Advertisement

ವನಿತಾ ಟಿ20 ವಿಶ್ವಕಪ್‌ ದೊಡ್ಡ ಅಂತರದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ

04:40 PM Feb 14, 2023 | Team Udayavani |

ಪಾರ್ಲ್: ಟಿ20 ಉದ್ಘಾಟನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಎಡವಿದ್ದ ಆತಿಥೇಯ ದಕ್ಷಿಣ ಆಫ್ರಿಕಾ, ತನ್ನ ದ್ವಿತೀಯ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್‌ಗೆ 65 ರನ್ನುಗಳಿಂದ ಆಘಾತವಿಕ್ಕಿದೆ.

Advertisement

ಪಾರ್ಲ್ ನಲ್ಲಿ ಸೋಮವಾರ ರಾತ್ರಿ ನಡೆದ “ಎ’ ವಿಭಾಗದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 132 ರನ್‌ ಗಳಿಸಿದರೆ, ನ್ಯೂಜಿಲ್ಯಾಂಡ್‌ 18.1 ಓವರ್‌ಗಳಲ್ಲಿ 67 ರನ್ನಿಗೆ ಕುಸಿಯಿತು. ಇದು ನ್ಯೂಜಿಲ್ಯಾಂಡ್‌ಗೆ ಎದುರಾದ ಸತತ 2ನೇ ಸೋಲು. ಇದಕ್ಕೂ ಮೊದಲು ಅದು ಆಸ್ಟ್ರೇಲಿಯ ಕೈಯಲ್ಲಿ 97 ರನ್ನುಗಳ ಹೊಡೆತ ಅನುಭವಿಸಿತ್ತು.

ಕ್ಲೋ ಟ್ರಯಾನ್‌ ಅವರ ಆಲ್‌ರೌಂಡ್‌ ಪ್ರದರ್ಶನ ದಕ್ಷಿಣ ಆಫ್ರಿಕಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಬ್ಯಾಟಿಂಗ್‌ನಲ್ಲಿ 34 ಎಸೆತಗಳಿಂದ 40 ರನ್‌ ಮಾಡಿದ ಟ್ರಯಾನ್‌, ಬಳಿಕ 13 ರನ್ನಿಗೆ 2 ವಿಕೆಟ್‌ ಉರುಳಿಸಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿದು ಬಂತು. ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಟ್ರಯಾನ್‌ 30 ಲಕ್ಷ ರೂ. ಮೊತ್ತಕ್ಕೆ ಮುಂಬೈ ಇಂಡಿಯನ್ಸ್‌ ಪಾಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಜೇತ ತಂಡದ ಪರ ನೊಂಕುಲೆಲುಕು ಎಂಬ್ಲಾಬಾ 10ಕ್ಕೆ 3, ಮರಿಝಾನ್‌ ಕಾಪ್‌ 13 ರನ್ನಿಗೆ 2 ವಿಕೆಟ್‌ ಕಿತ್ತರು. 16 ರನ್‌ ಮಾಡಿದ ನಾಯಕಿ ಸೋಫಿ ಡಿವೈನ್‌ ಅವರದೇ ಕಿವೀಸ್‌ ಸರದಿಯ ಗರಿಷ್ಠ ಗಳಿಕೆ.

ಇಂಗ್ಲೆಂಡ್‌ಗೆ 2ನೇ ಜಯ
ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್‌ “ಬಿ’ ವಿಭಾಗದ ತನ್ನ ದ್ವಿತೀಯ ಪಂದ್ಯದಲ್ಲಿ ಐರ್ಲೆಂಡ್‌ಗೆ 4 ವಿಕೆಟ್‌ಗಳ ಸೋಲುಣಿಸಿತು. ಐರ್ಲೆಂಡ್‌ 18.2 ಓವರ್‌ಗಳಲ್ಲಿ 105ಕ್ಕೆ ಕುಸಿದರೆ, ಇಂಗ್ಲೆಂಡ್‌ 14.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 107 ರನ್‌ ಬಾರಿಸಿತು. ಇದು ಇಂಗ್ಲೆಂಡ್‌ಗೆ ಒಲಿದ ಸತತ 2ನೇ ಜಯ. ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸನ್ನು 7 ವಿಕೆಟ್‌ಗಳಿಂದ ಮಣಿಸಿತ್ತು.

Advertisement

ಇಂಗ್ಲೆಂಡ್‌ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರೆಂದರೆ ಸೋಫಿ ಎಕ್‌ಸ್ಟೋನ್‌ (13ಕ್ಕೆ 3), ಸಾರಾ ಗ್ಲೆನ್‌ (19ಕ್ಕೆ 3) ಮತ್ತು ಚಾರ್ಲೋಟ್‌ ಡೀನ್‌ (28ಕ್ಕೆ 2). ಐರ್ಲೆಂಡ್‌ ಪರ ಓಪನರ್‌ ಗ್ಯಾಬಿ ಲೂಯಿಸ್‌ 36 ರನ್‌ ಹೊಡೆದರು.
ಚೇಸಿಂಗ್‌ ವೇಳೆ ಇಂಗ್ಲೆಂಡ್‌ನ‌ ವನ್‌ಡೌನ್‌ ಆಟಗಾರ್ತಿ ಅಲೈಸ್‌ ಕ್ಯಾಪ್ಸಿ ಬಿರುಸಿನ ಆಟಕ್ಕಿಳಿದು 22 ಎಸೆತಗಳಿಂದ 51 ರನ್‌ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು.

ಲಂಕೆಗೂ ಅವಳಿ ಗೆಲುವು
ಇದಕ್ಕೂ ಮುನ್ನ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ, ಪ್ರಸಕ್ತ ವಿಶ್ವಕಪ್‌ನ ಮೊದಲೆರಡೂ ಪಂದ್ಯಗಳನ್ನು ಗೆದ್ದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು.

ಇದೊಂದು ಸಣ್ಣ ಮೊತ್ತದ ಸ್ಪರ್ಧೆಯಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 8 ವಿಕೆಟಿಗೆ 126 ರನ್‌ ಗಳಿಸಿದರೆ, ಶ್ರೀಲಂಕಾ 18.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 129 ರನ್‌ ಬಾರಿಸಿತು. ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಆತಿಥೇಯ ದಕ್ಷಿಣ ಆಫ್ರಿಕಾವನ್ನು 3 ರನ್ನುಗಳಿಂದ ರೋಚಕವಾಗಿ ಮಣಿಸಿತ್ತು.

ಒಶಾದಿ ರಣಸಿಂಘೆ (23ಕ್ಕೆ 3) ಮತ್ತು ಚಾಮರಿ ಅತಪಟ್ಟು (19ಕ್ಕೆ 2) ಸೇರಿಕೊಂಡು ಬಾಂಗ್ಲಾಕ್ಕೆ ಕಡಿವಾಣ ಹಾಕಿದರು. ಚೇಸಿಂಗ್‌ ವೇಳೆ ಓಪನರ್‌ ಹರ್ಷಿತಾ ಮಾಧವಿ (ಅಜೇಯ 69) ಮತ್ತು ನೀಲಾಕ್ಷಿ ಡಿ ಸಿಲ್ವ (ಅಜೇಯ 41) ಮುರಿಯದ 4ನೇ ವಿಕೆಟಿಗೆ 104 ರನ್‌ ಪೇರಿಸಿ ತಂಡವನ್ನು ದಡ ಮುಟ್ಟಿಸಿದರು. ಹರ್ಷಿತಾ ಮಾಧವಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next