Advertisement

ಆರಂಭವಾಗದ ಶಾಲೆ : ಕಳೆ ಕೀಳುವ- ಹತ್ತಿ ಬಿಡಿಸುವ ಕೆಲಸಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು

04:55 PM Nov 14, 2020 | Suhan S |

ಜೇವರ್ಗಿ: ಕೋವಿಡ್ ಮಹಾಮಾರಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಿದ್ದು, ತರಗತಿ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಅಕ್ಷರಾಭ್ಯಾಸ ಮಾಡಬೇಕಿದ್ದ ಮಕ್ಕಳು ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

Advertisement

ಕೈಯಲ್ಲಿ ಪೆನ್ಸಿಲ್‌ ಹಿಡಿದು ಅ, ಆ, ಇ, ಈ ಬರೆಯಬೇಕಿದ್ದ ಮಕ್ಕಳು ಕೈಯಲ್ಲಿ ಕುರ್ಪಿ ಹಿಡಿದು ಕಳೆ ಕೀಳುತ್ತಿರುವ ದೃಶ್ಯ ಪಟ್ಟಣ ಸೇರಿದಂತೆ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಕಂಡುಬರುತ್ತಿದೆ. ಕೂಲಿ ಹಣದ ಆಸೆಗೆ ಖುದ್ದು ಪಾಲಕರೇ ಮಕ್ಕಳನ್ನು ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದಾರೆ.

ಕೋವಿಡ್ ಆತಂಕ ಇದ್ದರೂ ಟಂಟಂ, ಜೀಪ್‌, ಟ್ರ್ಯಾಕ್ಟರ್‌ಗಳಲ್ಲಿ ಕುರಿ ಹಿಂಡಿನಂತೆ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ನಿತ್ಯ ದಿನಬೆಳಗಾದರೆ ಸಾಕು ನೂರಾರು ವಿದ್ಯಾರ್ಥಿಗಳು ಕಳೆ ಕೀಳಲು, ಹತ್ತಿ ಬಿಡಿಸಲು ಹೋಗಿ ನೂರಾರು ರೂ. ತರುವ ಮೂಲಕ ಕುಟುಂಬಕ್ಕೆ ಆಸರೆಯಾಗುತ್ತಿದ್ದಾರೆ. ಆದರೆ, ಮಕ್ಕಳ ಭವಿಷ್ಯ ಕಮರಿ ಹೋಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಪೋಷಕರು ಬಡವರು. ಅವರು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಾರೆ. ಶಾಲೆ ನಡೆಯುತ್ತಿದ್ದಾಗ ಮಕ್ಕಳ ಊಟ ಶಾಲೆಗಳಲ್ಲಿ ನಡೆಯುತ್ತಿತ್ತು. ಮಕ್ಕಳು ಬೆಳಗ್ಗೆ ಶಾಲೆಗೆ ಹೋದರೆಮರಳುವಾಗ ಸಂಜೆಯಾಗುತ್ತಿತ್ತು. ಹೀಗಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿ, ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಈಗ ಮಕ್ಕಳು ಮನೆಯಲ್ಲಿಯೇ ಇರುವುದುಪೋಷಕರಿಗೆ ದೊಡ್ಡ ಸಮಸ್ಯೆಯಾಗಿದೆ. ಶಾಲೆಗಳು ಆರಂಭವಾಗದೇ ಇರುವುದರಿಂದ ಬಹುತೇಕ ಮಕ್ಕಳು ಓದುವುದನ್ನೇ ಮರೆತಿದ್ದಾರೆ.

ತಾಲೂಕಿನಲ್ಲಿ ನೂರಾರು ಜನ ತೆಲಂಗಾಣ, ಆಂಧ್ರ ಮೂಲದ ರೈತರು ಈ ಭಾಗದ ರೈತರ ಜಮೀನುಗಳನ್ನು ಲೀಜ್‌ ಪಡೆದು ಕೃಷಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ರೇವನೂರ, ಜನಿವಾರ, ಕೆಲ್ಲೂರ, ಹರವಾಳ, ಮುದಬಾಳ, ಅವರಾದ, ಹರನೂರ,ಮುದಬಾಳ.ಕೆ, ಮುದಬಾಳ ಬಿ, ಇಜೇರಿ, ಸಿಗರಥಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜಮೀನು ಲೀಜ್‌ ಪಡೆದು ಹತ್ತಿ ಹಾಗೂ ಮೆಣಸಿನಕಾಯಿ ಕೃಷಿ ಮಾಡಿದ್ದಾರೆ. ಹತ್ತಿ, ಮೆಣಸಿನಕಾಯಿ ಬಿಡಿಸಲು ಕೃಷಿ ಕೂಲಿಕಾರ್ಮಿಕರ ಸಮಸ್ಯೆ ಗಂಭಿರವಾಗಿ ಕಾಡುತ್ತಿದೆ.

Advertisement

ಕಾರ್ಮಿಕರ ಸಮಸ್ಯೆಯಿಂದ ದುಪ್ಪಟ್ಟು ಕೂಲಿ ಹಣದ ಆಮೀಷ ಒಡ್ಡಲಾಗುತ್ತಿದೆ. ಅವರು ಕೊಡುವ ಕೂಲಿ ಆಸೆಗೆ ಕೆಲ ಜನ ಪಾಲಕರು ತಮ್ಮ ಜೊತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಕೂಲಿ ಹಣದ ಜೊತೆಗೆ ಹೊಲಕ್ಕೆ ಹೋಗಿ ಕರೆದುಕೊಂಡು ಬರಲು ವಾಹನದ ವ್ಯವಸ್ಥೆ ಮಾಡಿದ್ದಾರೆ. ಶಾಲೆಗೆ ಹೋಗಿ ಮಕ್ಕಳು ಪುಸ್ತಕ ಹಿಡಿದು ಓದಬೇಕಾದ ಸಮಯದಲ್ಲಿ ಪಾಲಕರ ದುರಾಸೆಯಿಂದ ಮುಳ್ಳು, ಕೆಸರಿನಲ್ಲಿ ಕಳೆ ಕೀಳುವುದು, ಹತ್ತಿ, ಮೆಣಸಿನಕಾಯಿ ಬಿಡಿಸುವ ಕಾಯಕದಲ್ಲಿ ನಿರತರಾಗುವಂತಾಗಿದೆ.

 

ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next