ಹುಬ್ಬಳ್ಳಿ: ವೈಯಕ್ತಿಕ ನಿಂದನೆ, ಸಾವನ್ನು ರಾಜಕೀಕರಣಗೊಳಿಸಿರುವುದು, ರಾಜಕೀಯಕ್ಕೆ ಕುಟುಂಬ ಎಳೆತಂದಿರುವುದು, ಹಲವು ಆಕ್ಷೇಪಾರ್ಹ ಹೇಳಿಕೆಗಳಿಗೆ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇದಿಕೆಯಾಗತೊಡಗಿದ್ದು, ಪ್ರಚಾರ ವೈಖರಿಯೇ ದಾರಿ ತಪ್ಪುತ್ತಿದ್ದಂತೆ ಭಾಸವಾಗತೊಡಗಿದೆ.
ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನ ಹಾಗೂ ಕಾಂಗ್ರೆಸ್ ಶಾಸಕರಾಗಿದ್ದ ಡಾ| ಉಮೇಶ ಜಾಧವ ಅವರ ರಾಜೀನಾಮೆಯಿಂದಾಗಿ ಧಾರವಾಡ ಜಿಲ್ಲೆ ಕುಂದಗೋಳ ಹಾಗೂ ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಚುನಾವಣೆ ಪ್ರಚಾರದಲ್ಲಿ ವಿವಾದಾತ್ಮಕ ಹಾಗೂ ಆಕ್ಷೇಪಾರ್ಹ ಹೇಳಿಕೆಗಳು ವಿಜೃಂಭಿಸತೊಡಗಿವೆ. ರಾಜಕೀಯ ಆರೋಪ, ವಿಷಯಾಧಾರಿತ ಪ್ರಚಾರದ ಬದಲಾಗಿ, ವ್ಯಕ್ತಿಗತ ಟೀಕೆ-ಮೂದಲಿಕೆ ಹೆಚ್ಚುತ್ತಿವೆ. ಕುಟುಂಬದ ವಿಚಾರ, ಸಾವಿನ ವಿಷಯವನ್ನು ರಾಜಕೀಕರಣಗೊಳಿಸುತ್ತಿರುವುದು ನಾಯಕರ ಚಿಂತನೆ ಎತ್ತ ಸಾಗುತ್ತಿದೆ ಎಂಬ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
2018ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ಸಾವು ಕುರಿತಾಗಿ ನೀಡಿದ ಆಕ್ಷೇಪಾರ್ಹ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ಮಾಜಿ ಸಚಿವ ಶ್ರೀರಾಮುಲು, ಶಿವಳ್ಳಿ ಅವರ ಸಾವಿನ ವಿಚಾರದಲ್ಲೂ ವಿವಾದಾತ್ಮಕ ಹೇಳಿಕೆ ನೀಡಿರುವುದು, ಕೆಲ ಬಿಜೆಪಿ ನಾಯಕರು ಅದನ್ನು ಸಮರ್ಥಿಸಿಕೊಳ್ಳುವ ರೀತಿ ಹೇಳಿಕೆ ನೀಡಿರುವುದು ವಿವಾದವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಕುಂದಗೋಳ ಕ್ಷೇತ್ರದ ಪ್ರಚಾರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅತ್ಯಾಚಾರ ಪ್ರಕರಣವೊಂದರ ವಿಷಯವಾಗಿ ಸಿದ್ದರಾಮಯ್ಯ ಅವರ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಜಾತಿಯೊಂದರ ಹೆಸರನ್ನು ಬಹಿರಂಗ ಸಭೆಯಲ್ಲಿ ಬಳಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಈಶ್ವರಪ್ಪ ಕ್ಷಮೆ ಕೇಳಬೇಕಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂದಗೋಳ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನ ಬಳಕೆ ಆಕ್ಷೇಪಕ್ಕೆ ಕಾರಣವಾಗಿತ್ತು.
