Advertisement

ಓದಿನ ಬದುಕು ಶಂಭೋ ಶಂಕರ

10:05 AM Aug 21, 2019 | mahesh |

ಮಳೆಗಾಲ ಎಂದರೆ ಮಕ್ಕಳ ಮನಸ್ಸು ಗಾಂಧೀ ಬಜಾರು. ಶಾಲೆ ಮುಂದೆ ಹರಿಯುವ ಝರಿಯಲ್ಲಿ ಆಟವಾಡುವುದು, ಹೆಂಚುಗಳ ಅಂಚಿಂದ ಸುರಿಯುವ ನೀರ ಕೆಳಗೆ ಕುಣಿಯುವುದು, ಮಳೆ ಹೆಚ್ಚಾಗಲಿ, ಶಾಲೆಗೆ ರಜೆ ಸಿಗಲಿ ಅಂತ ಬೇಡುವ ತುಂಟ ಮಕ್ಕಳಿಗೆ ಈ ಬಾರಿ ಶಾಲೆಯ ಮುಂದಿನ ಝರಿ ಕೂಡ ಸಮುದ್ರವಾಗಿದ್ದು ಸುಳ್ಳಲ್ಲ. ಶಾಲೆಯ ಗಂಟೆಯೇ ಮುಳುಗಿ ಹೋಗುವಷ್ಟು ನೀರು ಬಂದು, ಮನೆಯಲ್ಲಿದ್ದ ಬ್ಯಾಗುಗಳನ್ನು ಹೊತ್ತೂಯ್ದಾಗ ಮಳೆ ಎಂಬ ಗೆಳೆಯನ ಇನ್ನೊಂದು ಮುಖ ಅನಾವರಣ ಗೊಂಡಿತು. ಈ ತನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಈ ಹುಡುಗರ ಕಥೆ ಕೇಳಿ.

Advertisement

ಮೆಲ್ಲಗೆ ಮಳೆ ಶುರುವಾಗಿ ಒಂದು ವಾರವಾಗಿತ್ತು. ಕೃಷ್ಣೆ, ತುಂಗಭದ್ರೆ, ಮಲಪ್ರಭೆ, ಘಟಪ್ರಭೆ, ವರದೆ, ಭೀಮೆಯರೆಲ್ಲ ಎಂದಿನಂತೆ ಶಾಂತವಾಗಿ ತಮ್ಮ ಪಾಡಿಗೆ ತಾವು ಹರಿಯುತ್ತಿದ್ದರು. ಹೀಗಾಗಿ ಶಾಲೆಯ ಮಕ್ಕಳ ಸಮವಸ್ತ್ರಗಳೇನೂ ಈ ವರ್ಷ ಕೊಳೆಯಾಗಿರಲಿಲ್ಲ. ಆದರೆ, ಶಂಭು ಮತ್ತು ಶಂಕರನಿಗೆ ನಿಜಕ್ಕೂ ಗೊತ್ತಿರಲಿಲ್ಲ, ತಮ್ಮ ಶಾಲೆಯ ಪಾಟೀ ಚೀಲಗಳು ಹೀಗೆ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತವೆ, ತಾವು ಮಾಡಿದ ಹೋಮ್‌ವರ್ಕ್‌ ಪುಸ್ತಕಗಳು ಮತ್ತೆ ಕೈಗೆ ಸಿಕ್ಕುವುದಿಲ್ಲ ಎಂದು.

