Advertisement

ಬರದ ನಾಡಿಗಿಂದು ಅಧ್ಯಯನ ತಂಡ

04:00 PM Nov 17, 2018 | |

ರಾಯಚೂರು: ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂಥ ವೇಳೆ ಅಧ್ಯಯನಕ್ಕೆ ಬರುತ್ತಿರುವ ಕೇಂದ್ರ ತಂಡಕ್ಕೆ ಪರಿಸ್ಥಿತಿ ಅವಲೋಕಿಸಲು ಹೆಚ್ಚೇನು ಕಷ್ಟವಾಗಲಿಕ್ಕಿಲ್ಲ ಎನ್ನುತ್ತಿದ್ದಾರೆ ರೈತರು. ಬರೀ ಖುಷ್ಕಿ ಮಾತ್ರವಲ್ಲ ನೀರಾವರಿ ಪ್ರದೇಶದ ರೈತರಿಗೂ ಈ ಬಾರಿ ಮರ್ಮಾಘಾತವಾಗಿದೆ. ಮುಂಗಾರು ಮಳೆಗಾಗಿ
ಕಾದು ಸುಸ್ತಾಗಿದ್ದ ರೈತರು ದೇವರ ಮೇಲೆ ಭಾರ ಹಾಕಿ ಬಿತ್ತನೆ ಮಾಡಿದ್ದರು. ಅವಧಿ ಮೀರಿದರೂ ಮಳೆ ಬಾರದ ಕಾರಣ ಅದನ್ನು ಕೆಡಿಸಿ ಹಿಂಗಾರಿಗೆ ಕಾದು ಕುಳಿತರು. ನಂತರ ಹಿಂಗಾರು ಬಿತ್ತನೆ ಮಾಡಿದ ರೈತರಿಗೂ ಅದೇ ನಿರಾಸೆ ಎದುರಾಗಿದೆ. ಒಂದು ಮಳೆ ಬಂದರೂ ಬೆಳೆ ಉಳಿಯಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇಂಥ ವೇಳೆ ಬರ ಅಧ್ಯಯನ ಕೇಂದ್ರ ತಂಡ ಬರುತ್ತಿರುವುದು ರೈತರಿಗೆ ತುಸು ಸಮಾಧಾನ ತಂದಿದೆ.

Advertisement

ಎಷ್ಟು ಪ್ರಮಾಣದ ಬಿತ್ತನೆ?
ಈಗ ಕೇಂದ್ರ ತಂಡ ಬರುತ್ತಿರುವುದು ಮುಂಗಾರು ಬೆಳೆ ಹಾನಿ ಸಮೀಕ್ಷೆಗಾದರೂ ಅವರಿಗೆ ಹಿಂಗಾರು ಪರಿಸ್ಥಿತಿ ಕೂಡ ಮನವರಿಕೆ ಆಗಲಿದೆ. ಈ ವರ್ಷ 3.50 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶದಲ್ಲಿ 2.65 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ 85 ಸಾವಿರ ಹೆಕ್ಟೇರ್‌ ತೊಗರಿ, 65 ಸಾವಿರ ಹೆಕ್ಟೇರ್‌ ಹತ್ತಿ, 22 ಸಾವಿರ ಹೆಕ್ಟೇರ್‌ ಸಜ್ಜೆ, 6 ಸಾವಿರ ಹೆಕ್ಟೇರ್‌ ಸಜ್ಜೆ ಬಿತ್ತನೆ ಮಾಡಲಾಗಿತ್ತು. ಇನ್ನೂ 1.37 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿ ಇದ್ದರೂ ಜಲಾಶಯದಿಂದ ಸಕಾಲಕ್ಕೆ ನೀರು ಸಿಗದ ಕಾರಣ ಕೇವಲ  5
ಸಾವಿರ ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಆದರೆ, ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಬಹುತೇಕ ಬೆಳೆ ಮಳೆ ಇಲ್ಲದೇ ಒಣಗಿದ ಪರಿಣಾಮ ಶೇ.80ಕ್ಕಿಂತ ಹೆಚ್ಚು ಬೆಳೆಯನ್ನು ರೈತರೇ ನಾಶ ಮಾಡಿದ್ದರು. 3.94 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿಯಿದ್ದು, ಅದರಲ್ಲಿ 2.74 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಬಹುತೇಕ ರೈತರು ಜೋಳದ ಮೊರೆ ಹೋದರೆ, ನೀರಾವರಿ ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ ಬಿತ್ತನೆ ಮಾಡಲಾಗಿದೆ. ಆದರೆ, ಇಲ್ಲೂ ಅದೇ ಸ್ಥಿತಿ ಇದ್ದು, ಮಳೆ ಇಲ್ಲದೇ ಇಳುವರಿ ಹೆಚ್ಚಾಗುತ್ತಿಲ್ಲ.  ಟೆಲೆಂಡ್‌ಗೂ ಸಂಕಷ್ಟ

