Advertisement

ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚು ಬರೀರಿ

10:18 AM Aug 27, 2019 | mahesh |

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ಇತ್ತ ಗಮನಿಸಿ, ಈ ವರ್ಷದಿಂದ ನಿಮ್ಮ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾಗಲಿದೆ! ಕಲಿಕಾ ಗುಣಮಟ್ಟ ಹಾಗೂ ವಿಶ್ಲೇಷಣಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

Advertisement

ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆಗೊಳಿಸಿ, ಅನ್ವಯ, ಕೌಶಲ್ಯ, ವಿವರಣಾತ್ಮಕ ಉತ್ತರ ಬರೆಯಬೇಕಾಗಿರುವ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಲಿದೆ. ಪ್ರಶ್ನೆ ಪತ್ರಿಕೆಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮುಖ್ಯಾಂಶ ಆಧರಿತ ಅಥವಾ ವಿಷಯಾಧಾರಿತವಾಗಿ ಅಂಕಗಳನ್ನು ಹಂಚಿಕೆ ಮಾಡಿ, ವಿಷಯಾಧಾರಿತ ಉದ್ದಿಷ್ಠಗಳು(ಒಬ್ಜೆಕ್ಟೀವ್‌), ಪಠ್ಯವಸ್ತು, ಪ್ರಶ್ನೆಗಳ ಸ್ವರೂಪ ಮೊದಲಾದ ಅಂಶಗಳಿಗೆ ಒತ್ತು ನೀಡಲು ನಿರ್ಧರಿಸಿದ್ದು, 2019-20ನೇ ಸಾಲಿನಿಂದಲೇ ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ.

ಪ್ರಯೋಜನವೇನು?: ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿ 40 ಪ್ರಶ್ನೆಗಳ ಬದಲಿಗೆ 38 ಪ್ರಶ್ನೆಗಳಿರುತ್ತವೆ. ಶಿಕ್ಷಕರು ಎಲ್ಲ ಅಧ್ಯಾಯಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಕಡ್ಡಾಯವಾಗಿರುತ್ತದೆ.

ಈ ಪದ್ಧತಿಯಲ್ಲಿ ಸಾಮೂಹಿಕ ನಕಲು ತಡೆಯಲು ಸಾಧ್ಯ. ಮಕ್ಕಳಲ್ಲಿ ತಾರ್ಕಿಕ ಚಿಂತನೆ ಹೆಚ್ಚಾಗುತ್ತದೆ. ದೀರ್ಘ‌ ಉತ್ತರದ ಪ್ರಶ್ನೆಗಳಿಂದ ಮಕ್ಕಳಲ್ಲಿ ಬರವಣಿಗೆ ಕೌಶಲ್ಯ ಮೂಡುವ ಜತೆಗೆ ಅಭಿವ್ಯಕ್ತಿ ಕೌಶಲ್ಯ ಬೆಳೆಯುತ್ತದೆ. ಶಿಕ್ಷಕರಲ್ಲಿ ಬೋಧನಾ ನಾವೀನ್ಯಕ್ಕೆ ಹೊಸ ತಂತ್ರಜ್ಞಾನ ಬಳಸಲು ಈ ವ್ಯವಸ್ಥೆ ರೂಪಕವಾಗಲಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.