8ನೇ ಕ್ಲಾಸಿನ ಈ ಹುಡುಗರು. ಈ ತನಕ ಇಂತಹದೊಂದು ರುದ್ರ ಭಯಂಕರ ಮಳೆಯನ್ನ ಎಂದೂ ಕಂಡಿದ್ದೇ ಇಲ್ಲ. ಹಿಂದಿನ ವರ್ಷ ಜೋರಾಗಿ ಮಳೆ ಬಂದಾಗ, ಅದರಲ್ಲಿ ಮಿಂದು, ಶಾಲೆಯ ಮುಂದಿನ ರಸ್ತೆಯ ತಗ್ಗಿನಲ್ಲಿ ಜಿಗಿದು, ಕೊಳೆ ನೀರನ್ನ ಸಾಕ್ಸ್‌ ವರೆಗೂ ಮೆತ್ತಿಸಿಕೊಂಡು ಮನೆಗೆ ನಗುತ್ತಲೇ ಬರುತ್ತಿದ್ದ ಈ ಇಬ್ಬರಿಗೂ ಈ ವರ್ಷದ ಆಶ್ಲೇಷ ಮಳೆಯ ಪ್ರವಾಹ ಘನಘೋರ ಅನುಭವವಾಗಿತ್ತು. ಶಾಲೆಯ ಗಂಟೆಯೇ ಮುಳುಗಿ ಹೋಗುವಷ್ಟು ನೀರು ಆವರಣಕ್ಕೆ ಹೊಕ್ಕಿದ್ದನ್ನು ನೋಡಿದ ಹುಡುಗರು ಬೆಚ್ಚಿ ಬಿದ್ದಿದ್ದರು.

ಕೃಷ್ಣೆಯೂ ಅಷ್ಟೇ: ಹಿಂದೆಂದೂ ಹೀಗೆ ರುದ್ರಾವತಾರ ತಾಳಿರಲಿಲ್ಲ. ನದಿಯಿಂದ ಮೂರು ಕಿ.ಮೀ.ದೂರದ ಕಬ್ಬಿನ ಗದ್ದೆಯ ಹೊಲದಲ್ಲಿ ಇರುವ ಮನೆಯ ತಾರಸಿ ವರೆಗೂ ನೀರು ಹೊಕ್ಕಾಗ ಬೆಳಗಿನ ಜಾವ ಏಳು ಗಂಟೆ. ಶಂಭು ಮತ್ತು ಶಂಕರ ಇಬ್ಬರೂ ಆಗಿನ್ನೂ ಕನಸುಗಳ ಕಾಣುತ್ತ ಸಕ್ಕರೆ ನಿದ್ರೆಯಲ್ಲಿದ್ದರು. ಇವರ ಅಪ್ಪ-ಅಮ್ಮ ಮತ್ತು ಅಜ್ಜ-ಅಜ್ಜಿಯರು ಮನೆಯಲ್ಲಿ ಬೆಲೆ ಬಾಳುವ ಸಾಮಾನುಗಳನ್ನು ಹೊತ್ತುಕೊಂಡು ತಾರಸಿ ಏರಲು ಆರಂಭಿಸಿದರು.

“ಏ ಏಳ್ರೂ, ಮನ್ಯಾಗ ನೀರ ಹೊಕ್ಕೊಂಡೇತಿ, ಎಪ್ಪಾ ಶಿವನ, ಏನ ಬಂತಪ್ಪಾ ‘ ಎಂದು ಆತಂಕದಿಂದ ಚೀರುತ್ತಿದ್ದ ಅಜ್ಜಿಯ ನಡುಗುವ ಧ್ವನಿಯನ್ನು ಕೇಳಿದ ಶಂಭು ತಕ್ಷಣ ಎದ್ದವನೇ ಮನೆಯ ಕಿಟಕಿಯಿಂದ ಆಚೆ ನೋಡಿದ. ಹೊಲದ ತುಂಬಾ ನೀರು. ನೀರು ನೋಡಿದ ತಕ್ಷಣವೇ ಅವನಿಗೊಮ್ಮ ಖುಷಿಯಾಯಿತು. ಉಧಾ.. ದೇಕಾಚಾ..ಉಧಾ ದೇಕಾಚಾ… (ನೀರು ನೋಡು ನೀರು ನೋಡು.. )ಎಂದು ಚೀರುತ್ತ ಶಂಕರನ ಮುಖದ ಮೇಲಿನ ಚಾದರ್‌ ಜಗ್ಗಿ ಒಗೆದ. ಅಟ್ಟದ ಮೇಲಿನ ಕೋಣೆಯಲ್ಲಿ ಮಲಗಿದ್ದರೂ, ಓದುವ ರೂಮಿನಲ್ಲಿದ್ದ ಇವರ ಪುಸ್ತಕದ ಚೀಲಗಳು ಆಗಲೇ ಕೃಷ್ಣಾರ್ಪಣಗೊಂಡಾಗಿತ್ತು.

