ಕಾನ್ಪುರ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ವಯಸ್ಕವಿದ್ಯಾರ್ಥಿಗೆ ಹಣ ಪಾವತಿ ಮಾಡದ ಕಾರಣಕ್ಕೆ ಕೆಲ ಹಿರಿಯ ವಿದ್ಯಾರ್ಥಿಗಳು ಚಿತ್ರಹಿಂಸೆ ನೀಡಿ ಥಳಿಸಿದ್ದಾರೆ. ಘಟನೆಯ ಕೆಲವು ವಿಡಿಯೋಗಳು ವೈರಲ್ ಆದ ನಂತರ ಪೊಲೀಸರು ಸೋಮವಾರ ಆರು ಜನರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತನಯ್ ಚೌರಾಸಿಯಾ, ಅಭಿಷೇಕ್ ಕುಮಾರ್ ವರ್ಮ, ಯೋಗೇಶ್ ವಿಶ್ವಕರ್ಮ, ಸಂಜೀವ್ ಕುಮಾರ್ ಯಾದವ್, ಹರಗೋವಿಂದ್ ತಿವಾರಿ ಮತ್ತು ಶಿವ ತ್ರಿಪಾಠಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಹದಿಹರೆಯದ ವಿದ್ಯಾರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳಿಗೆ ಸೇರಲು ಇಟಾವಾದಿಂದ ಕಾನ್ಪುರಕ್ಕೆ ಬಂದಿದ್ದ. ಕೋಚಿಂಗ್ ಸೆಂಟರ್ ನಲ್ಲಿದ್ದ ಕೆಲ ಹಿರಿಯರ ಸಂಪರ್ಕಕ್ಕೆ ಬಂದ ಅವರು ಆನ್ ಲೈನ್ ಬೆಟ್ಟಿಂಗ್ ಆಟ ಆಡಲು 20 ಸಾವಿರ ರೂ.ನೀಡಿದ್ದಾರೆ. ವಿದ್ಯಾರ್ಥಿ ಹಣ ಕಳೆದುಕೊಂಡ ನಂತರ ಹಿರಿಯ ವಿದ್ಯಾರ್ಥಿಗಳು 2 ಲಕ್ಷ ರೂ. ಕೊಡುವಂತೆ ಒತ್ತಡ ಹೇರಿದ್ದಾರೆ. ವಿದ್ಯಾರ್ಥಿ ಹಣ ಹಿಂತಿರುಗಿಸಲು ಸಾಧ್ಯವಾಗದಿದ್ದಾಗ ಕೊಠಡಿಯೊಳಗೆ ಬೀಗ ಹಾಕಿ ಪದೇ ಪದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಆರೋಪಿಗಳು ಈ ಕೃತ್ಯವನ್ನು ಚಿತ್ರೀಕರಿಸಿದ್ದು, ವಿದ್ಯಾರ್ಥಿಯ ಖಾಸಗಿ ಅಂಗಗಗಳಿಗೆ ಒಳಗೊಂಡಂತೆ ಒದೆಯುವುದು ಮತ್ತು ಹೊಡೆಯುವುದನ್ನು ವಿಡಿಯೋಗಳಲ್ಲಿ ಕಂಡು ಬಂದಿದೆ. ಆರೋಪಿಯೊಬ್ಬ ವಿದ್ಯಾರ್ಥಿಯ ತಲೆಗೂದಲನ್ನು ಸುಡಲು ಯತ್ನಿಸಿದ್ದು, ಇನ್ನೊಂದು ವಿಡಿಯೋದಲ್ಲಿ ಬಟ್ಟೆ ಬಿಚ್ಚಿಸಿ ವಿದ್ಯಾರ್ಥಿಯ ಖಾಸಗಿ ಅಂಗಕ್ಕೆ ಇಟ್ಟಿಗೆಯಿಂದ ಹೊಡೆಯುವುದು ಕಂಡುಬಂದಿದೆ.
ಹಲವು ದಿನಗಳ ಕಾಲ ಹಲ್ಲೆ ಮುಂದುವರಿದಿದ್ದು, ನಂತರ ವಿದ್ಯಾರ್ಥಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಇಟಾವಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಎಚ್ಚರಿಕೆ ನೀಡಿ ಪೊಲೀಸರು ಆರೋಪಿಗಳನ್ನು ಬಿಟ್ಟು ಬಿಟ್ಟರು ಎಂದು ವಿದ್ಯಾರ್ಥಿಯ ಕುಟುಂಬಸ್ಥರು ತಿಳಿಸಿದ್ದಾರೆ.
ಮೇ 4 ರಂದು ಕೃತ್ಯದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕಾನ್ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.