ಜಗಳೂರು: ತಾಲೂಕಿನ ಮೇದಿಗಿನಕೆರೆ ಸಮೀಪದ ಮೊರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯೊಬ್ಬನ ದೇಹ ಶಾಲೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮ್ಮ ಮಗನ ಸಾವು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿ ಮೃತ ವಿದ್ಯಾರ್ಥಿಯ ಪೋಷಕರು ವಸತಿ ಶಾಲೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ದೇವೇಂದ್ರಪ್ಪ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸುನೀಲ್ (13 ) ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿ. ತಾಲೂಕಿನ ಸಾಗಲಗಟ್ಟೆ ಗ್ರಾಮದ ಸುರೇಶ್ ಮತ್ತು ಕವಿತಾ ದಂಪತಿಯ ಪುತ್ರನಾಗಿದ್ದ ಈತ ಮಂಗಳವಾರ ಸಂಜೆ ಶಾಲೆಯ ಶೌಚಾಲಯದ ಕೊಠಡಿಯಲ್ಲಿ ಪ್ಲಾಸ್ಟಿಕ್ ವೈರಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ನಿಲಯ ಮೇಲ್ವಿಚಾರಕರು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದರು. ಆದರೆ ಮಾರ್ಗ ಮಧ್ಯೆ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದರು.
ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್‌ಪಿ ರಿಷ್ಯಂತ್ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್ ಮಂಗಳವಾರ ರಾತ್ರಿ ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನನ್ನ ಮಗ ಚೆನ್ನಾಗಿ ಓದುತ್ತಿದ್ದ. ಮನೆಯಲ್ಲಿ ಎರಡು ದಿನ ಇರು ಎಂದರೆ ಇಲ್ಲವ್ವ, ನಾನು ಓದಬೇಕು ಎಂದು ಸೋಮವಾರ ಶಾಲೆಗೆ ಹೋದವನು ಇಂದು ಹೆಣವಾಗಿ ಬಂದಿದ್ದಾನೆ ಎಂದು ಸುನೀಲ್ ತಾಯಿ ಕವಿತಾ ಕಣ್ಣೀರಾದರು. ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ಪರಿಶಿಷ್ಟ ಕಲ್ಯಾಣಾಧಿಕಾರಿ ಮಂಜ ನಾಯ್ಕ , ತಾಲೂಕು
ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ತಾಲೂಕು ಪರಿಶಿಷ್ಟ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮೃತರ ಕುಟುಂಬಕ್ಕೆ 2.50 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.
ವಿದ್ಯಾರ್ಥಿ ಸಾವಿನ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಪ್ರಾಚಾರ್ಯೆ ಮತ್ತು ನಿಲಯ ಮೇಲ್ವಿಚಾರಕರನ್ನು ಅಮಾನತು ಮಾಡಲಾಗುವುದು.
ಶಿವಾನಂದ, ಸಮಾಜಕಲ್ಯಾಣ ಇಲಾಖೆ
ಉಪನಿರ್ದೇಶಕ