Advertisement

ಶಂಭುವಿನ ಅವ್ವ ಇನ್ನೊಂದು ಕೋಣೆಯಿಂದ ಕಬ್ಬಿಣದ ಟ್ರಂಕ್‌ಅನ್ನು ಎತ್ತಿಕೊಂಡು ಅದರಲ್ಲಿ ದೇವರ ಮೇಲಿನ ಬಂಗಾರದ ಆಭರಣ, ತನ್ನ ಒಡವೆಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದರೆ, ಅಪ್ಪ ಹೊಲ ಉಳುವ ಎತ್ತು ಮತ್ತು ಮನೆಯಲ್ಲಿನ ಆಕಳುಗಳ ಹಗ್ಗ ಕತ್ತರಿಸಲು ಕುಡುಗೋಲು ಹುಡುಕುತ್ತಿದ್ದ. ಅಜ್ಜ ತನ್ನ ಆನಾಸಿನ್‌ ಗುಳಿಗೆ ಪೆಟ್ಟಿಗೆಯನ್ನ ಕಿಸೆಗೆ ಹಾಕಿದರೆ ಅಜ್ಜಿ ಮಜ್‌ ಚೇಸ್ಮಾ ಕುಟೆರೇ.. (ನನ್ನ ಕನ್ನಡಕ ಎಲ್ಲಿದೆ ?)ಎನ್ನುತ್ತಿದ್ದಳು. ಶಂಕರನ ಅಪ್ಪ ತಾರಸಿ ಏರಿ ನೋಡಿದ ಯಡೂರು ವೀರಭದ್ರನ ದೇವಸ್ಥಾನ ಸಂಪೂರ್ಣ ಮುಳುಗಿ ಬರೀ ಗೋಪುರ ಕಾಣುತ್ತಿತ್ತು. “ನಮ್ಮ ಕತೆ ಮುಗಿಯಿತು. ಎಲ್ಲಾರೂ ಓಡ್ರೀ’ ಎಂದು ಚೀರುತ್ತ ಕೆಳಗಿಳಿದಾಗ, ಶಂಭು ಮತ್ತು ಶಂಕರ ಇಬ್ಬರಿಗೂ ಆತಂಕ ಶುರುವಾಯಿತು.

“ಅಪ್ಪಾ, ನೀರಿಗ್ಯಾಕಿಷ್ಟು ಹೆದರ್ತಿ ? ಇಲ್ಲೇ ಆಟಾ ಆಡೋಣ’ ಅಂದಾ. ಅಪ್ಪನ ಮುಖ ಕೆಂಪೇರಿತು. ಅಷ್ಟೊತ್ತಿಗಾಗಲೇ ಮಾಂಜ್ರೆ ಸೇತುವೆ ಮುಳುಗಿ ಮುಖ್ಯರಸ್ತೆಯಲ್ಲಿ ಬಸ್‌ಗಳು ನಿಂತುಕೊಂಡಿದ್ದು ಕಾಣಿಸಿತು. ಇನ್ನೇನಿದ್ದರೂ ಕರುಶಿ ಗ್ರಾಮದ ಗುಡ್ಡ ಏರಬೇಕು. ಅಷ್ಟೊತ್ತಿಗಾಗಲೇ ಶಂಭು ಮತ್ತು ಶಂಕರ ಇಬ್ಬರಿಗೂ ಚಳಿ ಆರಂಭಗೊಂಡಿತ್ತು. ಹಾಗೂ ಹೀಗೂ ಮಾಡಿ ಎತ್ತರದ ಪ್ರದೇಶದಲ್ಲಿ ಏರಿ ಕುಳಿತರು, ಮಧ್ಯಾಹ್ನ 12ರ ಹೊತ್ತಿಗೆ ಗುಡ್ಡಕ್ಕೆ ಬಂದು ಮುತ್ತಿಟ್ಟಳು ಕೃಷ್ಣೆ. ಹೊತ್ತು ಮುಳುಗುವವರೆಗೂ ಅಲ್ಲಿಯೇ ಠಿಕಾಣಿ. ಕೊನೆಗೆ ದೂರದಲ್ಲಿ ಒಂದು ಬೋಟು ಕಾಣಿಸಿತು. ಅವರೆಲ್ಲ ಬರುವಷ್ಟೊತ್ತಿಗೆ ಶಂಭು-ಶಂಕರನಿಗೆ ಪ್ರವಾಹ ಅಂದ್ರೆ ಏನು ಎಂಬುದು ಗೊತ್ತಾಗಿ ಹೋಗಿತ್ತು.

