Advertisement

ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ

12:56 PM Jun 05, 2018 | Team Udayavani |

ಲಿಂಗಸುಗೂರು: ಸುತ್ತಲೂ ಗಲೀಜು, ಹಂದಿಗಳ ತಾಣ, ಮುಳ್ಳಿನ ಗಿಡಗಳು, ತಿಪ್ಪೆಯಂತ ಪ್ರದೇಶ ಇದು ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯದಲ್ಲಿ ಕಂಡುಬರುವ ದೃಶ್ಯ. ಇಂತಹ ಅನಾರೋಗ್ಯಕರ ವಾತಾವರಣದಲ್ಲಿ ವಾಸಿಸುವ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

Advertisement

ಪಟ್ಟಣದ ಕಲುಬುರಗಿ ರಸ್ತೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯವಿದೆ. ವಸತಿ ನಿಲಯದಲ್ಲಿ ಕುಡಿಯುವ ನೀರು, ಶುಚಿಯಾದ ಆಹಾರ, ಶೌಚಾಲಯದ ಕೊರತೆ, ಕ್ರಿಮಿಕೀಟಗಳ ಕಾಟ ಹೀಗೆ ಹತ್ತಾರು ಸಮಸ್ಯೆಗಳು ಮನೆ ಮಾಡಿವೆ.

ಪಿಯುಸಿಯಿಂದ ಪದವಿವರೆಗೂ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಮೂಲ ಸೌಲಭ್ಯಗಳ ಕೊರತೆ ಇದೆ. ಹಲವು ಬಾರಿ ವಿದ್ಯಾರ್ಥಿಗಳು ವಾರ್ಡನ್‌ ಹಾಗೂ ತಾಲೂಕಾ ಅಧಿ ಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ನಡೆಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಶುದ್ಧೀಕರಣ ಘಟಕ ತೆರೆಯಲಾಗಿತ್ತು. ಅದು ಕೆಟ್ಟು ನಿಂತು ವರ್ಷಗಳೇ ಕಳೆದಿವೆ. ಶೌಚಾಲಯದ ಕೊರತೆ, ಊಟದ ಕೋಣೆಯಿಲ್ಲದೇ ಮಲಗುವ ಕೋಣೆಯಲ್ಲಿ ಊಟ ಮಾಡುವಂತಹ ಸ್ಥಿತಿ ಇದೆ. ಕಟ್ಟಡದಲ್ಲಿ ನೆಲಕ್ಕೆ ಹಾಸಲಾಗಿರುವ ಬಂಡೆಗಳು ಮೇಲಕ್ಕೆ ಎದ್ದಿವೆ. ಇದರಿಂದ ಅನೇಕ ಕ್ರಿಮಿಕೀಟಗಳ ಕಾಟ ಹೇಳತೀರದಾಗಿದೆ. ಹೆಗ್ಗಣಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಬಿಲಗಳು ಕಾಣುತ್ತಿವೆ. ವಿದ್ಯಾರ್ಥಿಗಳ ಬಟ್ಟೆ, ಪುಸ್ತಕ ಹೆಗ್ಗಣಕ್ಕೆ ಆಹಾರವಾಗುತ್ತಿವೆ. ಇಡೀ ವಸತಿ ನಿಲಯವೇ ದುರ್ನಾತದಿಂದ ಕೂಡಿದೆ. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳುವುದೇ ವಿದ್ಯಾರ್ಥಿಗಳ ದಿನ ನಿತ್ಯ ಕಾಯಕವಾಗಿದೆ. ಅಡುಗೆ ಕೋಣೆಯ ಸುತ್ತಮುತ್ತ ಗಲೀಜಿನಿಂದ ಕೂಡಿದ್ದು ಹಂದಿಗಳ ವಾಸಸ್ಥಾನವಾಗಿದೆ. 

ಕಲುಷಿತ ವಾತಾವರಣದಲ್ಲಿ ವಿದ್ಯಾರ್ಥಿಗಳು ದಿನ ಕಳೆಯುವಂತಾಗಿದೆ. ಈ ಕುರಿತು ನಿಲಯದ ಮೇಲ್ವಿಚಾರಕನ
ಗಮನಕ್ಕೆ ತಂದರೆ ಇದ್ದುದರಲ್ಲೇ ಅನುಸರಿಸಿಕೊಂಡು ಹೋಗಿ ಎಂದು ಗದರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.

Advertisement

ವಸತಿ ನಿಲಯಕ್ಕೆ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಅಥವಾ ಸಹಾಯಕ ಆಯುಕ್ತರಾಗಲಿ ಈವರೆಗೂ ಭೇಟಿ ನೀಡಿ ವಸತಿ ನಿಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿಲ್ಲ ಎಂಬುದು ವಿಪರ್ಯಾಸದ
ಸಂಗತಿಯಾಗಿದೆ.

ಅಧಿಕಾರಿ ನಾಟ್‌ ರಿಚೇಬಲ್‌ ವಸತಿ ನಿಲಯ ಸಮಸ್ಯೆಗಳ ಕುರಿತು ಬಿಸಿಎಂ ಅಧಿಕಾರಿ ರವಿ ಅವರನ್ನು ಫೋನ್‌ ಮೂಲಕ ಸಂಪರ್ಕಿಸಿದರೆ ಕೆಲವೊಮ್ಮೆ ಸ್ವಿಚ್‌ ಆಫ್‌, ಮತ್ತೆ ಕೆಲವೊಮ್ಮೆ ನಾಟ್‌ ರಿಚೇಬಲ್‌ ಆಗಿದ್ದರೆ ಮತ್ತೆ ಕೆಲವೊಮ್ಮೆ ಸಂಪರ್ಕ ಸಾಧಿಸಿದರೂ ಫೋನ್‌ ಕರೆ ಸ್ವೀಕರಿಸಲಿಲ್ಲ. ಇತ್ತೀಚೆಗೆ ಶಾಸಕ ಡಿ.ಎಸ್‌. ಹೂಲಗೇರಿ ಅವರು ವಸತಿ ನಿಲಯಕ್ಕೆ ಭೇಟಿ ನೀಡಿದಾಗಲೂ ಅಧಿಕಾರಿ ಸ್ಥಳದಲ್ಲಿರಲಿಲ್ಲ. ಇದು ವಸತಿ ನಿಲಯಗಳ ಸಮಸ್ಯೆಗಳನ್ನು ಪರಿಹರಿಸಬೇಕಾದ ಅಧಿಕಾರಿಯ ಕಾರ್ಯವೈಖರಿಯಾಗಿದೆ. 

ವಸತಿ ನಿಲಯದಲ್ಲಿ ಶೌಚಾಲಯ, ಸ್ನಾನ ಗೃಹ, ಕುಡಿಯುವ ನೀರು ಸೇರಿ ಅನೇಕ ಕೊರತೆಗಳ ಬಗ್ಗೆ ವಾರ್ಡನ್‌ ಕ್ರಮ ಕೈಗೊಳ್ಳುವ ಬದಲು ನಮ್ಮ ಮೇಲೆ ಹರಿಹಾಯ್ದು ನಮ್ಮ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ಹೆದರಿಕೆಯಿಂದ ನಾವು ತಾಲೂಕಾಧಿಕಾರಿಗೆ ದೂರು ನೀಡಿಲ್ಲ. 
 ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು

ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next