ಕೋಲಾರ: ವಿದ್ಯಾರ್ಥಿಗಳಿಗೆ ತ್ವರಿತವಾಗಿ ಬಸ್‌ಪಾಸ್ ನೀಡಲು ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಆನ್‌ಲೈನ್ ನೋಂದಣಿ ಪ್ರಕ್ರಿಯೆಯಿಂದ ತೀವ್ರ ವಿಳಂಬವಾಗುತ್ತಿದ್ದು, ಪಾಸ್‌ಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ತಿಂಗಳ ತಡವಾಗಿ ಆರಂಭವಾದ ವಿದ್ಯಾರ್ಥಿ ಬಸ್‌ಪಾಸ್ ವಿತರಣೆ ಪ್ರಕ್ರಿಯೆ ಚುರುಕುಗೊಳಿಸಲು ಸಾರಿಗೆ ಸಂಸ್ಥೆಯು ಕೌಂಟರ್ ತೆರೆದಿದೆ. ಆದರೆ, ಆನ್‌ಲೈನ್ ನೋಂದಣಿ ಪ್ರಕ್ರಿಯೆ ನಂತರವೂ ಅರ್ಜಿ, ಪೇಪರ್ ದಾಖಲೆಗಳನ್ನು ಹೋಲಿಕೆ ಮಾಡಿ ಪಾಸ್‌ಗಳನ್ನು ನೀಡಬೇಕಾಗಿದೆ. ಈ ಪ್ರಕ್ರಿಯೆಗೆ ಸಾರಿಗೆ ಸಂಸ್ಥೆಯೇ ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ನೀಡುವುದಾಗಿ ಪ್ರಕಟಣೆ ಹೊರಡಿಸಿದೆ. ಆದರೆ, 7 ದಿನಗಳ ನಂತರವೂ ಬಹಳಷ್ಟು ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿ ಪಾಸುಗಳು ಸಿಕ್ಕಿಲ್ಲವೆಂಬ ದೂರುಗಳು ಕೇಳಿ ಬರುತ್ತಿವೆ.
ಆನ್‌ಲೈನ್ ನೋಂದಣಿ: ವಿದ್ಯಾರ್ಥಿಗಳು ಬಸ್ ಪಾಸ್ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿದ ರಸೀದಿ ಜೆರಾಕ್ಸ್, ಶಾಲಾ ಐಡಿ ಕಾರ್ಡ್, ಆಧಾರ ಕಾರ್ಡ್, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಓಟರ್ ಕಾರ್ಡ್, ಪಡಿತರ ಕಾರ್ಡ್ ಜೆರಾಕ್ಸ್ ಮತ್ತು ಭಾವಚಿತ್ರದೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಹೀಗೆ ಆನ್‌ಲೈನ್ ನೋಂದಣಿಯನ್ನು ಆಯಾ ಶಾಲಾ ಕಾಲೇಜುಗಳಲ್ಲಿರುವ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಳಸಿಕೊಂಡು ಮಾಡಲಿ ಎಂದು ಸಾರಿಗೆ ಸಂಸ್ಥೆ ನಿರೀಕ್ಷಿಸುತ್ತಿದೆ. ಆದರೆ, ಬಹುತೇಕ ಶಾಲಾ ಕಾಲೇಜುಗಳು ವಿದ್ಯಾರ್ಥಿ ಪಾಸು ಆನ್‌ಲೈನ್ ನೋಂದಣಿ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು 20ರಿಂದ 50 ರೂ. ವೆಚ್ಚ ಮಾಡಿ ಖಾಸಗಿಯವರಿಂದ ಆನ್‌ಲೈನ್ ನೋಂದಣಿ ಮಾಡಿಸಬೇಕಾಗಿದೆ.
Advertisement
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 52 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್ ಪಡೆದುಕೊಂಡಿದ್ದರು. ಈ ಸಾಲಿನಲ್ಲಿ ಶಾಲಾ ಕಾಲೇಜುಗಳು ಜೂ.1ರಿಂದಲೇ ಆರಂಭವಾದರೂ, ಬಸ್‌ಪಾಸ್ ನೀಡುವ ಪ್ರಕ್ರಿಯೆ ಜೂ.24 ರಿಂದ ಆರಂಭವಾಯಿತು.