ದಿನಾಲೂ ಬಸ್‌ನಲ್ಲಿ ಶಾಲೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇವತ್ತು ಬೋಟುಗಳು ಓಡಾಡುತ್ತಿರುವುದನ್ನು ನೋಡಿದ ಶಂಕರ, ಆಯಿ ನಾವು ದಿನಾ ಹಿಂಗೇ ಶಾಲೆಗೆ ಹೋಗುಥರಾ ಆಗಬೇಕಲ್ಲ ? ಎಂದು ಪ್ರಶ್ನಿಸಿದ. ಅವಳೊಮ್ಮೆ ಸಿಟ್ಟಿನಿಂದ ಶಂಕರನನ್ನ ನೋಡಿ,” ಏ ಚುಪ್ರೇ’ ಅಂದುÉ. ಗಂಜಿ ಕೇಂದ್ರದ ಬಾಗಿಲ ಬಳಿ ಬೋಟ್‌ ನಿಲ್ಲಿಸಿ, ಕಲ್ಯಾಣ ಮಂಟಪದ ಮೊದಲ ಮಹಡಿಗೆ ಏರುವಷ್ಟೊತ್ತಿಗೆ ರಾತ್ರಿಯಾಗಿತ್ತು. ಸತತ ಎರಡು ದಿನ ಗಂಜಿ ಕೇಂದ್ರದಲ್ಲಿ ಮಲಗುವ ಸ್ಥಿತಿ. ಕೇಂದ್ರದ ತುಂಬಾ ನೆರೆ ಸಂತ್ರಸ್ತರು. ಒಬ್ಬರಲ್ಲ ಇಬ್ಬರಲ್ಲ, ಸಾವಿರಾರು ಜನ. ಹೊರಗಡೆ ಧೋ ಎಂದು ಸುರಿಯುತ್ತಿರುವ ಮಳೆ, ಕೇಂದ್ರದ ಒಳಗೆ ಸಂತ್ರಸ್ತರ ಆಕ್ರಂದನ.