ಅಂಕಗಳ ಹಂಚಿಕೆ : ಆರು ವಿಷಯಗಳಲ್ಲೂ ಜ್ಞಾನ ಗ್ರಹಣ ಮಟ್ಟ ಮತ್ತು ಪಠ್ಯ ವಿಷಯ ಆಧಾರಿತವಾಗಿ ಪ್ರತ್ಯೇಕ ಅಂಕಗಳ ಹಂಚಿಕೆ ಮಾಡಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯ ವಿಷಯಗಳಲ್ಲಿ ಸ್ಮರಣೆಗೆ 21 ಅಂಕ, ಅರ್ಥೈಸುವಿಕೆ 36 ಅಂಕ, ಅಭಿವ್ಯಕ್ತಿ 39 ಅಂಕ, ಮೆಚ್ಚುಗೆ ಹಾಗೂ ಬರವಣಿಗೆ ಕೌಶಲ್ಯಕ್ಕೆ 4 ಅಂಕವನ್ನು ಜ್ಞಾನ ಗ್ರಹಣ ಮಟ್ಟದಡಿ ಹಂಚಿಕೆ ಮಾಡಲಾಗಿದೆ. ಪಠ್ಯವಿಷಯವಾಧಾರವಾಗಿ ಗದ್ಯಕ್ಕೆ 28, ಪದ್ಯಕ್ಕೆ 30, ಪೂರಕ ಓದಿಗೆ 9, ವ್ಯಾಕರಣಕ್ಕೆ 29 ಹಾಗೂ ಅಪಠಿತಕ್ಕೆ 4 ಅಂಕ ಹಂಚಿಕೆ ಮಾಡಲಾಗಿದೆ. ಗಣಿತ, ವಿಜ್ಞಾನ ಹಾಗೂ ಸಮಾಜಕ್ಕೆ ವಿಷಯಾಧಾರಿತವಾಗಿ ಅಂಕಗಳ ಹಂಚಿಕೆ ಮಾಡಲಾಗಿದೆ. ಇಲ್ಲಿ ಕೌಶಲ್ಯಕ್ಕೆ ಆದ್ಯತೆ ನೀಡಲಾಗಿದೆ.

Advertisement

ಬದಲಾವಣೆಗೆ ಕಾರಣವೇನು?
ಕಳೆದ ಹಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗೆ ಆದ್ಯತೆ ಹೆಚ್ಚಿತ್ತು ಹಾಗೂ ವಿಸ್ತೃತವಾಗಿ ಬರೆಯಬೇಕಿರುವ ಪ್ರಶ್ನೆಗಳ ಸಂಖ್ಯೆ ತೀರ ಕಡಿಮೆ ಇತ್ತು. ಇದರಿಂದ ವಿದ್ಯಾರ್ಥಿಗಳ ಬರವಣೆಗೆ ಕೌಶಲ್ಯ ಕಡಿಮೆಯಾಗುತ್ತಿದೆ ಎಂಬ ದೂರು ಎಲ್ಲ ಕಡೆಗಳಿಂದಲೂ ಮಂಡಳಿಗೆ ಬಂದಿತ್ತು. ಅಲ್ಲದೆ, ಎಸ್ಸೆಸ್ಸೆಲ್ಸಿ ನಂತರ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿ ಶಿಕ್ಷಣದ ಕೋರ್ಸ್‌ಗಳಲ್ಲಿ ಬರವಣಿಗೆ ಹೆಚ್ಚಿರುವುದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಸ್ತೃತವಾಗಿ ಬರೆಯಲು ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ. ಬಹಳ ವರ್ಷಗಳ ಹಿಂದೆ ಐದು ಅಂಕದ ಪ್ರಶ್ನೆಗಳು ಇರುತ್ತಿದ್ದವು. ಈಗ ಒಂದು ಪ್ರಶ್ನೆ ಸೇರಿಸಲಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನು ಬದಲಾಗುತ್ತದೆ?
•ಬಹು ಆಯ್ಕೆ ಪ್ರಶ್ನೆಗಳು ಕಡಿಮೆಯಾಗುತ್ತವೆ. ಬದಲಿಗೆ, ಅನ್ವಯಿಕ, ಕೌಶಲ್ಯ, ವಿವರಣಾತ್ಮಕ ಉತ್ತರದ ಪ್ರಶ್ನೆಗಳಿಗೆ ಆದ್ಯತೆ. •40 ಪ್ರಶ್ನೆಗಳ ಬದಲಿಗೆ 38 ಪ್ರಶ್ನೆಗಳಿರುತ್ತವೆ.

•ಎರಡು ಅಂಕದ ಪ್ರಶ್ನೆಗಳ ಸಂಖ್ಯೆ 16ರಿಂದ 8ಕ್ಕೆ.
•ಮೂರು ಅಂಕದ ಪ್ರಶ್ನೆಗಳ ಸಂಖ್ಯೆ 6ರಿಂದ 9ಕ್ಕೆ.
•ಹೊಸದಾಗಿ ಐದು ಅಂಕದ ಪ್ರಶ್ನೆಯೊಂದು ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next