ಮಹಾನಗರ : ಸವಾಲುಗಳನ್ನು ಎದುರಿಸುವ ಮನೋಭಾವವನ್ನು ತಮ್ಮಲ್ಲಿ ಬೆಳೆಸಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳು ಸೂಕ್ಷ್ಮಗ್ರಾಹಿ, ಜ್ಞಾನದಾಹಿಗಳಾಗಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಅವರು ಹೇಳಿದರು.
ಅವರು ನಗರದ ಮಹೇಶ್ ಪದವಿ ಪೂರ್ವ ಕಾಲೇಜು ನೂತನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಹೃದಯ ಮತ್ತು ಆತ್ಮವನ್ನು ಪೂರ್ಣವಾಗಿ ತೊಡಗಿಸಿಕೊಂಡಾಗ ಮತ್ತು ತ್ಯಾಗದ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಕಟ್ಟಡದ ಮೆಟ್ಟಿಲನ್ನು ಮೇಲೇರುವಂತೆ ಗುಣಮಟ್ಟದ ಶಿಕ್ಷಣದ ಅವಕಾಶ ಸಿಕ್ಕಿದಾಗ ಸದುಪಯೋಗ ಪಡಿಸಿಕೊಂಡು ಯಶಸ್ಸಿನ ಮೆಟ್ಟಿಲುಗಳನ್ನು ಏರಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ, ಪ್ರಾಂಶುಪಾಲ ಡಾ| ನವೀನ್ ಶೆಟ್ಟಿ ಕೆ. ಮಾತನಾಡಿ, ಎಲ್ಲರಿಗೂ ಸಮಾನವಾದ ಪ್ರತಿಭೆ ಇರುವುದಿಲ್ಲ. ಆದರೆ, ಎಲ್ಲರಿಗೂ ತಮ್ಮಲ್ಲಿರುವ ಪ್ರತಿಭೆ ಯನ್ನು ಬೆಳೆಸಲು ಸಮಾನವಾದ ಅವಕಾಶ ಇದೆ. ಯಾವ ವಿದ್ಯಾರ್ಥಿಗಳ ಮನಸ್ಸು ಮುಕ್ತವಾಗಿರುತ್ತದೆಯೋ ಅವರು ಅವಕಾಶ ವನ್ನು ಸದುಪಯೋಗ ಪಡಿಸಿಕೊಂಡು ಎತ್ತರಕ್ಕೆ ಬೆಳೆಯುತ್ತಾರೆ. ಕಾಲೇಜು ಪಾಠ ಪ್ರವಚನದೊಂದಿಗೆ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಯೋಜನೆಯಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ನಾಯ ಕತ್ವದ ಗುಣವನ್ನು ಬೆಳೆಸುವುದರ ಜತೆಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ| ಅನಿಲ್ ಮಸ್ಕರೇನಸ್ ವಿದ್ಯಾರ್ಥಿ ನಾಯಕ ರಿಗೆ ಪ್ರಮಾಣ ವಚನ ಬೋಧಿಸಿದರು.
ರುಬೇನ್ ಡಿ’ಸೋಜಾ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ನಾಯಕ ನಿಧೀಶ್ ರಾವ್ ವಂದಿಸಿದರು. ಸುಮತಿ ಪೈ ಹಾಗೂ ಯಶಸ್ವಿನಿ ನಿರೂಪಿಸಿದರು.