ಮೂರು ದಿನ ಕಳೆದರೂ ಮಳೆ ನಿಲ್ಲುತ್ತಿಲ್ಲ, ಹೊರಗಿನ ಜಿಲ್ಲೆಯ ಜನರು ಯಾರ್ಯಾರೋ ಬಂದು ಬಿಸ್ಕತ್‌ ಪಾಕೇಟ್‌ಗಳು, ಬ್ರೆಡ್‌ಗಳನ್ನು ಕೈಯಲ್ಲಿತ್ತರು. ಬಿಸಿ ಬಿಸಿಯಾಗಿ ರೊಟ್ಟಿ ತಿನ್ನುತ್ತಿದ್ದವರಿಗೆ ಅದೆಲ್ಲಿಂದಲೋ ಒಂದಿಷ್ಟು ತಂಗಳು ರೊಟ್ಟಿ, ಭಾಜಿ ಬಂದಿತ್ತು. ಊಟದ ತಟ್ಟೆಯಲ್ಲಿ ಮೊಸರು ಇರಲಿಲ್ಲ, ಚಟ್ನಿ ಕೇಳುವುದು ಹೇಗೆ ? ಬಿಸಿನೀರ ಸ್ನಾನವಂತೂ ಇಲ್ಲವೇ ಇಲ್ಲ. ತಮ್ಮಂತೆಯೇ ಬೇರೆ ಊರುಗಳಿಂದ ಬಂದಿದ್ದ ಶಾಲೆಯ ಮಕ್ಕಳು ಕ್ಷಣ ಮಾತ್ರದಲ್ಲಿ ಸ್ನೇಹಿತರಾಗಿ ಬಿಟ್ಟರು. ಎಲ್ಲ ಮಕ್ಕಳ ಬಾಯಲ್ಲೂ ಒಂದೇ ಮಾತು, ನಮ್ಮೂರಿಗೂ ಬಂದಿದೆ ನೀರು,, ನಮ್ಮೂರಿಗೆ ಬಂದಿದೆ ಬಹಳಷ್ಟು ನೀರು.

ಆಗ ಶಂಕರ ಪಕ್ಕದ ಊರಿನ ಹುಡುಗನನ್ನ ಕೇಳಿದ: “ನಿಮ್ಮ ಶಾಲೆ ಏನಾಗಿದೆ ? ಮಾಸ್ತರ್‌ ಹೇಗಿದ್ದಾರೆ ? ಮತ್ತೆ ಶಾಲೆಯಲ್ಲಿ ಇವತ್ತು ಪಾಠ ನಡೆಯಿತಾ ? ಯಪ್ಪಾ ನಮ್ಮ ಹೆಡ್‌ಮಾಸ್ತರ್‌ ಮೊದಲೇ ಕೆಟ್ಟವರು ? ಶಾಲೆಗೆ ಹೋಗದಿದ್ದರೆ ತಲೆ ಮೇಲೆ ಕಲ್ಲು ಹೊರೆಸುತ್ತಾರೆ. ಇಂತಹ ನೂರಾರು ಪ್ರಶ್ನೆಗಳನ್ನು ಹಾಕಿಕೊಳ್ಳುವಷ್ಟೊತ್ತಿಗೆ, ನಾಲ್ಕು ದಿನ ಶಾಲೆಗೆ ರಜೆ ಎನ್ನುವ ಮಾತು ಸಂತ್ರಸ್ತರೊಬ್ಬರ ಬಾಯಿಂದ ಪಠನವಾಯಿತು. ಆಗ ಮತ್ತೂಂದು ನಿಟ್ಟುಸಿರು, ಸಣ್ಣದೊಂದು ಕೇಕೆ..,”ನಮ್ಮ ಸಾಲಿ ಸೂಟಿ…ನಮ್ಮ ಸಾಲಿ ಸೂಟಿ.., ‘ ಪಕ್ಕದಲ್ಲಿದ್ದ ಆಯಿಗೆ ಮತ್ತೆ ಶಂಕರ ಕೇಳಿದ, “ನಮ್ಮ ಹೋಮ್‌ವರ್ಕ್‌ ಮಾಡಿದ್ದ ಪುಸ್ತಕಗಳನ್ನು ನೀವ್ಯಾಕೆ ಎತ್ತಿಕೊಳ್ಳಲಿಲ್ಲ. ಬರೀ ಬಂಗಾರ, ಬೆಳ್ಳಿ ಅಷ್ಟೇ ಎತ್ತಿಕೊಂಡು ಬಂದಿರಲ್ಲ ?’ ಎಂದು. ಶಂಕರನ ತಾಯಿ ಮುಗುಳ್ನಕ್ಕು ಹೇಳಿದಳು, “ನಿನ್ನ ಪಾಠಿ ಚೀಲ ಏನೂ ಆಗಿರೋದಿಲ್ಲ, ಹೆದರಬೇಡ, ನಾನಿದ್ದೀನಿ ಪುಟ್ಟಾ ‘ ಎಂದು. ಅಮ್ಮನ ಧೈರ್ಯದ ಮಾತಿಗೆ ಮಕ್ಕಳಿಗೆ ಉತ್ಸಾಹ ಇಮ್ಮಡಿಯಾಯಿತು. ಅಷ್ಟೊತ್ತಿಗೆ ಮತ್ತೆ ಯಾರೋ ಬಿಸಿ ಬಿಸಿ ಪಲಾವ್‌ ಮಾಡಿ ತಂದರು. ಎಲ್ಲಾ ಊಟಕ್ಕೆ ಬನ್ನಿ ಎಂದರು. ಶಂಕರನ ತಾಯಿಗೆ ಮನದಲ್ಲಿ ಮೂಡಿದ ಪ್ರಶ್ನೆ, ಇನ್ನೂ ಎಷ್ಟು ದಿನಾನಪ್ಪ ಹೀಗೆ ಬೇರೆಯವರಿಗೆ ತೊಂದರೆ ಕೊಡುವುದು ? “ದೇವರೇ, ಸಾಕಪ್ಪಾ ಸಾಕು ನಿಲ್ಲಿಸು ಮಳೆಯನ್ನ’ ಎಂದಳು ಮನದಲ್ಲಿ.