ಚಿಂಚೋಳಿ ಕ್ಷೇತ್ರದಲ್ಲಿ ಡಾ| ಉಮೇಶ ಜಾಧವ ಅವರು 50ಲಕ್ಷ ರೂ. ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂಬ ಕಾಂಗ್ರೆಸ್‌ನವರ ಆರೋಪ, ದೇವರ ಮೇಲೆ ಆಣೆ-ಪ್ರಮಾಣದ ಆಹ್ವಾನಕ್ಕೂ ಹೋಗಿದೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹಿ ಎನ್ನುವ ಡಾ| ಉಮೇಶ ಜಾಧವ, ಉಪ ಚುನಾವಣೆಯಲ್ಲಿ ಸಹೋದರನ ಬದಲು ಪುತ್ರನಿಗೆ ಟಿಕೆಟ್ ಕೊಡಿಸಿದ್ದೂ ಕಾಂಗ್ರೆಸ್‌ನವರ ಟೀಕೆಗೆ ಆಹಾರವಾಗಿದೆ.
Advertisement
ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನವನ್ನು ರಾಜಕೀಕರಣಗೊಳಿಸುವ ವಿವಾದಾತ್ಮಕ ಹೇಳಿಕೆ ಇದೀಗ ಹಲವು ತಿರುವುಗಳನ್ನು ಪಡೆಯುತ್ತಿದೆ. ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಚಿವ ಶ್ರೀರಾಮುಲು, ಮೈತ್ರಿ ಪಕ್ಷಗಳ ವಿರುದ್ಧದ ಆರೋಪದ ಮಾತಿನ ಭರಾಟೆಯಲ್ಲಿ, ಸಿ.ಎಸ್. ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರದ ಕಿರುಕುಳ ಕಾರಣ ಎಂಬ ಹೇಳಿಕೆ ವಿವಾದ ರೂಪ ಪಡೆದುಕೊಂಡಿದೆ. ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
Related Articles
Advertisement
ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿರುವ ಡಾ| ಉಮೇಶ ಜಾಧವ ಹಾಗೂ ಬಿಜೆಪಿಯವರು ಮಲ್ಲಿಕಾರ್ಜುನ ಖರ್ಗೆಯವರು 50 ಸಾವಿರ ಕೋಟಿ ರೂ ಆಸ್ತಿ ಗಳಿಸಿದ್ದಾರೆ, ಪುತ್ರನಿಗಾಗಿ ಉಳಿದ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಬೆಳೆಯದಂತೆ ನೋಡಿಕೊಂಡಿದ್ದಾರೆ ಎಂಬೆಲ್ಲ ಆರೋಪ ಮಾಡಿದರು. ಇದು ಸಾಲದು ಎನ್ನುವಂತೆ ನನ್ನ ಮಗಳು ಪಿಯುದಲ್ಲಿ ಅನುತ್ತೀರ್ಣರಾಗಲು ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿದ ಆಕ್ಷೇಪಾರ್ಹ ಆರೋಪಗಳೇ ಕಾರಣ ಎಂದು ಡಾ| ಉಮೇಶ ಜಾಧವ ಆರೋಪಿಸುವ ಮೂಲಕ ಕುಟುಂಬದ ವಿಚಾರಗಳನ್ನು ರಾಜಕೀಕರಣಗೊಳಿಸುವ ಯತ್ನ ತೋರಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಸಿ.ಎಸ್. ಶಿವಳ್ಳಿ ಅವರ ಸಾವಿನ ಕುರಿತು ಶ್ರೀರಾಮುಲು ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಶಿವಕುಮಾರ ಸ್ನೇಹಿತ ಶಿವಳ್ಳಿ ಸ್ಮರಿಸಿಕೊಂಡು ಕಣ್ಣೀರು ಹಾಕುವ ಮೂಲಕ ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಾಧನೆ-ಅಭಿವೃದ್ಧಿ ಚಿಂತನೆಗಳ ಬದಲಾಗಿ ವೈಯಕ್ತಿಕ ಹಾಗೂ ಆಕ್ಷೇಪಾರ್ಹ ಹೇಳಿಕೆಗಳ ಮೂಲಕ ವಿವಾದಗಳನ್ನು ಸೃಷ್ಟಿಸುತ್ತಿದೆ. ಮತದಾನ ದಿನ ಹತ್ತಿರವಾಗುತ್ತಿದ್ದಂತೆಯೇ ಇನ್ನಷ್ಟು ಆರೋಪ-ಪ್ರತ್ಯಾರೋಪ ಹೆಚ್ಚಳವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
•ಅಮರೇಗೌಡ ಗೋನವಾರ