Related Articles
Advertisement
ಮತ್ತೆ ಅರ್ಜಿ ಸಲ್ಲಿಸಿ: ಹೀಗೆ ನೋಂದಣಿ ಮಾಡಿಸಿದಾಕ್ಷಣ ವಿದ್ಯಾರ್ಥಿ ಪಾಸು ಸಿಗುವುದಿಲ್ಲ. ಆನ್‌ಲೈನ್ ನೋಂದಣಿಯ ಪ್ರತಿಗೆ ಮತ್ತದೇ ರೀತಿಯಲ್ಲಿ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಎರಡು ಭಾವಚಿತ್ರದೊಂದಿಗೆ ಲಗತ್ತಿಸಿ ಆಯಾ ಬಸ್ ನಿಲ್ದಾಣಗಳಲ್ಲಿ ತೆರೆದಿರುವ ಕೌಂಟರ್‌ಗಳಲ್ಲಿ ಶಾಲಾ ಕಾಲೇಜುಗಳ ಮೂಲಕವೇ ನೀಡಬೇಕಾಗಿದೆ.
ಪರಿಶೀಲನೆ: ಹೀಗೆ ಕೌಂಟರ್‌ಗಳಲ್ಲಿ ಸ್ವೀಕರಿಸಿದ ಅರ್ಜಿ ದಾಖಲಾತಿಗಳನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರತಿ ಅರ್ಜಿಯನ್ನು ಆನ್‌ಲೈನ್ ನೋಂದಣಿ ದಾಖಲಾತಿಗಳೊಂದಿಗೆ ಹೊಂದಾಣಿಕೆ ಮಾಡಿ ಪರಿಶೀಲಿಸಿ ನೋಡಿ ದೃಢಪಡಿಸಿಕೊಂಡು, ಆನಂತರ ಕೈಬರಹದಲ್ಲಿಯೇ ವಿದ್ಯಾರ್ಥಿ ಪಾಸುಗಳನ್ನು ಬರೆದು ನೀಡುತ್ತಿದ್ದಾರೆ. ಹೀಗೆ ನೀಡಿದ ಪಾಸ್‌ಗಳನ್ನು ಆಯಾ ಶಾಲಾ ಶಿಕ್ಷಕರೇ ಲ್ಯಾಮಿನೇಷನ್ ಮಾಡಿಕೊಂಡು ತೆಗೆದುಕೊಂಡು ಹೋಗಬೇಕಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆ ಆಗುವುದರೊಳಗಾಗಿ ಕನಿಷ್ಠ ಏಳೆಂಟು ದಿನ ಕಳೆಯುತ್ತದೆ.
ಉಚಿತ ಪ್ರಯಾಣವಿಲ್ಲ: ವಿದ್ಯಾರ್ಥಿ ಬಸ್ ಪಾಸ್ ಪಡೆದುಕೊಳ್ಳಲು ಜೂ.30ರವರೆಗೂ ಅಂತಿಮ ಗಡುವು ನೀಡಲಾಗಿತ್ತು. ಆದರೆ, ಆನಂತರ ಗಡುವು ವಿಸ್ತರಿಸಲು ಸಾರಿಗೆ ಸಂಸ್ಥೆಯು ಮುಂದಾಗಿಲ್ಲ. ಇದರಿಂದ ಪ್ರಸ್ತುತ ವಿದ್ಯಾರ್ಥಿಗಳು ಹಣ ಕೊಟ್ಟು ಟಿಕೆಟ್ ಖರೀದಿಸಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳು ಪಾಸು ಪಡೆಯಲು ವಿಳಂಬವಾಗಿರುವುದನ್ನು ಗಮನಿಸಿರುವ ರಾಜ್ಯದ ನಗರ ಸಾರಿಗೆ ಸಂಸ್ಥೆಗಳು ಜು.15 ರವರೆಗೂ ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿದೆ. ಆದರೆ, ಸಾರಿಗೆ ಸಂಸ್ಥೆಯ ಮಾತ್ರ ವಿದ್ಯಾರ್ಥಿಗಳ ಪಾಸು ವಿಳಂಬವಾಗುತ್ತಿರುವುದನ್ನು ಗಮನಿಸಿದರೂಗಡುವು ವಿಸ್ತರಿಸಲು ಮುಂದಾಗಿಲ್ಲ.
