ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ ಶಾಲಾ-ಕಾಲೇಜುಗಳಿಗೆ ಹೋಗಿ ಬರುತ್ತಿದ್ದು, ಅವರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರ ಕ್ಷೇತ್ರದ ಸಮಸ್ಯೆಯಾಗಿದೆ.
ಗ್ರಾಮಗಳ ಹಿರಿಯರು ಹಾಗೂ ವಿದ್ಯಾರ್ಥಿಗಳು ಅನೇಕ ಬಾರಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು, ಸಂಬಂಧಿಸಿದ ಇಲಾಖೆಗಳಿಗೆ ಮನವಿ ನೀಡಿದರೂ ಬಸ್ ವ್ಯವಸ್ಥೆ ಆಗಿಲ್ಲ. ಕೆಲವೊಮ್ಮೆ ಕಲಘಟಗಿ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಹೋಗುವ ಬಸ್ ಚಾಲಕರು ವಿದ್ಯಾರ್ಥಿಗಳ ದೊಡ್ಡ ಗುಂಪು ಕಂಡು ನಿಲ್ಲಿಸದೆ ಮುಂದೆ ಸಾಗುತ್ತಾರೆ. ಈ ಸಮಸ್ಯೆ ಕಳೆದ ಮೂರು ನಾಲ್ಕು ವರ್ಷದಿಂದ ಹಾಗೆಯೇ ಇದೆ. ಹೀಗಾಗಿ ಅತ್ಯಂತ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಬಂಧಿಸಿದವರು ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.
Advertisement
ಹೊಸಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಖಾರೇವಾಡ, ಬೈಲಂದೂರು, ದಾಂಡೇಲಿವಾಡ, ಹದ್ದಿನಸರ, ಬೈಲಂದೂರು (ಗೌಳಿವಾಡಾ), ಹೊಸಳ್ಳಿ (ಗೌಳಿವಾಡಾ) ಹಾಗೂ ಗಾಂವಠಾಣಾ ಮುಂತಾದ ಹಳ್ಳಿಗಳಿಂದ ವಿದ್ಯಾರ್ಥಿಗಳು ಯಲ್ಲಾಪುರ ಹಾಗೂ ಕಿರವತ್ತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಪೂ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ತೆರಳಲು ಬೆಳಗ್ಗೆ 8ರಿಂದ 9:30ರ ವರೆಗೆ ರಾಷ್ಟ್ರೀಯ ಹೆದ್ದಾರಿ ಅಂಚಿನ ಹೊಸಳ್ಳಿ ಗ್ರಾಮದ ಬಸ್ ತಂಗುದಾಣಕ್ಕೆ ಬರುತ್ತಾರೆ. ಪ್ರತಿದಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸಳ್ಳಿ ನಿಲ್ದಾಣದಲ್ಲಿ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ತರಗತಿ ಪ್ರಾರಂಭವಾಗುವ ಅವಧಿಯ ಪೂರ್ವ ತಲುಪಲು ಯಾವುದೇ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಯಲ್ಲಾಪುರ ಹಾಗೂ ಕಿರವತ್ತಿ ಶಾಲಾ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಶಾಲೆ-ಕಾಲೇಜುಗಳಿಗೆ ಎರಡರಿಂದ ಮೂರು ತಾಸು ವಿಳಂಬವಾಗಿಯೇ ತಲುಪಬೇಕಾಗುತ್ತದೆ. ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಂದ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ. • ಡೆವಿಡ್, ಹೊಸಳ್ಳಿ ಭಾಗದ ವಿದ್ಯಾರ್ಥಿ
•ನರಸಿಂಹ ಸಾತೊಡ್ಡಿ