಿ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಬೇರೆ ಜಿಲ್ಲೆ, ರಾಜ್ಯಗಳಿಗೆ ಈ ಹೆರಿಗೆ ಆಸ್ಪತ್ರೆ ಮಾದರಿಯಾಗಿರಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಮಳೆಯಲ್ಲೂ ಕಾಮಗಾರಿ ವೀಕ್ಷಿಸಿದ ಸಚಿವ:
ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳನ್ನು ಜಿಟಿಜಿಟಿ ಮಳೆಯ ನಡುವೆಯೇ ಪರಿಶೀಲಿಸಿದರು. ಮಳೆಯಲ್ಲಿ ನೆನೆಯುತ್ತ ಕೊಡೆ ಹಿಡಿದುಕೊಂಡು ಅಧಿಕಾರಿಗಳಿಂದ ಮಾಹಿತಿ ಪಡೆದರು. ಶ್ರೀನಗರದಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಡ, ಮಹಾಂತೇಶ ನಗರದಲ್ಲಿ ವಿಜ್ಞಾನ ಉದ್ಯಾನ ವೀಕ್ಷಿಸಿದರು. ಅಶೋಕ ನಗರದಲ್ಲಿ 40 ಎಕರೆ ಜಾಗದಲ್ಲಿ ಸ್ಥಾಪಿತವಾದ ವ್ಯಾಯಾಮ ಶಾಲೆ, ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ ವೀಕ್ಷಿಸಿದರು. ಎಪಿಎಲ್, ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಕಡಿಮೆ ಶುಲ್ಕದಲ್ಲಿ ಆಟವಾಡಲು ಅವಕಾಶ ಮಾಡಿಕೊಡಬೇಕು ಎಂದ ಸಚಿವರು, ಶಿವಬಸವ ನಗರದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಪರಿಶೀಲಿಸಿ ಬೀದಿ ದೀಪ, ಸ್ಪೀಕರ್ ಅಳವಡಿಸುವಂತೆ ಹೇಳಿದರು.
ರಾಜೀನಾಮೆ ಕೊಟ್ಟವರು ನಮ್ಮ ಜತೆಗೇ ಇರ್ತಾರೆ:
ರಾಜೀನಾಮೆ ಕೊಟ್ಟ ಶಾಸಕ ಆನಂದ ಸಿಂಗ್ ಹಾಗೂ ರಮೇಶ ಜಾರಕಿಹೊಳಿ ನಮ್ಮ ಜೊತೆಗೇ ಇರುತ್ತಾರೆ, ಬೇರೆಲ್ಲೂ ಹೋಗುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿದವರ ಮನವೊಲಿಸುವ ಕಾರ್ಯ ನಡೆದಿದೆ. ಅವರು ತಮಗಿಷ್ಟ ಬಂದಂತೆ ರಾಜೀನಾಮೆ ಕೊಟ್ಟಿದ್ದಾರೆ. ಸಂವಿಧಾನ ಪ್ರಕಾರ ಫ್ಯಾಕ್ಸ್ ಮೂಲಕ ರಾಜೀನಾಮೆ ಕೊಟ್ಟರೆ ಅದು ಅಂಗೀಕಾರ ಆಗುವುದಿಲ್ಲ. ರಾಜೀನಾಮೆ ಸಮ್ಮಿಶ್ರ ಸರ್ಕಾರದ ನಾಟಕ ಅಲ್ಲ. ರಾಜೀನಾಮೆ ಕೊಟ್ಟವರ ನಾಟಕ ಎಂದರು. ಸಮ್ಮಿಶ್ರ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಅದು ಪೂರ್ಣ ಅವಧಿವರೆಗೆ ಸುಭದ್ರವಾಗಿರಲಿದೆ. ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ರಾಹುಲ್ ಅವರೇ ಇರಬೇಕು ಎಂಬುದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಅಭಿಮತ. ಆದರೆ ನೈತಿಕತೆ ಇಟ್ಟುಕೊಂಡು, ಸೋಲಿನ ಹೊಣೆ ಹೊತ್ತು ರಾಹುಲ್ ಆ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಇದು ಎಲ್ಲರಿಗೂ ಬೇಸರ ತಂದಿದೆ ಎಂದರು.