ವಿಳಾಸ ಬದಲಾಗಿದ್ದರೂ ಪಾಸು ಸಿಗುತ್ತಿಲ್ಲ: ವಿದ್ಯಾರ್ಥಿಗಳು ಆನ್‌ಲೈನ್ ಹಾಗೂ ಅರ್ಜಿಯ ಮೂಲಕ ಸಲ್ಲಿಸಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಹಾಗೂ ಪ್ರಸ್ತುತ ವ್ಯಾಸಂಗ ಮಾಡುತ್ತಿರುವಾಗ ನೀಡಿರುವ ವಿಳಾಸಕ್ಕೆ ತಾಳೆಯಾಗದಿದ್ದರೆ ಅಂತ ಅರ್ಜಿಗಳನ್ನು ವಿದ್ಯಾರ್ಥಿ ಪಾಸುಗಳಿಂದ ನಿರಾಕರಿಸಲಾಗುತ್ತಿದೆ. ಇದರಿಂದಾಗಿ ತಾವು ಆಧಾರ್ ಕಾರ್ಡ್ ಮಾಡಿಸಿಕೊಂಡ ಜಾಗದಿಂದ ಬೇರೆ ಜಾಗಕ್ಕೆ ಬದಲಾಗಿದ್ದರೆ, ಅಂತ ವಿದ್ಯಾರ್ಥಿಗಳು ಬಸ್‌ಪಾಸ್ ಮಾಡಿಸಿಕೊಳ್ಳಲು ವಾಸಸ್ಥಳದ ದೃಢೀಕರಣ ಪತ್ರ, ಪೋಷಕರಿಂದ ನ್ಯಾಯಾಲಯದ ಮುಂದೆ ಮಾಡಿರುವ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಪೋಷಕರು ಪಂಚಾಯತ್ ಅಥವಾ ಸ್ಥಳೀಯ ಸಂಸ್ಥೆಗಳಿಗೆ ದಿನಗಟ್ಟಲೇ ಸುತ್ತಾಡಿ, ಅಫಿಡವಿಟ್ ಮಾಡಿಸಿಕೊಳ್ಳಲು ನೂರಾರು ರೂ. ವೆಚ್ಚ ಮಾಡಬೇಕಾಗಿದೆ. 150 ರೂ. ರಿಯಾಯಿತಿ ದರದ ಪಾಸು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ವಾಸಸ್ಥಳದ ದೃಢೀಕರಣ ಪತ್ರ, ಅಫಿಡವಿಟ್‌ಗಳಿಗೆ ಐನೂರಕ್ಕಿಂತಲೂ ಹೆಚ್ಚು ಹಣದ ಹೊರೆ ಬೀಳುತ್ತಿದೆ.
ಇನ್ನು ವಿಳಂಬ ಸಾಧ್ಯತೆ: ಸದ್ಯಕ್ಕೆ ಒಂದರಿಂದ ಹತ್ತರವರೆಗಿನ ಶಾಲೆಗಳು ಹಾಗೂ ದ್ವಿತೀಯ ಪಿಯುಸಿ ಕಾಲೇಜುಗಳು ಮಾತ್ರವೇ ಆರಂಭವಾಗಿದ್ದು, ಸದ್ಯಕ್ಕೆ ಈ ವಿದ್ಯಾರ್ಥಿಗಳು ಮಾತ್ರವೇ ವಿದ್ಯಾರ್ಥಿ ಪಾಸು ಮಾಡಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಉನ್ನತ ಶಿಕ್ಷಣ ಮತ್ತು ಪದವಿ ಕಾಲೇಜುಗಳು ಆರಂಭವಾಗಲಿದ್ದು, ಸಾರಿಗೆ ಸಂಸ್ಥೆಯು ಇದೇ ರೀತಿಯ ವಿಳಂಬಗತಿಯ ಪ್ರಕ್ರಿಯೆ ನಡೆಸುತ್ತಿದ್ದರೆ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವುದು ಖಚಿತ ಎಂದು ವಿದ್ಯಾರ್ಥಿ ಮುಖಂಡರು ದೂರುತ್ತಾರೆ.
ಹೀಗೆ ಮಾಡಿದರೆ ಅನುಕೂಲ:
ಸಾರಿಗೆ ಸಂಸ್ಥೆಯು ಆನ್‌ಲೈನ್ ಮೂಲಕವೇ ಅರ್ಜಿ ಪಡೆದುಕೊಂಡು ಅದನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಿ, ಶಾಲಾ ಪ್ರವೇಶಾತಿ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ, ಕೈಬರಹದ ಪಾಸುಗಳಿಗೆ ಬದಲಾಗಿ ಕಂಪ್ಯೂಟರ್ ಮುದ್ರಿತ ವಿದ್ಯಾರ್ಥಿ ಪಾಸುಗಳನ್ನು ನೀಡಿದರೆ ತ್ವರಿತಗತಿಯಲ್ಲಿ ಪಾಸು ವಿತರಿಸಲು ಸಾಧ್ಯವಾಗುತ್ತದೆ. ಆನ್‌ಲೈನ್ ಜೊತೆಗೆ, ಅರ್ಜಿ ದಾಖಲೆಗಳನ್ನು ಪಡೆದು ಅವುಗಳನ್ನು ಪರಿಶೀಲಿಸಿ ಪಾಸು ನೀಡುವುದು ವಿದ್ಯಾರ್ಥಿಗಳಿಗೂ ಹೊರೆ, ವಿಳಂಬಕ್ಕೂ ಕಾರಣವಾಗುತ್ತಿದೆ.
● ಕೆ.ಎಸ್.ಗಣೇಶ್