ಇದು ಕೇವಲ ಖುಷ್ಕಿ ರೈತರ ಪರಿಸ್ಥಿತಿಯಲ್ಲ ರಾಯಚೂರು ಮತ್ತು ಮಾನ್ವಿ ತಾಲೂಕಿನ ಕೊನೆ ಭಾಗದ ರೈತರ ಸ್ಥಿತಿಯೂ
ಭಿನ್ನವಾಗಿಲ್ಲ. ತುಂಗಭದ್ರಾ, ಆಲಮಟ್ಟಿ ಜಲಾಶಯಗಳನ್ನು ನಂಬಿ ರೈತರು ಭತ್ತ ನಾಟಿ ಮಾಡಿದ್ದಾರೆ. ಬೆಳೆ ಕೈಗೂಡುವ ಹೊತ್ತಲ್ಲಿ ನೀರು ಹರಿಸುತ್ತಿಲ್ಲ. ಇದರಿಂದ ಟಿಎಲ್‌ಬಿಸಿ ಮತ್ತು ಎನ್‌ಆರ್‌ಬಿಸಿ ಟೆಲೆಂಡ್‌ ರೈತರ ಸ್ಥಿತಿ ಶೋಚನೀಯವಾಗಿದೆ. ನೀರು ಹರಿಸುವಂತೆ ನಿತ್ಯ ಅಂಗಲಾಚುವ ಸ್ಥಿತಿ ಇದೆ. ಈ ಕಾರಣಕ್ಕೆ ನಮ್ಮ ಭಾಗವನ್ನೂ ಖುಷ್ಕಿ ಎಂದು ಪರಿಗಣಿಸಿ ಪರಿಹಾರ ಕಲ್ಪಿಸಿ ಎಂಬ ಒತ್ತಾಯ ಹೆಚ್ಚುತ್ತಿದೆ.

ಎಲ್ಲೆಲ್ಲಿ ಭೇಟಿ?
ಕೇಂದ್ರ ಸರಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಬ್‌ ಗೌತಮ್‌ ನೇತೃತ್ವದ ಬರ ಅಧ್ಯಯನ ತಂಡವು ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಜಿಲ್ಲೆಗೂ ಒಂದು ತಂಡ ಬರಲಿದೆ. ಒಟ್ಟು 10 ಸದಸ್ಯರಿರುವ ಈ ತಂಡ ಮೂರು ಉಪ ತಂಡಗಳಾಗಿ ರಾಜ್ಯದ ನಾನಾ ಭಾಗಗಳಿಗೆ ಭೇಟಿ ನೀಡಲಿದೆ. ಗೌತಮ್‌ ನೇತೃತ್ವದ ತಂಡವು ನ.17ರಂದು ರಾಯಚೂರು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಲಿದೆ. ತಾಲೂಕಿನ ಕುಕುನೂರು, ಮರ್ಚೆಡ್‌ ಹಾಗೂ ಮಾನ್ವಿ ತಾಲೂಕಿನ ಕಲ್ಲೂರು, ಮಾನ್ವಿ ಹಾಗೂ
ಹಿರೇಕೊಟೆಕಲ್‌ ಗ್ರಾಮಗಳಲ್ಲಿ ಅಧ್ಯಯನ ನಡೆಸಲಿದೆ. ನಂತರ ಬಳ್ಳಾರಿ ತೆರಳಿಲಿದೆ. 

ಕೇಂದ್ರ ಸರ್ಕಾರ ಬರ ಅಧ್ಯಯನದ ನಿಯಮಗಳನ್ನು ಬದಲಿಸಿದೆ. ಅಧ್ಯಯನ ತಂಡ ಸಮೀಕ್ಷೆಗೆ ಬರುವುದು ತಡವಾಗಿದೆ. ಆದರೆ, ಅಧಿಕಾರಿಗಳಿಗೆ ಜಿಲ್ಲೆಯ ವಸ್ತುಸ್ಥಿತಿಯನ್ನು ವಿವರಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲಿ ಉಂಟಾದ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. 
 ಡಾ| ಚೇತನಾ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next