Advertisement

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

03:27 PM Dec 08, 2023 | Team Udayavani |

ಸುವರ್ಣ ವಿಧಾನಸೌಧ (ಬೆಳಗಾವಿ): ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನಲ್ಲೂ ಮುಖ್ಯ. ಶಾಲಾ ಶಿಕ್ಷಣದೊಂದಿಗೆ ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ಪದ್ದತಿಗಳನ್ನು ಅರ್ಥೈಸಿಕೊಳ್ಳಬೇಕು. ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ ಎಂದು ಕಾರ್ಮಿಕ ಇಲಾಖೆ   ಸಚಿವರಾದ ಸಂತೋಷ ಎಸ್. ಲಾಡ್ ಹೇಳಿದರು.

Advertisement

ವಿಧಾನಮಂಡಲ ಅಧಿವೇಶನ ವೀಕ್ಷಣೆಗಾಗಿ ತಮ್ಮ ಮತಕ್ಷೇತ್ರ ಕಲಘಟಗಿಯ ಸರಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಎರಡು ಸದನಗಳ ಕಾರ್ಯಕಲಾಪ ಪರಿಚಯಿಸಿ, ವಿಧಾನಮಂಡಲ ಅಧಿವೇಶನ ಮತ್ತು ಸುವರ್ಣಸೌಧ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಮನುಷ್ಯ ರಾಜಕೀಯ ಜೀವಿ. ಬಲಿಷ್ಠ ಭಾರತ ನಿರ್ಮಾಣ ಆಗಬೇಕಾದರೆ ಇಂದಿನ ಯುವ ಸಮುದಾಯ ಪ್ರಾಮಾಣಿಕವಾದ ಸಮಾಜ ಸೇವೆಯ ದೀಕ್ಷೆ ತೊಡಬೇಕು. ರಾಜಕೀಯ ಪಕ್ಷ, ಆಡಳಿತ, ಸರ್ಕಾರ, ಮಂತ್ರಿಮಂಡಳ, ಅಧಿಕಾರಶಾಹಿ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರು ಮತದಾನ, ಚುನಾವಣೆ ಮುಂತಾದ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಇದರಿಂದ ಉತ್ತಮ ಜನಪ್ರತಿನಿಧಿ, ಉತ್ತಮ ಸರ್ಕಾರ ಹೊಂದಲು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ವಿಧಾನ ಮಂಡಲ ಅಧಿವೇಶನ ನಮ್ಮ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮಹತ್ವ, ಕಾಯ್ದೆ, ಕಾನೂನುಗಳ ರಚನೆ, ಜನಪ್ರತಿನಿಧಿಗಳ ಹಕ್ಕು, ಕರ್ತವ್ಯಗಳನ್ನು ಪರಿಚಯಿಸುತ್ತದೆ. ನನ್ನ ಕ್ಷೇತ್ರದ ನೂರಾರು ಜನ ಅಧಿವೇಶನ ವೀಕ್ಷಣೆಗಾಗಿ ಬೆಳಗಾವಿ ಸುವರ್ಣಸೌಧಕ್ಕೆ ಆಗಿಮಿಸುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸಲು ನಮ್ಮ ಸಿಬ್ಬಂದಿಗಳ ಸಹಾಯ, ಮಕ್ಕಳಿಗೆ ಉಪಹಾರ, ವಿಧಾನ ಮಂಡಲ ಗ್ರಂಥಾಲಯ ವೀಕ್ಷಣೆಗೆ ಅವಕಾಶ ಮಾಡಿದ್ದೇನೆ ಎಂದರು.

Advertisement

ಕಾಲೇಜು ವಿದ್ಯಾರ್ಥಿಗಳು ಬೆಳಿಗ್ಗೆ ಸುವರ್ಣಸೌಧಕ್ಕೆ ಆಗಮಿಸಿದ ತಕ್ಷಣ, ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ವಿಶೇಷ ಕೊಠಡಿಯಲ್ಲಿ ಸಂವಿಧಾನದ ಮೌಲ್ಯಗಳು, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಪಡೆದುಕೊಂಡರು ಮತ್ತು ಈ ಕುರಿತು ಪ್ರಸ್ತುತ ಪಡಿಸಿದ ಸಾಕ್ಷ್ಯಚಿತ್ರ ವೀಕ್ಷಿಸಿದರು.

ನಂತರ ವಿಧಾನಸಭೆ ಕಲಾಪ, ವಿಧಾನ ಪರಿಷತ್ತ ಕಲಾಪ ವೀಕ್ಷಿಸಿದರು. ವಿಧಾನ ಮಂಡಲ ಗ್ರಂಥಾಲಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next