ಸಿನಿಮಾರಂಗದಲ್ಲಿ ಮೂಲತಃ ಸ್ಟಂಟ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದ ಎ.ರಾಜೇಂದ್ರನ್ ಅಲಿಯಾಸ್ ಮೊಟ್ಟೆ ರಾಜೇಂದ್ರ ಅಥವಾ ನಾನ್ ಕಡಾವುಲ್ ರಾಜೇಂದ್ರನ್ ಈಗ ವಿಲನ್ ಆಗಿ ಚಿರಪರಿಚಿತರಾಗಿದ್ದಾರೆ. ಸುಮಾರು 500 ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದ ರಾಜೇಂದ್ರನ್ ನಿರ್ದೇಶಕ ಬಾಲಾ ಅವರ ಪಿತಾಮಗನ್ ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲಿ ಸಹಾಯಕರಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರಂತೆ. ಆದರೆ ಸಿನಿಮಾದಲ್ಲಿ ನನಗೆ ಚಿಕ್ಕ ಪಾತ್ರವನ್ನು ನೀಡಿ, ಈ ವೇಳೆ ನನಗೆ ಬಾಲಾ ಅವರು ಮುಂದಿನ ಸಿನಿಮಾದಲ್ಲಿ ಒಂದು ಮುಖ್ಯ ರೋಲ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು.
ಕೆಲವು ಸಮಯದ ನಂತರ ಬಾಲಾ ಅವರ ಕಚೇರಿಯಿಂದ ರಾಜೇಂದ್ರನ್ ಗೆ ಕರೆಯೊಂದು ಬಂದಿತ್ತು. ಹೀಗೆ ಬಾಲಾ ಅವರನ್ನು ಭೇಟಿಯಾದಾಗ “ನಾನ್ ಕಡವುಳ್ “ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವಂತೆ ಹೇಳಿದ್ದರು. ನಾನು ಸ್ಟಂಟ್ ಮ್ಯಾನ್ ಆಗಿ ದುಡಿದವ,ವಿಲನ್ ಪಾತ್ರ ಮಾಡಲು ಕಷ್ಟ ಎಂದಿದ್ದೆ. ಆದರೆ ಬಾಲಾ ಅವರು ಈ ರೋಲ್ ಮಾಡಲೇಬೇಕೆಂದು ಹಠ ಹಿಡಿದಿದ್ದರು. ನಂತರ ಏನಾಯ್ತು ಎಂಬುದು ಸಿನಿಮಾದ ನೋಡಿದ ನಿಮಗೆಲ್ಲಾ ಗೊತ್ತೇ ಇದೆಯಲ್ಲಾ ಎಂಬುದು ರಾಜೇಂದ್ರನ್ ಮನದ ಮಾತು!
ಒಬ್ಬ ಸ್ಟಂಟ್ ಮ್ಯಾನ್ ಆಗಿ ಹೇಗೆ ಫೈಟ್ ಮಾಡುತ್ತೇನೆ ಎಂಬುದನ್ನು ಖುದ್ದಾಗಿ ನಾನೇ ಹಲವಾರು ಬಾರಿ ಸಿನಿಮಾ ನೋಡಿ ಸಂತಸಗೊಂಡಿದ್ದೆ. ಆದರೆ ನಾನೊಬ್ಬ ನಟನಾಗಿ, ವಿಲನ್ ಆಗಿ ನನಗೆ ಇದೊಂದು ಬೋನಸ್ ಆಗಿತ್ತು. ಅದಕ್ಕಾಗಿಯೇ ನನ್ನ ವಿಲನ್ ಪಾತ್ರ ಹೇಗಿದೆ ಎಂಬುದನ್ನು ವೀಕ್ಷಿಸಲು ಉದಯಂ ಟಾಕೀಸ್ ಗೆ ಹೋಗಿದ್ದೆ. ಸಿನಿಮಾ ಮುಗಿದ ನಂತರ ಪ್ರೇಕ್ಷಕರು ನನ್ನ ಗುರುತಿಸಿ ಅಭಿನಂದಿಸಿದ್ದರು. ಅದರಲ್ಲಿಯೂ ಕೆಲವು ಮಹಿಳೆಯರು ನನ್ನ ಹತ್ತಿರ ಬರಲು ಹೆದರಿ ದೂರ ನಿಂತಿರುವುದನ್ನು ಗಮನಿಸಿದ್ದರು. ಆಗ ನನಗೆ ನನ್ನ ಪಾತ್ರ ಬೀರಿರುವ ಪರಿಣಾಮದ ಬಗ್ಗೆ ಮನವರಿಕೆಯಾಗಿತ್ತು. ಇದರ ಎಲ್ಲಾ ಶ್ರೇಯಸ್ಸು ಡೈರೆಕ್ಟರ್ ಬಾಲಾ ಅವರಿಗೆ ಸಲ್ಲಬೇಕು ಎಂಬುದು ರಾಜೇಂದ್ರನ್ ಬಿಚ್ಚು ನುಡಿ.
ಸ್ಟಂಟ್ ಮ್ಯಾನ್ ರಾಜೇಂದ್ರನ್ “ಮೊಟ್ಟೆ ರಾಜೇಂದ್ರನ್ ಆಗಿದ್ದು ಹೇಗೆ?