ಶಂಕರನಿಗೆ ಒಳಗೊಳಗೇ ಭಯ ಮಿಶ್ರಿತ ಖುಷಿ. ಶಾಲೆಗೇನೋ ರಜೆ. ಆದರೆ, ಆಮೇಲೆ ಓದೋಕೆ ಪುಸ್ತಕ ಸಿಗ್ತದ? ಯೂನಿಫಾರಂ ಹಾಕ್ಕೊಂಡು ಹೋಗ್ದೆ ಇದ್ದರೆ ಹೊಡೀತಾರ? ಒಂದೇ ದಿನದಲ್ಲಿ ಅಷ್ಟೂ ಪೋರ್ಷನ್‌ಗಳನ್ನು ಕಲೀಬೇಕಾ? ಗಂಜಿ ಕೇಂದ್ರದ ಮುಂದೆ ಹರಿಯುತ್ತಿದ್ದ ಸಣ್ಣ ಮಳೆ ನೀರ ಹರಿವೆಯಲ್ಲಿ ಪೇಪರ್‌ ಬೋಟು ಬಿಟ್ಟವನೇ ಹೀಗೆಲ್ಲ ಯೋಚಿಸುತ್ತಿದ್ದ.

ಮುಖ ಮಂಕಾಯಿತು. ಬೆಚ್ಚಿಬಿದ್ದವನಂತೆ, ಆಯೀ, ನಾನು ಹೋಮ್‌ ವರ್ಕ್‌ ಮಾಡಬೇಕು..ಅಂತ ಕನವರಿಸಿದ.
ಮತ್ತೆ ತಾಯಿ -“ನಾನಿದ್ದೀನಿ. ನಿಮ್ಮ ಮೇಷ್ಟ್ರಗೆ ಹೇಳ್ತೀನಿ’ ಅಂದಳು.
“ಅವರ ಕೋಪ ಕಡಿಮೆ ಆಗಿರ್ತದ? ಮಳೆ ಬಂದದಲ್ಲ’ ಅಂತ ಮತ್ತೆ ಕೇಳಿದ.
ಇಡೀ ಜಗತ್ತೇ ಸ್ಥಬ್ದವಾದ ಮೇಲೆ ಅವರದೇನು ಅನ್ನುವಂತೆ ತಾಯಿ ಮತ್ತೆ ನಕ್ಕಳು.

Advertisement

Udayavani is now on Telegram. Click here to join our channel and stay updated with the latest news.

Next