Advertisement
ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಂಗ್ರೆಸ್ ಪ್ರತಿನಿಧಿತ್ವದ ಕ್ಷೇತ್ರಗಳಾಗಿದ್ದು, ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳಬೇಕಾಗಿದೆ. ಕುಂದಗೋಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಂಚೋಳಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಮುತುವರ್ಜಿ ವಹಿಸಿ ಟಿಕೆಟ್ ಕೊಡಿಸಿದ್ದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಸವಾಲು ಎದುರಾಗಿದೆ.
Related Articles
Advertisement
ಶಿವಳ್ಳಿ ಕುಟುಂಬದ ಬದಲು ಬೇರೆ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ, ಬಂಡಾಯ ಸ್ಪರ್ಧೆಗೆ ಮುಂದಾಗುತ್ತೇವೆ ಎಂಬ ಕಾಂಗ್ರೆಸ್‌ನ ಕೆಲವರ ಹೇಳಿಕೆಗಳನ್ನು ಬದಿಗೊತ್ತಿ, ಕುಸುಮಾವತಿ ಶಿವಳ್ಳಿಯವರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಕುಸುಮಾವತಿ ಶಿವಳ್ಳಿ ಅವರ ಸ್ಪರ್ಧೆಯಿಂದ ಅನುಕಂಪ ಕೈ ಹಿಡಿಯಲಿದೆ ಎಂಬುದು ಸಿದ್ದರಾಮಯ್ಯ ಅವರ ಪ್ರಬಲ ವಾದವಾಗಿದೆ. ಕುಸುಮಾವತಿ ಶಿವಳ್ಳಿ ಅವರು ಗೆಲ್ಲಲೇಬೇಕೆಂಬ ಛಲಕ್ಕೆ ಬಿದ್ದಂತಿರುವ ಸಿದ್ದರಾಮಯ್ಯ ಅವರು, ಅವರ ನಾಮಪತ್ರ ಸಲ್ಲಿಕೆ ವೇಳೆ ಸ್ವತ: ಹಾಜರಿದ್ದು, ಗೆಲುವಿನ ತಂತ್ರಕ್ಕೆ ಏನೆಲ್ಲಾ ಸಾಧ್ಯವೋ ಅದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಚಿಂಚೋಳಿಯಲ್ಲೂ ಕಸರತ್ತು: ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಡಾ| ಉಮೇಶ ಜಾಧವ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿಯಲು ಬಾಬುರಾವ್ ಚವ್ಹಾಣ, ಜೈಸಿಂಗ್ ರಾಠೊಡ, ಹೊನ್ನಾ ನಾಯಕ್ ಸೇರಿದಂತೆ ದೊಡ್ಡ ದಂಡೇ ಇತ್ತು. ಆದರೆ, ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಜಿಗಿದಿದ್ದ ಸುಭಾಸ ರಾಠೊಡ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಯಶಸ್ವಿಯಾಗಿದ್ದಾರೆ.
ಚಿಂಚೋಳಿ ಕ್ಷೇತ್ರ ಕಲಬುರಗಿ ಜಿಲ್ಲೆಯಲ್ಲಿ ಇದ್ದರೂ ಲೋಕಸಭೆ ಕ್ಷೇತ್ರವಾರಿನಂತೆ ಬೀದರ ಲೋಕಸಭೆ ವ್ಯಾಪ್ತಿಗೆ ಬರುತ್ತದೆ. ಈ ಕಾರಣದಿಂದ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಖರ್ಗೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಖರ್ಗೆ ಮೈಲುಗೈ ಸಾಧಿಸಿದ್ದಾರೆ.
ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರತಿಷ್ಠೆ ಹಾಗೂ ಸವಾಲು ಖರ್ಗೆ ಅವರ ಮೇಲೆ ಹೆಚ್ಚಿದೆ. ತಾವು ಹೇಳಿದವರಿಗೆ ಪಕ್ಷ ಟಿಕೆಟ್ ನೀಡಿದ್ದರಿಂದ ಅವರನ್ನು ಗೆಲ್ಲಿಸಲೇಬೇಕಾಗಿದೆ. ಇನ್ನೊಂದು ಕಡೆ ತಮ್ಮ ವಿರುದ್ಧ ಲೋಕಸಭೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಡಾ| ಉಮೇಶ ಜಾಧವ ಅವರಿಗೆ ರಾಜಕೀಯವಾಗಿ ಹಿನ್ನಡೆ ಉಂಟು ಮಾಡುವ ಯತ್ನಕ್ಕೆ ಖರ್ಗೆ ಮುಂದಾಗಿದ್ದಾರೆ.
ಚಿಂಚೋಳಿಯಲ್ಲಿ ಡಾ| ಉಮೇಶ ಜಾಧವ ಗೆಲುವು ವೈಯಕ್ತಿಕವಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಗೆಲುವು ಎಂಬುದನ್ನು ಸಾಬೀತು ಪಡಿಸಬೇಕಾದರೆ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಸ್ಥಳೀಯ ಮುಖಂಡರು ಸುಭಾಸ ರಾಠೊಡರನ್ನು ಗೆಲ್ಲಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎನ್ನಲಾಗಿದೆ.
ಸರ್ಕಾರಕ್ಕೂ ಸವಾಲು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೂ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸವಾಲಾಗಿ ಪರಿಣಮಿಸಿದೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಸದಾ ಅಸ್ಥಿರತೆಯ ಅಸ್ತ್ರ ಪ್ರಯೋಗಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯುವ ಮೂಲಕ ಸರ್ಕಾರವನ್ನು ಅಲ್ಪಮತಕ್ಕೆ ತರುವ ಯತ್ನ ಮುಂದುವರಿಸಿದೆ.
ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಸೋತರೆ, ಆಡಳಿತ ಪಕ್ಷದ ಶಾಸಕರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ ಕಾಣಲಿದೆ. ಸರ್ಕಾರ ಅಸ್ಥಿರತೆ ಯತ್ನಕ್ಕೆ ಇನ್ನಷ್ಟು ಬಲ ಬರಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ಉಪ ಚುನಾವಣೆಯನ್ನು ಗೆಲ್ಲುವ ಒತ್ತಡಕ್ಕೆ ಸಮ್ಮಿಶ್ರ ಸರ್ಕಾರ ಸಿಲುಕಿದೆ.
* ಅಮರೇಗೌಡ ಗೋನವಾರ