ಸ್ಟಂಟ್ ಮಾಸ್ಟರ್ ಆಗಿ ತೆರೆಮರೆಯಲ್ಲಿದ್ದ ರಾಜೇಂದ್ರನ್ ನಾನ್ ಕಡವುಳ್ ತಮಿಳು ಸಿನಿಮಾದಲ್ಲಿ ವಿಲನ್ ಆಗಿ ಗುರುತಿಸಿಕೊಂಡಿದ್ದರೆ, “ಬಾಸ್ ಎಂಗಿರಾ ಭಾಸ್ಕರನ್” ಸಿನಿಮಾದಲ್ಲಿ ಹಾಸ್ಯ ನಟನಾಗಿ ಮಿಂಚಿದ್ದರು. ರಾಜೇಂದ್ರನ್ ಸ್ಟಂಟ್ ಮಾಸ್ಟರ್ ಗಳಾಗಿದ್ದ ಫೆಪ್ಸಿ ವಿಜಯನ್ ಮತ್ತು ಸ್ಟಂಟ್ ಶಿವ ಜತೆ ಸಹಾಯಕರಾಗಿ ಕೆಲಸ ಮಾಡಿದ್ದರು. ರಾಜೇಂದ್ರನ್ ತಂದೆ ಕೂಡಾ ಸ್ಟಂಟ್ ಮಾಸ್ಟರ್ ಆಗಿದ್ದರು. ಇವರು ಎಂಜಿಆರ್, ಶಿವಾಜಿ ಗಣೇಶನ್ ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಮಿಂಚಿದ್ದರು.
ರಾಜೇಂದ್ರನ್ ದಿನಂಪ್ರತಿ ಬೆಳಗ್ಗೆ 4ಗಂಟೆಗೆ ಎದ್ದು ದೇಹವನ್ನು ಹುರಿಗೊಳಿಸುತ್ತಿದ್ದರು. ಸ್ಟಂಟ್ ಮ್ಯಾನ್ ಆಗಿ ತಮಿಳು ಸಿನಿಮಾರಂಗದಲ್ಲಿ ಜನಪ್ರಿಯರಾಗಿದ್ದರು. ಮಲಯಾಳಂ ಸಿನಿಮಾಕ್ಕಾಗಿ ರಾಜೇಂದ್ರನ್ ಕಾಲ್ಪೆಟ್ಟಾ ನಗರದಲ್ಲಿ ಸ್ಟಂಟ್ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ದೃಶ್ಯದಲ್ಲಿ ನಟ ವಿಜಯರಾಘವನ್ ರಾಜೇಂದ್ರನ್ ಗೆ ಹೊಡೆದ ಪರಿಣಾಮ ಸೇತುವೆ ಮೇಲೆ ಬೀಳಬೇಕು. ಅಲ್ಲದೇ ನೀರಿನ ಕೆರೆಯೊಳಗೆ ಹಾರಬೇಕಾಗಿತ್ತು.
ಹೀಗೆ ಸ್ಟಂಟ್ ನಲ್ಲಿ ರಾಜೇಂದ್ರನ್ ಬೈಕ್ ಜತೆಗೆ ಕೆರೆಯೊಳಗೆ ಹಾರುವ ದೃಶ್ಯದ ಚಿತ್ರೀಕರಣ ಪೂರ್ಣಗೊಂಡ ನಂತರ …ಆ ಕೆರೆಯೊಳಗೆ ಇರುವ ನೀರು ಸಮೀಪದ ಫ್ಯಾಕ್ಟರಿಯ ಕೆಮಿಕಲ್ ತ್ಯಾಜ್ಯದಿಂದ ನೀರು ಸಂಪೂರ್ಣ ಕಲುಷಿತಗೊಂಡಿರುವುದು ಗೊತ್ತಾಗಿತ್ತು. ಆದರೆ ಅಷ್ಟರಲ್ಲಿ ಆಗಬೇಕಾದ ಹಾನಿ ಆಗಿಹೋಗಿತ್ತು…ಸ್ಟಂಟ್ ಮ್ಯಾನ್ ರಾಜೇಂದ್ರನ್ “ಅಲೋಪೆಸಿಯಾ ಯೂನಿವರ್ಸಲಿಸ್” ಎಂಬ ರೋಗಕ್ಕೆ ತುತ್ತಾಗಿದ್ದರು. ಅಲೋಪೆಸಿಯಾ ಅಂದರೆ ಕೂದಲು ಉದುರುವುದು. ಹೀಗೆ ರಾಜೇಂದ್ರನ್ ಅವರ ತಲೆಕೂದಲು, ಹುಬ್ಬು, ಕಣ್ಣಿನ ರೆಪ್ಪೆಯಲ್ಲಿರುವ ಕೂದಲುಗಳೆಲ್ಲಾ ಉದುರಿಹೋಗಿ ಬೋಳಾಗಿದ್ದವು..ಆ ಬಳಿಕ ಇವರು ಮೊಟ್ಟೆ ರಾಜೇಂದ್ರನ್ ಅಂತಲೇ ಆಗಿದ್ದು!